Advertisement

ಹಾವೇರಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆರು ನಿರ್ಣಯ

05:33 PM Jan 08, 2023 | Team Udayavani |

ಹಾವೇರಿ: ಸಂಪ್ರದಾಯದಂತೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಕೂಡ ಒಟ್ಟು ಆರು ನಿರ್ಣಯಗಳನ್ನು ತೆಗೆದುಕೊಂಡು ಇವುಗಳನ್ನು ಕೂಡಲೇ ಈಡೇರಿಸುವಂತೆ ಸಾಹಿತ್ಯ ಸಮ್ಮೇಳನದ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಯಿತು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಅವರು ನಿರ್ಣಯ ಮಂಡಿಸಿದರು. ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರು ಅನುಮೋದಿಸಿದರು.

ಮೊದಲನೇದಾಗಿ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೆಯಕ ಕೂಡಲೇ ಸುಗ್ರೀವಾಜ್ಞೆ ಮೂಲಕ ಕಾನೂನಿನ ರೂಪ ಪಡೆದು ಶಿಕ್ಷಣ, ನ್ಯಾಯಾಂಗ, ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕು.

ಇನ್ನು ಎರಡನೇದಾಗಿ ಕರ್ನಾಟಕ ಮಹಾರಾಷ್ಟ‌ ಗಡಿ ವಿವಾದದ ಸಂಬಂಧ ಇರುವ ಮಹಾಜನ ವರದಿ ಈಗಾಗಲೇ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿದ್ದು, ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಆ ಹಿನ್ನೆಲೆಯಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿನ ಮಾರ್ಗದರ್ಶನದಂತೆ ಸೂಕ್ತ ಕ್ರಮವನ್ನು ವಿಳಂಬವಿಲ್ಲದೇ ಕೈಗೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಲಾಯಿತು.

ಮೂರನೇದಾಗಿ ಕನ್ನಡಕ್ಕಾಗಿ ಹೊರಾಡಿದ ಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಲಾಯಿತು.

Advertisement

ನಾಲ್ಕನೇಯದಾಗಿ ವಿಧಾನದ ಎಂಟನೇ ಪರಿಚ್ಛೇದದ ಅನ್ವಯ ಎಲ್ಲಾ ಪ್ರಾಂತೀಯ ಭಾಷೆಗಳನ್ನು ಸಮಾನ ಎಂದು ಗುರುತಿಸಿರುವ ಹಿನ್ನೆಲೆ ಈ ಪಟ್ಟಿಯಲ್ಲಿರುವ 22 ಭಾಷೆಗಳಲ್ಲಿರುವ ಕನ್ನಡ ಭಾಷೆ ಕೂಡ ಕರ್ನಾಟಕದ ಸಾರ್ವಭೌಮ ಭಾಷೆಯಾಗಿದೆ. ಇದರ ಮೇಲಿನ ಹಿಂದಿ ಅಥವಾ ಇನ್ಯಾವುದೇ ಭಾಷೆಯ ಆಕ್ರಮಣ ಹಾಗೂ ಹೇರಿಕೆಯನ್ನು ಈ ಸಮ್ಮೇಳನ ತೀವ್ರವಾಗಿ ಖಂಡಿಸುತ್ತದೆ ಎಂಬ ನಿರ್ಣಯ ಕೈಗೊಳ್ಳಲಾಯಿತು.

ಐದನೇದಾಗಿ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲಿ ಆಯೋಜಿಸಬೇಕೆನ್ನುವ ನಿರ್ಣಯವನ್ನು ರಾಜ್ಯ ಸರ್ಕಾರ ಈಗಾಗಲೇ ತೆಗೆದುಕೊಂಡಿದ್ದು, ಈ ಸಮ್ಮೇಳನವನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಆಯೋಜಿಸಬೇಕು. ನಿಯೋಜಿತ ಸಮ್ಮೇಳನದ ಸಂಬಂಧ ಸರ್ಕಾರ ನಡೆಸುವ ಸಭೆಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಈ ಸಮ್ಮೇಳನದಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.

ಆರನೇದಾಗಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಸ್ವಾಗತ ಸಮಿತಿ ಹಾಗೂ ವಿವಿಧ ಸಮಿತಿಗಳ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ, ಜಿಲ್ಲಾ ಆಡಳಿತ ಹಾಗೂ ಎಲ್ಲ ಕಾರ್ಯಕರ್ತರಿಗೂ ಮತ್ತು ಆತಿಥ್ಯವನ್ನು ನೀಡಿದ, ಪ್ರೀತಿತೋರಿದ ಹಾವೇರಿಯ ಸಮಸ್ತ ಜನತೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next