ಮುಂಬಯಿ: ಕೋವಿಡ್-19 ಸೋಂಕಿನ ಬಿಕ್ಕಟ್ಟಿನ ಮಧ್ಯೆ ಒಂದೆಡೆ ಅಧಿಕಾರಿಗಳು ಆಂಬುಲೆನ್ಸ್‌ಗಳ ಅಗತ್ಯತೆಯ ಬಗ್ಗೆ ಗಮನ ಹರಿಸುತ್ತಿರುವಾಗ ಇನ್ನೊಂದೆಡೆ ಆಸ್ಪತ್ರೆಯ ಆವರಣದಲ್ಲಿ ಅಂಬುಲೆನ್ಸ್‌ನೊಳಗೆ ಮದ್ಯಪಾನಗೈದು ಪಾರ್ಟಿ ಮಾಡುತ್ತಿದ್ದ ಕಾರ್ಮಿಕರ ಗುಂಪೊಂದನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ಮೀರಾ-ಭಾಯಂದರ್ ಮಹಾನಗರ ಪಾಲಿಕೆಯ ಭಾಯಂದರ್ ಪಶ್ಚಿಮದ ತೆಂಬಾದಲ್ಲಿರುವ ಪಂಡಿತ್ ಭೀಮ್ ಸೇನ್ ಜೋಶಿ ಆಸ್ಪತ್ರೆಯ ಕಾಂಪೌಂಡ್ ನಲ್ಲಿ ಕೋವಿಡ್-19 ಸೌಲಭ್ಯಕ್ಕೆಂದು ಮೀಸಲಾದ ಆಂಬುಲೆನ್ಸ್‌ನಲ್ಲಿ ರಾತ್ರಿ 11.45 ರ ಸುಮಾರಿಗೆ ಕಾರ್ಮಿಕರ ಗುಂಪು ಮದ್ಯಪಾನ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಭಾಯಂದರ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮನೀಶಾ ಪಾಟೀಲ್ ಹಾಗೂ ಇತರ ಪೊಲೀಸರು ಆಂಬುಲೆನ್ಸ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿ, ಸಹೋದರ ಶೋವಿಕ್ ಬೇಲ್ ಅರ್ಜಿ ವಜಾ
ಬಂಧಿತ ಆರೋಪಿಗಳನ್ನು ಚಾಲಕ ಸಮೀರ್ ಗಡೆ, ಮತ್ತು ವಿಲಾಸ್ ಮಜಂಡೆ, ಅಜಯ್ ಖಂಡರೆ, ರವಿಶಂಕರ್ ಗುಪ್ತಾ, ಬಾಲಕೃಷ್ಣ ಮಾಚಿ ಮತ್ತು ಗೌರವ್ ಪೇಸ್ಟ್ ಎಂದು ಗುರುತಿಸಲಾಗಿದೆ.
ಆರೋಪಿಗಳ ವಿರುದ್ದ ಪೊಲೀಸರು ಸುಮೋಟು ಪ್ರಕರಣ ದಾಖಲಿಸಿದ್ದು, ಆಂಬುಲೆನ್ಸ್ ಚಾಲಕ ಮತ್ತು ಆವರಣದ ನೈರ್ಮಲ್ಯ ಮತ್ತು ಸೋಂಕು ನಿವಾರಕ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಟ್ಟು ಆರು ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಹೆಚ್ಚಿನ ತನಿಖೆಗೊಳಪಡಿಸಿದ್ದಾರೆ.