ಶ್ರೀನಗರ/ಹೊಸದಿಲ್ಲಿ: ದೇಶವಿಡೀ ದೀಪದ ಹಬ್ಬದ ಖುಷಿಯಲ್ಲಿ ತೇಲುತ್ತಿದ್ದರೆ, ಕಣಿವೆ ರಾಜ್ಯದಲ್ಲಿ ಉಗ್ರರು ಅಟ್ಟಹಾಸ ಮುಂದುವರಿಸಿದ್ದಾರೆ. ಶ್ರೀನಗರದಲ್ಲಿ ಶನಿವಾರ ಭದ್ರತಾ ಪಡೆಯ ಯೋಧರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಗ್ರೆನೇಡ್ ದಾಳಿ ನಡೆಸಿದ್ದು, 6 ಮಂದಿ ಯೋಧರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಶನಿವಾರ ಸಂಜೆ 6.50ರ ವೇಳೆಗೆ ಈ ಘಟನೆ ನಡೆದಿದೆ. ಶ್ರೀನಗರದ ಕರನ್ ನಗರ್ ಪ್ರದೇಶದಲ್ಲಿ ಸಿಆರ್‌ಪಿಎಫ್ ಯೋಧರ ತಂಡದತ್ತ ಗ್ರೆನೇಡ್ ಎಸೆದ ಉಗ್ರರು, ಏಕಾಏಕಿ ಗುಂಡಿನ ದಾಳಿಯನ್ನೂ ಶುರುವಿಟ್ಟುಕೊಂಡಿದ್ದಾರೆ. ದಿಢೀರ್ ಗ್ರೆನೇಡ್ ಸ್ಫೋಟಗೊಂಡ ಕಾರಣ ಆ ಪ್ರದೇಶದಲ್ಲಿದ್ದವರು ಗೊಂದಲಕ್ಕೀಡಾಗಿ ಓಡತೊಡಗಿ ದ್ದಾರೆ. ಕೂಡಲೇ ಭದ್ರತಾ ಪಡೆ ಯೋಧರು ಪ್ರತಿ ದಾಳಿ ಆರಂಭಿಸಿದ್ದಾರೆ. 6 ಯೋಧರಿಗೆ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಭಿವೃದ್ಧಿಗೆ ಪೂರಕ: ಜಮ್ಮು ಮತ್ತು ಕಾಶ್ಮೀರದ ಸ್ಥಿತಿಗತಿ ಕುರಿತು ಶನಿವಾರ ಮಾತನಾಡಿರುವ ಕೇಂದ್ರ ಸಚಿವ ಅಮಿತ್ ಶಾ, 370ನೇ ವಿಧಿ ರದ್ದತಿಯು ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಅವಕಾಶ ಕಲ್ಪಿಸಿತು ಎಂದಿದ್ದಾರೆ. ವಿಶೇಷ ಸ್ಥಾನಮಾನ ವಾಪಸ್ ಪಡೆದರೆ ರಕ್ತಪಾತವಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ, ಅಂಥದ್ದೇನೂ ನಡೆದಿಲ್ಲ. ಒಂದೇ ಒಂದು ಬುಲೆಟ್ ಕೂಡ ಫೈರ್ ಆಗಿಲ್ಲ. ಒಂದೇ ಒಂದು ಸಾವೂ ಸಂಭವಿಸಿಲ್ಲ ಎಂದಿದ್ದಾರೆ. ಇನ್ನೊಂದೆಡೆ, ಮುಂದಿನ ವಾರ ಅಸ್ತಿತ್ವಕ್ಕೆ ಬರಲಿರುವ ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಗೆ ಸಮಾನ ಸೌಲಭ್ಯಗಳು ಹಾಗೂ ಅನುಕೂಲತೆಗಳನ್ನು ಕಲ್ಪಿಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಭರವಸೆ ನೀಡಿದ್ದಾರೆ.
ಯುದ್ಧಕ್ಕೆ ಪ್ರಚೋದನೆ ಎಂದ ಪಾಕ್: ಇದೇ ವೇಳೆ, “ಪಿಒಕೆಯನ್ನು ಉಗ್ರರು ನಿಯಂತ್ರಿಸುತ್ತಿದ್ದಾರೆಯೇ ಹೊರತು ಪಾಕ್ ಸರಕಾರವಲ್ಲ’ ಎಂಬ ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಅವರ ಶುಕ್ರವಾರದ ಹೇಳಿಕೆಗೆ ಪಾಕ್ ಸೇನೆ ಶನಿವಾರ ಪ್ರತಿಕ್ರಿಯೆ ನೀಡಿದೆ. ಭಾರತದ ಸೇನಾ ಮುಖ್ಯಸ್ಥರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಪಾಕ್ ಸೇನೆ ಆರೋಪಿಸಿದೆ.
ಒಳನುಸುಳುವಿಕೆ 5 ವರ್ಷಗಳಲ್ಲೇ ಅಧಿಕ
2018ರಲ್ಲಿ ಪಾಕ್ ಮೂಲದ ಉಗ್ರ ಸಂಘಟನೆಗಳು ಭಾರತದೊಳಕ್ಕೆ ನುಸುಳಲು 328 ಬಾರಿ ಪ್ರಯತ್ನಿಸಿದ್ದು, ಈ ಪೈಕಿ 143 ಯತ್ನಗಳು ಸಫಲವಾಗಿವೆ. ಹಿಂದಿನ 5 ವರ್ಷಗಳಿಗೆ ಹೋಲಿಸಿದರೆ ಉಗ್ರರ ಒಳನುಸುಳುವಿಕೆಯು ಕಳೆದ ವರ್ಷವೇ ಅಧಿಕ ಎಂದು ಕೇಂದ್ರ ಗೃಹ ಸಚಿವಾಲಯದ ವರದಿ ತಿಳಿಸಿದೆ. ಅಷ್ಟೇ ಅಲ್ಲ, ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ 257 ಭಯೋತ್ಪಾದಕರು ಮತ್ತು 91 ಮಂದಿ ಭದ್ರತಾ ಸಿಬಂದಿ ಮೃತಪಟ್ಟಿದ್ದು, ಇದು ಕೂಡ 5 ವರ್ಷಗಳಲ್ಲೇ ಅತ್ಯಧಿಕ ಎಂದೂ ಹೇಳಲಾಗಿದೆ. ಈ ಅವಧಿಯಲ್ಲಿ 9 ಮಂದಿ ನಾಗರಿಕರು ಕೂಡ ಸಾವಿಗೀಡಾಗಿದ್ದಾರೆ ಎಂದಿದೆ ವರದಿ. 2017ರಲ್ಲಿ 419 ನುಸುಳು ಯತ್ನಗಳು ನಡೆದಿದ್ದು, 136 ಯಶಸ್ವಿಯಾಗಿವೆ. 2016ರಲ್ಲಿ 371 ಯತ್ನ ನಡೆದಿದ್ದು, 119 ಸಫಲವಾಗಿವೆ ಎಂದೂ ವರದಿ ಹೇಳಿದೆ.