ಸಿರುಗುಪ್ಪ: ಸಿದ್ಧಗಂಗಾ ಶಿವಕುಮಾರ್ ಶ್ರೀಗಳ ಬದುಕು ಶಿವಮಯವಾಗಿದ್ದು, ಅವರ ಬದುಕು ನಮ್ಮೆಲ್ಲರಿಗೆ ಆದರ್ಶಪ್ರಾಯವಾಗಿದೆ ಎಂದು ಬಸವಭೂಷಣ ಸ್ವಾಮೀಜಿ ತಿಳಿಸಿದರು.
ನಗರದ ನೇತಾಜಿ ವ್ಯಾಯಾಮ ಶಾಲೆ ಆವರಣದಲ್ಲಿ ತಾಲೂಕಿನ ಸಿದ್ಧಗಂಗಾ ಸ್ವಾಮೀಜಿ ಭಕ್ತಾದಿಗಳಿಂದ ಏರ್ಪಡಿಸಿದ್ದ 3ನೇ ವರ್ಷದ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಾನ್‌ವಿಜ್ಞಾನಿ ಐನ್‌ಸ್ಟಿàನ್, ಮಹಾತ್ಮಗಾಂಧಿಯವರ ಬಗ್ಗೆ ಒಂದು ಮಾತನ್ನು ಹೇಳಿದ್ದರು. ರಕ್ತ ಮಾಂಸಗಳ ಇಂತ ಒಬ್ಬ ವ್ಯಕ್ತಿ ಈ ಭೂಮಿ ಮೇಲೆದ್ದಿರೂ ಬದುಕಿ ಓಡಾಡಿಕೊಂಡಿದ್ದರು ಎನ್ನುವುದನ್ನು ಮುಂದಿನ ಪೀಳಿಗೆ ನಂಬುವುದಿಲ್ಲ.
ಹಾಗೇಯೇ ಮುಂದಿನ ಪೀಳಿಗೆಗೆ ಶಿವಕುಮಾರ ಶ್ರೀಗಳು ಹೀಗಿದ್ದರಪ್ಪಾ ಎಂದು ಹೇಳಿದರೆ ಅವರು ನಂಬುತ್ತಾರೋ, ಬಿಡುತ್ತಾರೋ ಎನ್ನುವ ಪ್ರಶ್ನೆ ಬರುತ್ತದೆ. ಏಕೆಂದರೆ ಸಿದ್ಧಗಂಗಾ ಶ್ರೀಗಳು ಆ ಮಟ್ಟಕ್ಕೆ ಅಚ್ಚರಿ ಮೂಡಿಸುವಂತೆ ಬದುಕಿದಂತವರು. ತಮ್ಮ ಇಡೀ ಬದುಕನ್ನು ಶಿವಮಯವನ್ನಾಗಿ ಮಾಡಿಕೊಂಡವರು. ತೇವಮಯವನ್ನಾಗಿ ಮಾಡಿಕೊಂಡು ತ್ಯಾಗದ ಬದುಕನ್ನು ಬಾಳಿದಂತವರು.
ನಾವು ಸಿದ್ಧಗಂಗ ಶಿವಕುಮಾರ ಸ್ವಾಮೀಜಿಗಳನ್ನು ಸ್ಮರಣೆ ಮಾಡಿಕೊಂಡರೆ ಬದುಕಿನಲ್ಲಿ ಸೂರ್ಯೋದಯವಾದಂತೆ. ಅನೇಕರು ಭಾಷಣಕ್ಕೆ ಸೀಮಿತವಾದರು, ಆದರೆ ಶಿವಕುಮಾರ ಶ್ರೀಗಳು ಕೃತಿಯಲ್ಲಿ ತೋರಿಸಿದವರು, ಮಾತನ್ನು ಕೃತಿಯಲ್ಲಿ ಅಳವಡಿಸಿಕೊಂಡು ಪ್ರತಿಯೊಂದು ಕಾಯಕವನ್ನು ಮಾಡಿದರು. ಅವರ ಪೂಜಾ ನಿಷ್ಠೆ ಅದ್ಭುತವಾಗಿರುತ್ತಿತ್ತು. ಪ್ರಾತಃಕಾಲದ ಪೂಜೆಯನ್ನು ಯಾವುದೇ ಕಾರಣಕ್ಕೂ ತಪ್ಪಿಸುತ್ತಿರಲಿಲ್ಲ. ಅವರ ಸೇವೆಯು ಸ್ಮರಣೀಯವಾಗಿದೆ, ಆದರ್ಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದಲಿಂಗಸ್ವಾಮಿ, ಮಂಜುನಾಥ, ಪಂಪನಗೌಡ, ಓತೂರು ಪಂಪಾಪತಿ, ಪ್ರವೀಣ್‌ಕುಮಾರ್, ಬಗ್ಗೂರು ವೀರೇಶ, ಚನ್ನಪ್ಪಗೌಡ, ವೀರೇಶಗೌಡ, ಪ್ರಶಾಂತ, ವೀರೇಶಸ್ವಾಮಿ, ಶಿವಕುಮಾರ್‌ಸ್ವಾಮಿ ಹಾಗೂ ಸಿದ್ಧಗಂಗಾ ಮಠದ ಹಳೆ ವಿದ್ಯಾರ್ಥಿಗಳು ಇದ್ದರು.