Advertisement

ಸೀತಾರಾಮ ಕೆದಿಲಾಯ ಅವರ ಭಾರತ ಪರಿಕ್ರಮ ಸಮಾಪನ

01:40 AM Jul 10, 2017 | Team Udayavani |

ಪುತ್ತೂರು: ಆರ್‌ಎಸ್‌ಎಸ್‌ ಮಾಜಿ ಹಿರಿಯ ಪ್ರಚಾರಕ್‌, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ಮೂಲದ ಸೀತಾರಾಮ ಕೆದಿಲಾಯ ಅವರ ಭಾರತ ಪರಿಕ್ರಮ ರವಿವಾರ ಗುರುಪೂರ್ಣಿಮೆಯಂದು ಕನ್ಯಾಕುಮಾರಿಯಲ್ಲಿ ಸಮಾಪನಗೊಂಡಿತು. ಕನ್ಯಾಕುಮಾರಿಯಿಂದ ಆರಂಭಗೊಂಡು ಇಡೀ ಭಾರತಕ್ಕೆ ಪ್ರದಕ್ಷಿಣೆ ಬಂದ ಈ ಅತೀ ದೊಡ್ಡ ವಾಕಥಾನ್‌ ನಾಲ್ಕು ವರ್ಷ 11 ತಿಂಗಳಲ್ಲಿ ಮುಗಿದಿದೆ. 1,797 ದಿನಗಳಲ್ಲಿ 25 ರಾಜ್ಯಗಳ ಮೂಲಕ 23,100 ಕಿ.ಮೀ. ನಡೆದ ಕೆದಿಲಾಯರು ಗ್ರಾಮಗಳೊಳಗೆ ನಡೆದದ್ದು ಇನ್ನೂ ಅಧಿಕ.

Advertisement

ಕೆದಿಲಾಯ ಅವರ ಪಾದಯಾತ್ರೆ ಶನಿವಾರ ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕಕ್ಕೆ ತಲುಪಿತು. ರವಿವಾರ ಬೆಳಗ್ಗೆ 4 ಗಂಟೆಗೆ ಅಲ್ಲಿಂದ ಕನ್ಯಾಕುಮಾರಿ ದೇವಾಲಯಕ್ಕೆ ತಲುಪಿತು. ಅಲ್ಲಿ ವಿಶೇಷ ದರ್ಶನ ಪಡೆದು 108 ಪ್ರದಕ್ಷಿಣೆ ಹಾಕಿದ ಕೆದಿಲಾಯ ಅವರು ದಕ್ಷಿಣದ ತುತ್ತತುದಿ ಕಡಲಕಿನಾರೆಗೆ ತೆರಳಿದರು. ಅಲ್ಲಿಂದಲೇ ಪಾದಯಾತ್ರೆ 2012 ಆಗಸ್ಟ್‌ 9ರಂದು ಹೊರಟಿತ್ತು. ಅಲ್ಲಿ ಪಾದಯಾತ್ರೆಗೆ ಸಹಕರಿಸಿದ ಎಲ್ಲರಿಗೂ ಕೆದಿಲಾಯ ಕೃತಜ್ಞತೆ ಸಲ್ಲಿಸಿದರು. 

ಪಾದಯಾತ್ರೆ ಹೊರಡುವಾಗ ಧ್ವಜ ನೀಡಿ ಶುಭ ಕೋರಿದ್ದ ರಾಮಕೃಷ್ಣಾಶ್ರಮದ ಶ್ರೀ ಚೈತನ್ಯಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿಯೇ ಶಂಖಧ್ವನಿ ನಡುವೆ ಧ್ವಜಾವರೋಹಣ ನಡೆಯಿತು. ಕೆದಿಲಾಯ ಅವರು ಪಾದಯಾತ್ರೆ ಮುಗಿದ ಸಂಕೇತವಾಗಿ ಕೇಶಮುಂಡನ (ಪಾದಯಾತ್ರೆ ಹೊರಟ ಬಳಿಕ ತಲೆಯ ಕೂದಲು, ಗಡ್ಡವನ್ನು ಕತ್ತರಿಸಿರಲಿಲ್ಲ) ಮಾಡಿಸಿಕೊಂಡರು.

ಭಾರತವನ್ನು ವಿಶ್ವಗುರುವಾಗಿ ಮಾಡಬೇಕೆಂಬ ಸಂಕಲ್ಪದಿಂದ ಕೆ.ಎನ್‌. ನಿತ್ಯಾನಂದ ಅವರ ಮಾರ್ಗದರ್ಶನದಲ್ಲಿ ಶನಿವಾರ ಬೆಳಗ್ಗೆಯಿಂದ ಆರಂಭಗೊಂಡ “ವಿಶ್ವಜಿಗೀಶು ಯಾಗ’ದ ಪೂರ್ಣಾಹುತಿ ರವಿವಾರ ಮಧ್ಯಾಹ್ನ ನಡೆಯಿತು. ಸಂಜೆ ನಾಗರಕೋವಿಲ್‌ ನಗರದಲ್ಲಿ ನಡೆದ “ಗ್ರಾಮ ಸಂಗಮ’ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಜನರು ಉಪಸ್ಥಿತರಿದ್ದರು.

ಆರೆಸ್ಸೆಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌, ಸಹಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಪದಾಧಿಕಾರಿಗಳಾದ ಅಜಿತ್‌ ಮಹಾಪಾತ್ರ, ಮಂಗ ಳೂರಿನ ಕಜಂಪಾಡಿ ಸುಬ್ರಹ್ಮಣ್ಯ ಭಟ್‌ ಮೊದಲಾದವರು ಈ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next