ಮಂಡ್ಯ: ಮಂಡ್ಯ ಜಿಲ್ಲೆಯ ರಾಜಕಾರಣ ಇನ್ನಷ್ಟು ಕಾವು ಪಡೆದಿದ್ದು, ದೋಸ್ತಿಯೊಳಗೆ ಎಲ್ಲವೂ ಸರಿ ಇಲ್ಲ ಎಂಬುದನ್ನು ಸ್ವತಃ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೇ ಒಪ್ಪಿಕೊಂಡಿದ್ದಾರೆ. ಕೆ.ಆರ್.ಪೇಟೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಪರವಾಗಿ ಪ್ರಚಾರ ನಡೆಸಿದ ಅವರು, ಮಂಡ್ಯದಲ್ಲಿ ಎಲ್ಲವೂ ಕೈ ಮೀರಿ ಹೋಗಿದ್ದು, ಇದನ್ನು ಸರಿಮಾಡಲು ಸಿದ್ದರಾಮಯ್ಯ ಬಂದರೂ ಆಗಲ್ಲ ಎಂದು ಹೇಳಿದರು. ಸಿದ್ದರಾಮಯ್ಯ ಪ್ರಚಾರಕ್ಕೆ ಬಂದರೂ ಪ್ರಯೋಜನವಿಲ್ಲ ಎಂದು ಹೇಳುವ ಮೂಲಕ ಅಚ್ಚರಿಗೊಳಿಸಿದರು. ಈಗಾಗಲೇ ಕೆಲವರು ಬಹುದೂರ ಹೋಗಿದ್ದಾರೆ. ನಿಖಿಲ್ ಕುಮಾರಸ್ವಾಮಿ ಸೋಲಿಸುವ ಮೂಲಕ ಸಿಎಂ ಕುಮಾರಸ್ವಾಮಿಗೆ ಮುಖಭಂಗ ಉಂಟು ಮಾಡಲು ಪಣತೊಟ್ಟಿದ್ದಾರೆ. ಇಂಥವರ ಮನೆಬಾಗಿಲಿಗೆ ಹೋಗುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು.
ಗೈರಾದ ಕಾಂಗ್ರೆಸ್ ನಾಯಕರು: ಚುನಾವಣಾ ಪ್ರಚಾರದ ಬಿಸಿ ತಾರಕಕ್ಕೇರಿದ್ದರೂ, ಮಂಡ್ಯದಲ್ಲಿ ದೋಸ್ತಿ ನಾಯಕರು, ಕಾರ್ಯಕರ್ತರು ಇದುವರೆಗೆ ಒಟ್ಟಿಗೆ ಪ್ರಚಾರ ಮಾಡಿಲ್ಲ. ನಿಖಿಲ್ ಪರವಾಗಿ ಇದುವರೆಗೆ ಕಾಂಗ್ರೆಸ್ ನಾಯಕರೂ ಪ್ರಚಾರ ನಡೆಸಿಲ್ಲ. ಅಷ್ಟೇ ಅಲ್ಲ, ಪ್ರಚಾರಕ್ಕೆಂದು ಸ್ವತಃ ದೇವೇಗೌಡರೇ ಕೆ.ಆರ್.ಪೇಟೆಗೆ ಬಂದಿದ್ದರೂ ಕಾಂಗ್ರೆಸ್‌ನ
ಯಾವುದೇ ಕಾರ್ಯಕರ್ತ, ನಾಯಕರು ಬರಲಿಲ್ಲ.
ಕೃಷ್ಣಗೂ ಟಾಂಗ್: ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್.ಎಂ. ಕೃಷ್ಣಗೂ ಟಾಂಗ್ ನೀಡಿದ ಗೌಡರು, “”ನನ್ನನ್ನು ಸಿಎಂ ಮಾಡಿ ಎಂದು ಮನೆ ಬಾಗಿಲಿಗೆ ಬಂದಿರಲಿಲ್ಲವೇ? ಕೃಷ್ಣ ಅವರಿಗೆ ಆತ್ಮಸಾಕ್ಷಿ ಇದ್ದರೆ ಒಮ್ಮೆ ಈ ಬಗ್ಗೆ ಪ್ರಶ್ನೆ ಮಾಡಿಕೊಳ್ಳಲಿ ಎಂದರು. ಸಂಕಷ್ಟದಲ್ಲಿದ್ದಾಗ ನನ್ನ ಸಹಾಯ ಪಡೆದೇ ಕೃಷ್ಣ ಅವರು ರಾಜ್ಯಸಭೆ ಸದಸ್ಯರು ಆಗಿದ್ದರು ಎಂದೂ ನೆನಪಿಸಿಕೊಟ್ಟರು.ಬುಧವಾರವಷ್ಟೇ ಮಾತನಾಡಿದ್ದ ಕೃಷ್ಣ, “ಕೆಲವರು ನನಗೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಿ, ರಾಜ್ಯ ರಾಜಕೀಯದಿಂದ ದೂರ ಇಟ್ಟಿದ್ದರು’ ಎಂದು ಪರೋಕ್ಷವಾಗಿ ಕುಟುಕಿದ್ದರು.
ನಿಖೀಲ್ ಸೋಲಿಸಲು ಸಂಚು: ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಏನಾದರೂ ಮಾಡಿ ಸೋಲಿಸಲೇಬೇಕು ಎಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಒಳಸಂಚು ಮಾಡಿ, ಬೀದಿಗೆ ಇಳಿದು ಹೋರಾಟ ಆರಂಭಿಸಿದ್ದಾರೆ. ಆದರೆ, ಜಿಲ್ಲೆಯ ಪ್ರಜ್ಞಾವಂತ
ಮತದಾರರು ನಿಖೀಲ್ ಕೈಬಿಡುವುದಿಲ್ಲ ಎಂದು ಆಶಿಸಿದರು.
ಚಿತ್ರನಟರ ಬಗ್ಗೆ ಆಕ್ರೋಶ: ನಾನು ಮೇರುನಟ ಡಾ.ರಾಜ್‌ಕುಮಾರ್‌ರವರನ್ನು ರಾಜಕೀಯಕ್ಕೆ ತಂದು ವೀರೇಂದ್ರ ಪಾಟೀಲ್ ವಿರುದ್ಧ ನಿಲ್ಲಿಸಲು ಯೋಚಿಸಿದ್ದೆ. ಆದರೆ ಅವರೇ ಒಪ್ಪಲಿಲ್ಲ. ನನಗೆ ಕಲಾರಾಧನೆಯೇ ಸಾಕು ಎಂದಿದ್ದರು. ಆದರೆ ಇಂದು ಚಿತ್ರನಟರು ತಮ್ಮ ಕ್ಷೇತ್ರವನ್ನು ಬಿಟ್ಟು ರಾಜಕೀಯ ಮಾಡಲು ಬಂದಿದ್ದಾರೆ ಎಂದು
ಟೀಕಿಸಿದರು.
ಸುಮಲತಾಗೆ ಕೈ ಕಾರ್ಯಕರ್ತರ ಬೆಂಬಲ
ಕಾಂಗ್ರೆಸ್ ಬಾವುಟ ಹಿಡಿದು, ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುವ ಪಕ್ಷದ ಕಾರ್ಯಕರ್ತರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಮಂಡ್ಯ ಜಿಲ್ಲೆಯ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಸೆಡ್ಡು ಹೊಡೆದಿದ್ದಾರೆ. ನಾವು ಕೈ ಬಾವುಟ ಹಿಡಿದೇ ಸುಮಲತಾ ಪರ ಕೆಲಸ ಮಾಡುತ್ತೇವೆ, ತಾಕತ್ತಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ. ಮಂಡ್ಯ ತಾಲೂಕು ಕೊತ್ತತ್ತಿ 1 ಮತ್ತು 2ನೇ ವೃತ್ತದ ಕಾಂಗ್ರೆಸ್ ಕಾರ್ಯಕರ್ತರು ಇಂಡುವಾಳು ಸಚ್ಚಿದಾನಂದ ನಿವಾಸದಲ್ಲಿ ಸಭೆ ಸೇರಿ, ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಲು ನಿರ್ಣಯ ಕೈಗೊಂಡರು. ರಾಜ್ಯಮಟ್ಟ ದ ನಾಯಕರು ಸ್ವಾರ್ಥಕ್ಕಾಗಿ ಜಿಲ್ಲೆಯೊಳಗೆ ಮೈತ್ರಿ ಮಾಡಿಕೊಂಡಿದ್ದಾರೆ. ನಾಯಕರು ಹೇಳಿದಂತೆ ಕೇಳುವುದಕ್ಕೆ ಕಾರ್ಯಕರ್ತರು ಗುಲಾಮರಲ್ಲ. ನಮಗೂ ಸ್ವಾಭಿಮಾನವಿದೆ ಎಂದಿದ್ದಾರೆ.