ಬೆಂಗಳೂರು: ಆರು ಬೋಗಿಗಗಳ ಮೆಟ್ರೋ ರೈಲು ಭಾಗ್ಯ ಹಸಿರು ಮಾರ್ಗದ ಪ್ರಯಾಣಿಕರಿಗೆ ಈಗಲೂ ಮರೀಚಿಕೆ ಆಗಿದೆ. 2018ರ ಡಿಸೆಂಬರ್ ವೇಳೆಗೆ ಹಸಿರು ಮಾರ್ಗಕ್ಕೂ (ಯಲಚೇನಹಳ್ಳಿ-ನಾಗಸಂದ್ರ) ಆರು ಬೋಗಿಗಳ ಮೆಟ್ರೋ ರೈಲು ಸೇವೆ ದೊರೆಯಲಿದೆ ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದ್ದರು.
ಆದರೆ, ಜನವರಿ ಮುಗಿಯುತ್ತಿದ್ದರೂ ಪರೀಕ್ಷಾರ್ಥ ಸಂಚಾರವೇ ನಡೆಯುತ್ತಿದೆ. ಪರಿಣಾಮ ಜನರಿಗೆ ಈ ಸೇವೆ ಲಭ್ಯವಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ. ಹಸಿರು ಮಾರ್ಗಕ್ಕೆ (ಉತ್ತರ-ದಕ್ಷಿಣ ಕಾರಿಡಾರ್) ಹೋಲಿಸಿದರೆ ನೇರಳೆ ಮಾರ್ಗದಲ್ಲಿ (ಪೂರ್ವ-ಪಶ್ಚಿಮ ಕಾರಿಡಾರ್) ಪ್ರಯಾಣಿಕರ ಸಂಖ್ಯೆ ಜಾಸ್ತಿ.
ಹಸಿರು ಮಾರ್ಗದಲ್ಲಿ “ಪೀಕ್ ಅವರ್’ನಲ್ಲಿ (ಬೆಳಿಗ್ಗೆ 8.30ರಿಂದ 10.30 ಹಾಗೂ ಸಂಜೆ 4.30ರಿಂದ 6.30) ಒಂದು ಗಂಟೆಗೆ ಸರಾಸರಿ 10 ಸಾವಿರ ಮಂದಿ ಸಂಚರಿಸುತ್ತಾರೆ. ಆದರೆ, ನೇರಳೆ ಮಾರ್ಗದಲ್ಲಿ 19 ಸಾವಿರಕ್ಕೂ ಹೆಚ್ಚು ಮಂದಿ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ನೇರಳೆ ಮಾರ್ಗಕ್ಕೆ ಮೊದಲ ಆದ್ಯತೆ ನೀಡಲಾಗಿತ್ತು.
ಆದರೆ, ಇತ್ತೀಚಿನ ದಿನಗಳಲ್ಲಿ ಹಸಿರು ಮಾರ್ಗದಲ್ಲಿ ಕೂಡ ರೈಲುಗಳು ಭರ್ತಿ ಆಗುತ್ತಿವೆ. ರೈಲಿನೊಳಗೆ ಕಾಲಿಡಲಿಕ್ಕೂ ಜಾಗ ಇರುವುದಿಲ್ಲ. ಆದಾಗ್ಯೂ ಇಲ್ಲಿ ಆರು ಬೋಗಿಗಳ ಮೆಟ್ರೋ ರೈಲು ಸೇವೆಗೆ ನಿಗಮವು ಹಿಂದೇಟು ಹಾಕುತ್ತಿರುವುದು ಎಷ್ಟು ಸರಿ ಎಂದು ಪ್ರಯಾಣಿಕರು ಪ್ರಶ್ನಿಸುತ್ತಾರೆ.
ಆರು ಬೋಗಿಯ ಎರಡು ರೈಲುಗಳು ತಿಂಗಳುಗಳಿಂದ ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದು, ಈ ಪೈಕಿ ಒಂದು ರೈಲು ಹಸಿರು ಮಾರ್ಗದಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ಮಾಡುತ್ತಿದೆ. ಪ್ರಸ್ತುತ ಆರು ಬೋಗಿಗಳ ಮೂರು ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡುತ್ತಿವೆ. ಪರೀಕ್ಷಾರ್ಥ ಸಂಚರಿಸುತ್ತಿರುವ ರೈಲುಗಳು ಶೀಘ್ರ ವಾಣಿಜ್ಯ ಸಂಚಾರ ಆರಂಭಿಸಲಿವೆ. ಜನವರಿ ಅಂತ್ಯದೊಳಗೆ ಸೇವೆಗೆ ಅಣಿಗೊಳಿಸುವ ಚಿಂತನೆಯೂ ಇದೆ ಎಂದು ನಿಗಮದ ಅಧಿಕಾರಿಗಳು ತಿಳಿಸುತ್ತಾರೆ.