ಪಾಟ್ನಾ: ಬಿಹಾರದ ಸಿವಾನ್‌ನಲ್ಲಿ ಸೇತುವೆಯೊಂದು ಇಂದು ಹಠಾತ್ ಕುಸಿದಿದ್ದು, ಈ ಪ್ರದೇಶದಲ್ಲಿ ವ್ಯಾಪಕ ಭೀತಿ ಮತ್ತು ಕೋಲಾಹಲಕ್ಕೆ ಕಾರಣವಾಗಿದೆ. ಗಂಡಕ್ ಕಾಲುವೆಯ ಮೇಲಿನ ಸೇತುವೆಯ ಕುಸಿದು ಬಿದ್ದಿದ್ದು, ದರ್ಭಂಗಾ ಜಿಲ್ಲೆಯ ಪಕ್ಕದ ರಾಮಗಢದವರೆಗೆ ದೊಡ್ಡ ಶಬ್ದ ಕೇಳಿಸಿದೆ ಎಂದು ವರದಿಯಾಗಿದೆ.
ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಸೇತುವೆಯ ಕುಸಿತದ ಕ್ಷಣವನ್ನು ಸೆರೆಹಿಡಿಯುವ ವೀಡಿಯೊ ಹೊರಬಿದ್ದಿದ್ದು, ವೈರಲ್ ಆಗಿದೆ.
ಮಹಾರಾಜ್ ಗಂಜ್ ಜಿಲ್ಲೆಯ ಪಟೇಧಿ ಬಜಾರ್‌ನ ಮಾರುಕಟ್ಟೆಗಳನ್ನು ದರ್ಭಾಂಗದ ರಾಮಗಢ ಪಂಚಾಯತ್‌ನೊಂದಿಗೆ ಸಂಪರ್ಕಿಸುವ ಸೇತುವೆಯು ಪ್ರತಿದಿನ ಸಾವಿರಾರು ಪ್ರಯಾಣಿಕರಿಗೆ ನಿರ್ಣಾಯಕ ಕೊಂಡಿಯಾಗಿದೆ.
ಸುಮಾರು 40 ವರ್ಷಗಳ ಹಿಂದೆ ರಾಜಕಾಲುವೆ ಅಭಿವೃದ್ಧಿ ಹಂತದಲ್ಲಿ ನಿರ್ಮಾಣಗೊಂಡ ಸೇತುವೆ ಸಾಕಷ್ಟು ಹಳೆಯದಾಗಿದ್ದು, ಸರಿಯಾಗಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ವಹಿಸಿರುವುದು ಕುಸಿತಕ್ಕೆ ಕಾರಣ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲುವೆಯ ನಿರ್ಮಾಣದ ಸಮಯದಲ್ಲಿ ಅಸಮರ್ಪಕ ನಿರ್ವಹಣೆಯು ಸೇತುವೆಯ ಕಂಬಗಳ ಸುತ್ತಲೂ ಸವೆತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಸೇತುವೆ ಕುಸಿತದಿಂದಾಗಿ ಗಂಡಕ್ ಕಾಲುವೆಯ ಬಳಿ ಜನರನ್ನು ಸಂಕಷ್ಟಕ್ಕೆ ದೂಡಿದೆ., ನಿವಾಸಿಗಳು ಅಕ್ಕಪಕ್ಕದ ಹಳ್ಳಿಗಳನ್ನು ತಲುಪಲು ದೂರದ ಪ್ರಯಾಣವನ್ನು ಮಾಡಬೇಕಾಗಿದೆ.
ಅರಾರಿಯಾದಲ್ಲಿ ಕೋಟ್ಯಂತರ ಖರ್ಚು ಮಾಡಿ ನಿರ್ಮಿಸಿದ ಕಾಂಕ್ರೀಟ್ ಸೇತುವೆಯು ಕೆಲವೇ ದಿನಗಳ ಹಿಂದೆ ಕುಸಿದು ಬಿದ್ದಿತ್ತು. 12 ಕೋಟಿ ರೂ ಖರ್ಚು ಮಾಡಿ ನಿರ್ಮಿಸಿದ್ದ ಸೇತುವೆಯು ಉದ್ಘಾಟನೆಗೂ ಮೊದಲೇ ಕುಸಿದಿತ್ತು.