ಮಡಿಕೇರಿ: ಕೊಡಗಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಲ್ಲಿ ನಿವೇಶನದ ಹಕ್ಕಿಕ್ಕಾಗಿ ಕೇವಲ 300 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಡಳಿತ ನೀಡಿರುವ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಯುನೈಟೆಡ್ ಪ್ಲಾಂಟೇಷನ್ ವರ್ಕರ್ ಯೂನಿಯನ್ ಟೀಕಿಸಿದೆ. ಕಳೆದ ಅನೇಕ ವರ್ಷಗಳಿಂದ ಬಡವರು ಹಾಗೂ ಕಾರ್ಮಿಕರು ಸಲ್ಲಿಸಿರುವ ನಿವೇಶನದ ಬೇಡಿಕೆಯ ಸಾವಿರಾರು ಅರ್ಜಿಗಳನ್ನು ಜಿಲ್ಲಾಡಳಿತ ಮೊದಲು ವಿಲೇವಾರಿ ಮಾಡಲಿ ಎಂದು ಸಂಘಟನೆ ಒತ್ತಾಯಿಸಿದೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಎಐಟಿಯುಸಿ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಎಂ. ಸೋಮಪ್ಪ, ಜಿಲ್ಲೆಯಲ್ಲಿರುವ ನಿವೇಶನ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬಡವರ್ಗವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು. 2007ರಿಂದ ಇಲ್ಲಿಯ ವರೆಗೆ ನಿವೇ ಶನಕ್ಕಾಗಿ ಒತ್ತಾಯಿಸಿ ಸತತ ಹೋರಾಟ ನಡೆಸುವ ಮೂಲಕ ಸಚಿವರು, ಶಾಸಕರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಆದರೆ ನಿವೇಶನದ ಹಕ್ಕನ್ನು ನೀಡುವ ಕಾಳಜಿಯನ್ನು ಯಾರು ಕೂಡ ತೋರಿಲ್ಲ. ಇದೀಗ ಕೇವಲ 300 ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿಕೆ ನೀಡಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ವೆಂದು ಸೋಮಪ್ಪ ಹೇಳಿದರು.
ಬಿಪಿಎಲ್ ಕಾರ್ಡ್ ಹೊಂದಿರುವ ನಿವೇಶನ ರಹಿತ ಬಡವರು ಎಲ್ಲ ಪಂಗಡಗಳಲ್ಲಿದ್ದಾರೆ. ತೋಟ ಕಾರ್ಮಿ ಕರು, ಕಟ್ಟಡ ಕಾರ್ಮಿಕರು, ಹಮಾಲಿ ಕಾರ್ಮಿಕರು ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸಾಕಷ್ಟು ನಿವೇಶನ ರಹಿತ ಬಡವರಿದ್ದಾರೆ. ಆದರೆ, ಭೂ ಮಾಫಿಯಾಗಳು ಜಿಲ್ಲೆಯಲ್ಲಿರುವ ಸರಕಾರಿ ಜಾಗವನ್ನು ಕಬಳಿಸಿ ಬಡವರಿಗೆ ಸಿಗಬೇಕಾದ ನಿವೇಶನದ ಹಕ್ಕು ಸಿಗದಂತೆ ಮಾಡಿದ್ದಾರೆ ಎಂದು ಸೋಮಪ್ಪ ಆರೋಪಿಸಿದರು.
ಅತಿಕ್ರಮಣಗೊಂಡಿರುವ ಸುಮಾರು 6,000 ಎಕರೆಯಷ್ಟು ಸರಕಾರಿ ಭೂಮಿಯನ್ನು ವಶಕ್ಕೆ ಪಡೆದು ಭೂ ರಹಿತರಿಗೆ ನೀಡಬೇಕೆಂದು ಒತ್ತಾಯಿಸಿದರು. ಚುನಾವಣೆ ಸಂದರ್ಭ ಮಾತ್ರ ದಲಿತರು ಹಾಗೂ ಕಾರ್ಮಿಕರ ಬಗ್ಗೆ ಕಾಳಜಿ ತೋರುವ ರಾಜಕಾರಣಿಗಳು ಆ ನಂತರದ ದಿನಗಳಲ್ಲಿ ಅದನ್ನು ಮರೆತು ಬಿಡುತ್ತಾರೆ. ಕೊಡಗು ಜಿಲ್ಲೆಯಲ್ಲಿ ಸುಮಾರು 60 ಸಾವಿರ ಮಂದಿ ಕಾರ್ಮಿಕ ವರ್ಗದವರಿದ್ದು, ಸಚಿವರು, ಸಂಸದರು, ಶಾಸಕರು ಸಭೆ ನಡೆಸಿ ಇವರ ಸಮಸ್ಯೆಗಳನ್ನು ಆಲಿಸಿಲ್ಲ. ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ಸತ್ತು ಹೋಗಿದ್ದು, ಸರಕಾರಿ ಕಚೇರಿಗಳಲ್ಲಿನ ಲಂಚಾವತಾರದಿಂದಾಗಿ ಕಾರ್ಮಿಕರು ಅಗತ್ಯ ಅರ್ಜಿಗಳ ವಿಲೇವಾರಿಗಾಗಿ ಪರ ದಾಡುವಂತಾಗಿದೆ ಎಂದು ಸೋಮಪ್ಪ ಅಸಮಾಧಾನ ವ್ಯಕ್ತಪಡಿಸಿದರು ಆಧಾರ್ ಲಿಂಕ್ ಪ್ರಕ್ರಿಯೆ ಕ್ಲಿಷ್ಟಕರವಾಗಿದ್ದು, ಇದನ್ನು ಸರಳೀಕರಣಗೊಳಿಸಬೇಕೆಂದು ಆಗ್ರಹಿಸಿದ ಅವರು, 94ಸಿ ಅರ್ಜಿಗಳನ್ನು ಶೀಘ್ರ ವಿಲೆೇವಾರಿ ಮಾಡಬೇಕೆಂದರು.