ಸ್ವಲ್ಪ ಹಣವಿದೆ. ಅದನ್ನು ಎಲ್ಲಿ ಹೂಡಿಕೆ ಮಾಡಿದರೆ ಒಳ್ಳೆಯದು?- ಹೀಗೊಂದು ಪ್ರಶ್ನೆಯನ್ನು ಹಲವರು ಕೇಳುವುದುಂಟು. ರಾಷ್ಟ್ರೀಕೃತ ಬ್ಯಾಂಕ್, ಅಂಚೆ ಕಚೇರಿಗಳಲ್ಲಿನ ಉಳಿ ತಾಯ ಖಾತೆಯಲ್ಲಿ ಹಣ ಇರಿಸಿದರೆ ದುಪ್ಪಟ್ಟಾಗುವುದಿಲ್ಲ, ಆದರೆ ಭದ್ರ ವಾಗಿ ಇರುತ್ತದೆ. ಪ್ರತೀ ವರ್ಷವೂ ಇಂತಿಷ್ಟು ಎಂದು ಬಡ್ಡಿ ಹಣವೂ ಸಿಗುತ್ತದೆ. ಒಂದು ಕಡೆಯಲ್ಲಿ ಇಡುಗಂಟೂ ಉಳಿಯಬೇಕು, ಇನ್ನೊಂದು ಕಡೆಯಲ್ಲಿ ಲಾಭವೂ ಸಿಗಬೇಕು ಅನ್ನುವವರು ಹಣ ಹೂಡಿಕೆಗೆ ಆರಿಸಿಕೊಳ್ಳುವ ಸರಳ ಮತ್ತು ಸುಲಭ ಮಾರ್ಗ ಇದು.
ಆದರೆ ಎಲ್ಲರಿಗೂ ಇದು ಹೂಡಿಕೆಗೆ ಸಮರ್ಪಕ ಮಾರ್ಗ ಎಂದು ಅನಿಸುವುದಿಲ್ಲ. ಅವರಿಗೆ ತಮ್ಮಲ್ಲಿರುವ ಹಣವನ್ನು ಹೇಗಾದರೂ ಮಾಡಿ ದುಪ್ಪಟ್ಟು ಮಾಡಿಕೊಳ್ಳುವ ಆಸೆ. ಅಂಥವರು ಬಡ್ಡಿಗೆ ಸಾಲ ಕೊಡುವ ಬಗ್ಗೆ ಯೋಚಿಸುತ್ತಾರೆ. ಇದು ಯಾವ ರೀತಿಯಿಂದ ಯೋಚಿಸಿದರೂ ಒಳ್ಳೆಯ ಮಾರ್ಗ ಅಲ್ಲ. ಅನಿವಾರ್ಯವಾಗಿ ಸಾಲ ಪಡೆದವರು ಅಕಸ್ಮಾತ್ ಸಾಲ ವಾಪಸ್ ಮಾಡದೇ ಹೋದರೆ, ಅಸಲು ಮತ್ತು ಬಡ್ಡಿ ಎರಡಕ್ಕೂ ಪಂಗನಾಮ.
ಈಗಿನ ಪರಿಸ್ಥಿತಿ ನೋಡಿದರೆ, ಬ್ಯಾಂಕ್‌ನ ಬಡ್ಡಿ ದರದಲ್ಲಿ ಏರಿಕೆ ಆಗುವುದು ಸಾಧ್ಯವೇ ಇಲ್ಲ. ಏನಿದ್ದರೂ ಮುಂದೆ ಈಗಿರುವ ಬಡ್ಡಿಯ ಪ್ರಮಾಣ ಕೂಡ ಕಡಿಮೆ ಆಗುತ್ತಲೇ ಹೋಗಬಹುದು ಅಷ್ಟೇ. ಇಂಥ ಸಂದರ್ಭದಲ್ಲಿ ನಾವು ಕಷ್ಟ ಪಟ್ಟು ಕೂಡಿಟ್ಟ ಹಣಕ್ಕೆ ತಕ್ಕ ಬೆಲೆ ಸಿಗಬೇಕು, ಆ ಹಣದ ಮೌಲ್ಯ ದಿನಕಳೆದಂತೆ ಹೆಚ್ಚಬೇಕು ಅನ್ನುವವರು ನಗರಗಳಲ್ಲಿ ಸೈಟ್ ಖರೀದಿಸುವುದು ಒಳ್ಳೆಯದು.
ಈಗ ಬರಡು ಭೂಮಿಯಂತೆ ಕಾಣಿಸಿಸುತ್ತಿರುವುದು ಕೆಲವೇ ವರ್ಷಗಳಲ್ಲಿ ನಂಬಲು ಕಷ್ಟ ಅನ್ನುವಂತೆ ಅಭಿವೃದ್ಧಿ ಹೊಂದಿದ ಹಲವು ಉದಾಹರಣೆಗಳಿವೆ. ಹಾಗಾಗಿ ಎಷ್ಟು ಬರುತ್ತದೋ ಅಷ್ಟು ಬಡ್ಡಿ ಸಾಕು ಎಂದು ಬ್ಯಾಂಕ್‌ನಲ್ಲಿ ಹಣ ಇಡುವ ಬದಲು, ಫಿಕ್ಸೆಡ್ ಇರಿಸಿರುವ ಒಟ್ಟು ಮೊತ್ತದಲ್ಲಿ ಅರ್ಧದಷ್ಟನ್ನು ತೆಗೆದು, ಅದರಲ್ಲಿ ಒಂದು ಚಿಕ್ಕ ಸೈಟ್ ಖರೀದಿಸುವುದು ಜಾಣತನ. (ಸೈಟ್ ಖರೀದಿಗೆಂದು ಸಾಲ ಮಾಡುವ ಮೂರ್ಖತನ ಬೇಡ) ಹೀಗೆ ಮಾಡುವುದರಿಂದ, ಹೊಸದೊಂದು ಆಸ್ತಿ ಖರೀದಿಸಿದ ತೃಪ್ತಿಯೂ ಸಿಗುತ್ತದೆ.
ಕಷ್ಟಕಾಲಕ್ಕೆ ಬ್ಯಾಂಕ್‌ನಲ್ಲಿ ಸ್ವಲ್ಪ ಹಣ ಉಳಿಸಿದ ಸಮಾಧಾನವೂ ಜತೆಯಾಗುತ್ತದೆ. ಆದರೆ ಒಂದು ವಿಷಯ ನೆನಪಲ್ಲಿ ಇರಲಿ, ಸೈಟ್ ಖರೀದಿಸುವಾಗ, ಸಂಬಂಧಪಟ್ಟ ದಾಖಲೆಗಳು ಒರಿಜಿನಲ್ ಆಗಿವೆಯೇ? ಎಂದು ಒಂದಲ್ಲ; ಹತ್ತು ಬಾರಿ ಖಚಿತ ಪಡಿಸಿಕೊಳ್ಳ ಬೇಕು. ಎಲ್ಲ ದಾಖಲೆಗಳ ಮೂಲ ಪ್ರತಿಗಳನ್ನೂ ತಪ್ಪದೇ ಪಡೆಯ ಬೇಕು. ಭೂಮಿಗೆ ಯಾವತ್ತಿದ್ದರೂ ಬಂಗಾರದ ಬೆಲೆ ಸಿಕ್ಕೇ ಸಿಗುವುದ ರಿಂದ, ಅದರ ಮೇಲೆ ಹೂಡಿದ ಹಣಕ್ಕೆ ಎಂದೂ ಮೋಸವಾಗದು.
ಐದಾರು ವರ್ಷಗಳ ಕಾಲ ದಿನನಿತ್ಯದ ಖರ್ಚು ನಿಭಾಯಿಸುವಂಥ ಉದ್ಯೋಗವಿದೆ. ಅದರ ಜತೆಗೆ ಹೆಚ್ಚುವರಿಯಾಗಿ 20 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣ ಇದೆ ಅಂದುಕೊಳ್ಳಿ; ಅಂತಹ ಸಂದರ್ಭದಲ್ಲಿ ಈ ಹಣದಲ್ಲಿ ಸೈಟ್ ಖರೀದಿ ಮಾಡುವುದು ಹಣ ಹೂಡಿಕೆಯಿಂದ ಲಾಭ ಮಾಡಲು ಇರುವ ಅತ್ಯುತ್ತಮ ವಿಧಾನ. ಏಕೆಂದರೆ ಹೊಟೇಲ…, ಫ್ಯಾಕ್ಟರಿ, ಕೃಷಿಯಂಥ ಯಾವುದೇ ಕ್ಷೇತ್ರದಲ್ಲಿ ಹಣ ಹೂಡಿಕೆಯಿಂದ ನಷ್ಟ ಆಗಬಹುದು. ಆದರೆ ಭೂಮಿ ಖರೀದಿಯಿಂದ ಮಾತ್ರ ಯಾವ ಕಾರಣಕ್ಕೂ ನಷ್ಟ ಆಗಲು ಸಾಧ್ಯವೇ ಇಲ್ಲ. ಹೌದು; ಈ ನೆಲಕ್ಕೆ ಯಾವತ್ತೂ ಚಿನ್ನದ ಬೆಲೆ ಇದ್ದೇ ಇದೆ.