Advertisement

ಆರು ಕಿಮೀ ದೂರದಲ್ಲಿ ಕಾರ್ಯಸೌಧ; ಜನರ ಪರದಾಟ

01:05 PM Mar 24, 2022 | Team Udayavani |

ಆಳಂದ: ಒಂದೇ ಸೂರಿನಡಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪಟ್ಟಣ ಹೊರವಲಯದ ಆಳಂದ-ಕಲಬುರಗಿ ರಸ್ತೆಯ ಆರು ಕಿ.ಮೀ ದೂರದಲ್ಲಿ ಕಾರ್ಯಾರಂಭಿಸಿದ ತಾಲೂಕು ಆಡಳಿತ ಸೌಧಕ್ಕೆ ಹೋಗಿ ಬರಲು ಜನತೆ ದಿನನಿತ್ಯ ಪರದಾಡುವಂತಾಗಿದೆ.

Advertisement

ಮಾ.1ರಿಂದ ಆಡಳಿತ ಸೌಧದಲ್ಲಿ ಕಂದಾಯ, ಸಮಾಜ ಕಲ್ಯಾಣ, ಭೂಮಾಪನ ಕಚೇರಿಗಳು ಈಗಾಗಲೇ ಕಾರ್ಯಾರಂಭಿಸಿವೆ. ಈ ಕಚೇರಿಗೆ ಸಂಬಂಧಿತ ಕೆಲಸ ಕಾರ್ಯಗಳಿಗೆ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನರು ಹೋಗಿ ಬರಲು ಪರದಾಡುತ್ತಿದ್ದಾರೆ.

ಬಸ್‌ ನಿಲ್ದಾಣದಿಂದ ಅಟೋಗಳಿಗೆ ಹೋಗಿ ಬರಲು 100ರೂ. ಬೇಕು. ಇಲ್ಲಿಗೆ ಖಾಸಗಿ ವಾಹನ ಅಥವಾ ಸಾರಿಗೆ ಬಸ್‌ ಸೌಕರ್ಯವಿಲ್ಲ. ಇದರಿಂದ ಜನಸಾಮಾನ್ಯರು ಕಚೇರಿಗೆ ಹೋಗಳು ಹಣ ಖರ್ಚು ಮಾಡಲೇಬೇಕಾಗುತ್ತದೆ. ಏ.1ರಿಂದ ಕಂದಾಯ ಇಲಾಖೆಗೆ ಸಂಬಂಧಿತ ಭೂ ನೋಂದಣಿ ಇಲಾಖೆ, ಖಜಾನೆ ಮತ್ತು ನೆಮ್ಮದಿ ಕೇಂದ್ರ, ಬಿಇಒ, ಬಿಸಿಎಂ, ರೇಷ್ಮೆ ಇಲಾಖೆ ಕಚೇರಿಯೂ ಪಟ್ಟಣದಿಂದ ಆಡಳಿತ ಸೌಧಕ್ಕೆ ಸ್ಥಳಾಂತರಗೊಳ್ಳಲಿವೆ. ಹೀಗಾಗಿ ನಿತ್ಯ ನೂರಾರು ಮಂದಿ ಜನಸಾಮಾನ್ಯರು ಓಡಾಡಲು ಕಸರತ್ತು ಮಾಡಬೇಕಾಗಿದ್ದು ಅನಿವಾರ್ಯವಾಗಿದೆ.

ಬುಧವಾರ ಪಟ್ಟಣದಿಂದ 20ಕಿ.ಮೀ. ಅಂತರದಲ್ಲಿರುವ ಗಡಿಗ್ರಾಮನಂದಗೂರದ ಹಿರಿಯ ಜೀವಿ ಕಮಲಾಬಾಯಿ ಬಲಭೀಮ ಬಿರಾಜದಾರ ಎನ್ನುವಾಕೆ ತನ್ನ ಆಧಾರ ಕಾರ್ಡ್‌ ತಿದ್ದುಪಡಿಗಾಗಿ ಕಾರ್ಯಸೌಧಕ್ಕೆ ಬರಲು ಇಬ್ಬರು ಮೊಮ್ಮಕ್ಕಳೊಂದಿಗೆ ಬಸ್‌ ನಿಲ್ದಾಣದಿಂದ ಅಟೋದಲ್ಲಿ ಬಂದು ಹೋಗಲು 300ರೂ. ಖರ್ಚಾಯಿತು. ಆದರೆ ಕೆಲಸವೂ ಆಗಲಿಲ್ಲ. ಮತ್ತೆ ನಾಳೆ ಬರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದಳು.

ಮತ್ತೊಂದೆಡೆ ಕೊರಳ್ಳಿ ಗ್ರಾಮದ ಶಂಕರ ಕಂಬಾರ ಎನ್ನುವ ರೈತ ಬಂದುಹೋಗಲು ನೂರು ರೂಪಾಯಿ ಖರ್ಚಾಗುತ್ತಿದೆ. ಹಲವು ಬಾರಿ ಓಡಾಡಿದರೆ ಕೆಲಸವಾಗುತ್ತದೆ ಎಂದು ಅಳಲು ತೋಡಿಕೊಂಡ. ತಹಶೀಲ್ದಾರ್‌ ಕಚೇರಿ ಪಟ್ಟಣದಿಂದ ದೂರವಾದ ಮೇಲೆ ಇಂಥ ಗೋಳು ಹೇಳತೀರದಾಗಿದೆ.

Advertisement

ಪಟ್ಟಣದ ಹಳೆ ಕಚೇರಿಯಲ್ಲಿ ಜನರಿಗೆ ಅನುಕೂಲ ಕಲ್ಪಿಸುವ ನೆಮ್ಮದಿ ಕೇಂದ್ರ, ಆಧಾರ ಕೇಂದ್ರವನ್ನಾದರೂ ಇಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಆಡಳಿತಸೌಧದ ಮುಂಭಾಗದಿಂದಲೇ ಕಲಬುರಗಿಗೆ ತೆರಳುವ ತಡೆ ರಹಿತ ಹಾಗೂ ತಡೆ ಸಹಿತ ಬಸ್‌ಗಳನ್ನು ಕಡ್ಡಾಯವಾಗಿ ನಿಲುಗಡೆ ಮಾಡುವಂತೆ ಹಾಗೂ ಆಳಂದದಿಂದ ಆಡಳಿತ ಸೌಧಮಾರ್ಗವಾಗಿ ಕೊಡಲಹಂಗರದ ವರೆಗೆ ನಗರ ಬಸ್‌ ಸಂಚಾರಕ್ಕೆ ಒಂದು ಬಸ್‌ ಸಂಚರಿಸುವಂತೆ ಎನ್‌ಇಕೆಆರ್‌ಟಿಸಿ ಘಟಕದ ವ್ಯವಸ್ಥಾಪಕರಿಗೆ ಮತ್ತು ನಿರ್ದೇಶಕರಿಗೆ ಪತ್ರಬರೆಯಲಾಗಿದೆ. ಎರಡ್ಮೂರು ದಿನಗಳಲ್ಲಿ ನೀರಿನ ವ್ಯವಸ್ಥೆ ಕೈಗೊಳ್ಳುವಂತೆ ಗ್ರಾಮೀಣ ನೀರು ಸರಬರಾಜು ಎಇಇ ಚಂದ್ರಮೌಳಿ ಅವರನ್ನು ಕೋರಲಾಗಿದೆ. -ಯಲ್ಲಪ್ಪ ಸುಬೇದಾರ, ತಹಶೀಲ್ದಾರ್‌

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next