Advertisement
ನೀವು ಹೊರಡುವಾಗ ಮತ್ತು ಈಗಿನ ಮನಃಸ್ಥಿತಿ ಏನು? ಉದ್ದೇಶ ಏನಿತ್ತು? ಏನಾಗಿದೆ?ಹೊರಡುವಾಗ “ಭಾರತವನ್ನು ತಿಳಿಯಬೇಕು, ಭಾರತವನ್ನು ಅರಿಯುವ ಮೂಲಕ ಭಾರತವೇ ಆಗಬೇಕು. ಈ ಮೂಲಕ ಭಾರತ ವಿಶ್ವಗುರುವಾಗಬೇಕು’ ಎಂಬ ಸಂಕಲ್ಪ ಮಾಡಿಕೊಂಡಿದ್ದೆ. ಒಂದು ನಿರ್ದಿಷ್ಟ ಮುನ್ನೋಟ, ಉದ್ದೇಶವೇನೂ ಇಟ್ಟುಕೊಂಡಿರಲಿಲ್ಲ. ಪ್ರತಿ ಗ್ರಾಮಗಳಿಗೆ, ಬೇರೆ ಬೇರೆ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿದಾಗ ಮೊದಲೆರಡು ಸಂಕಲ್ಪ ಸಫಲವಾಯಿತು ಎಂದೆನಿಸುತ್ತದೆ. ನಾವು ಬೇರೆಯಲ್ಲ, ಭಾರತ ಬೇರೆಯಲ್ಲ, ಇದು ಕೇವಲ ಭೂಮಿಯ ತುಂಡಲ್ಲ, ಇದು ಬದುಕು ಎನ್ನುವುದು ಸ್ಪಷ್ಟವಾಗುತ್ತಾ ಹೋಯಿತು. ಭಾರತ ವಿಶ್ವಗುರುವಾಗಬೇಕೆನ್ನುವ ಕಲ್ಪನೆ ಬಗೆಗೆ ಸ್ವಲ್ಪ ಮಟ್ಟಿಗೆ ಆಶಾಕಿರಣ ತೋರುತ್ತಿದೆ. ಜಗತ್ತಿನ ಅನೇಕ ರಾಷ್ಟ್ರದವರು ಯೋಗ, ಸಂಸ್ಕೃತ, ವೇದವಿಜ್ಞಾನ, ಗೀತೆಯ ಮನೋವಿಜ್ಞಾನ ಇತ್ಯಾದಿ ವಿಷಯಗಳಲ್ಲಿ ಭಾರತದೊಂದಿಗೆ ಗುರುತಿಸಿಕೊಳ್ಳಲು ಬಯಸುತ್ತಿದ್ದಾರೆ.
ಒಂದೊಂದು ರಾಜ್ಯಗಳದ್ದೂ ಒಂದೊಂದು ವೈಶಿಷ್ಟéಗಳಿವೆ. ವಿವಿಧತೆಯಲ್ಲಿ ಏಕತೆ ಎನ್ನುವುದು ಇದನ್ನೇ. ಒಂದು ರಾಜ್ಯದೊಂದಿಗೆ ಇನ್ನೊಂದು ರಾಜ್ಯವನ್ನು ತುಲನೆ ಮಾಡುವಂತಿಲ್ಲ. ಉದಾಹರಣೆಗೆ, ತಮಿಳುನಾಡಿನಲ್ಲಿ ಅಷ್ಟು ದೊಡ್ಡ ದೊಡ್ಡ ದೇವಸ್ಥಾನಗಳನ್ನು ವಾಸ್ತುಪ್ರಕಾರ ವೈಜ್ಞಾನಿಕವಾಗಿ ಶಿಲ್ಪಸೌಂದರ್ಯದೊಂದಿಗೆ ಕಟ್ಟಿರುವುದು, ಅದನ್ನು ಉಳಿಸಿಕೊಂಡು ಬಂದಿರುವುದು ಜಗತ್ತಿಗೇ ಒಂದು ಕೊಡುಗೆ. ರಾಜಸ್ಥಾನ, ಗುಜರಾತಿನಲ್ಲಿ ದೇಸೀ ಗೋತಳಿಗಳನ್ನು ಉಳಿಸಿಕೊಂಡು ಬಂದಿರುವುದು, ಅಲ್ಲಿನ ಶೇ.90 ಮನೆಗಳಲ್ಲಿ ಗೋಸಾಕಣೆ, ಬಂಗಾಳದಲ್ಲಿ ಚೈತನ್ಯರು, ಇಸ್ಕಾನ್, ರಾಮಕೃಷ್ಣರು, ಶಾರದಾ ಮಾತೆಯವರಿಂದ ಆಧ್ಯಾತ್ಮಿಕಯುಕ್ತವಾದ ಭಕ್ತಿ ಆಂದೋಲನ, ಈಶಾನ್ಯ ರಾಜ್ಯಗಳಲ್ಲಿ ಕರಕುಶಲಕಲೆ, ಶಿವಾಜಿಯವರಿಂದ ಮಹಾರಾಷ್ಟ್ರದಲ್ಲಿ ಹಿಂದುತ್ವದ ಜಾಗೃತಿ, ರಾಜಸ್ಥಾನ, ಹರ್ಯಾಣಗಳಂತಹ ಉತ್ತರದ ರಾಜ್ಯಗಳಲ್ಲಿ ಸಾಹಸ ಮನೋಪ್ರವೃತ್ತಿ ಕಾಣಬಹುದು. ಇಂದು ನಾವು ಹೇಳುವ ಸ್ವತ್ಛಭಾರತದ ಕಲ್ಪನೆಯನ್ನು ಛತ್ತೀಸಗಢ, ಜಾರ್ಖಂಡ್, ಒಡಿಶಾದಲ್ಲಿರುವ ವನವಾಸಿ ಬಂಧುಗಳು ಶತಶತಮಾನಗಳಿಂದ ಆಚರಿಸಿಕೊಂಡು ಬಂದಿದ್ದಾರೆನ್ನುವುದು ಬಹಳ ಮುಖ್ಯ. ಅವರ ಮನೆಗಳಲ್ಲಿ ಪ್ರತಿನಿತ್ಯ ಗೋಮಯದಿಂದ ಸಾರಿಸಿ ರಂಗೋಲಿ ಹಾಕುತ್ತಾರೆ, ಎಲ್ಲವೂ ಸ್ವತ್ಛ. ಇದು ವಿಶೇಷ ದಿನಗಳಿಗೆ ಮಾತ್ರ ಸೀಮಿತವಲ್ಲ. ಮಧ್ಯಪ್ರದೇಶದ ಅರ್ಧಭಾಗ ವನವಾಸಿಗಳಿಂದ ಕೂಡಿದೆ. ಇವರ ಪ್ರಭಾವ ಕೃಷಿ, ಪರಿಸರ ಹೋರಾಟ, ಸಸ್ಯಸಂರಕ್ಷಣೆಯೇ ಮೊದಲಾದ ಚಟುವಟಿಕೆಗಳ ಮೂಲಕ ಇಡೀ ರಾಜ್ಯದ ಮೇಲೆ ಆಗಿದೆ. ಇಷ್ಟೆಲ್ಲ ವೈಶಿಷ್ಟéಗಳ ನಡುವೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಭಾರತದ ಏಕಾತ್ಮತೆ ಅಂತರ್ವಾಹಿನಿಯಾಗಿ ಹರಿಯುತ್ತಿದೆ ಎನ್ನುವ ಅನುಭೂತಿ, ದೈವಿಕ ಪ್ರೇಮದ ದರ್ಶನ ನನಗಾಗಿದೆ. ನೀವು ಜೀವನ ದರ್ಶನ ಎನ್ನುತ್ತೀರಿ? ಇದು ಹೇಗೆ?
ವಿವಿಧ ಕಡೆ ಹಲವು ವೈಶಿಷ್ಟéಗಳಿದ್ದರೂ ಇಡೀ ದೇಶದಲ್ಲಿ ಹರಿಯುತ್ತಿರುವ ಮೂಲಸ್ರೋತವೇ ಜೀವನ ದರ್ಶನ. ಜೀವನ ದರ್ಶನವೇ ಮಂತ್ರವಾಗಿ ಬಂದದ್ದಿರಬಹುದು ಎಂದು ನನಗೆ ಅನಿಸುತ್ತದೆ. ಜೀವನದಲ್ಲಿ ಕಂಡದ್ದು ಬಾಯಿಂದ ಮಂತ್ರವಾಗಿ ಬಂತು. ಶಾಸ್ತ್ರಗಳಲ್ಲಿ ಹೇಳಿದ್ದೇ ಲೋಕಗೀತೆ, ಗ್ರಾಮಗೀತೆ, ಜನಪದ ಗೀತೆಗಳಲ್ಲಿ ಕಂಡುಬರುತ್ತದೆ. ನಡವಳಿಕೆಯಲ್ಲಿ ಕಂಡದ್ದನ್ನು ಮಂತ್ರವಾಗಿ ರೂಪಿಸಿದರು. ಮುಂದೆ ವಿದ್ಯಾವಂತರೆನಿಸಿದವರು ಅದನ್ನು ಓದಿಕೊಂಡರು. ವಿದ್ಯಾವಂತರಲ್ಲದವರು ಜೀವನದಲ್ಲಿ ನಡೆದು, ಓದದೆ ಬದುಕಿದರು. ಹೀಗಾಗಿ ಓದುವುದು ಮುಖ್ಯವಲ್ಲ, ಬದುಕುವುದು ಮುಖ್ಯ, ಜೀವನದ ನಡೆ ನುಡಿ ಮುಖ್ಯ.
Related Articles
ಮುಖ್ಯವಾಗಿ ಬೇಕಾದದ್ದು ಪ್ರೇಮದ ಭಾಷೆ. ಅದೊಂದು ಇದ್ದರೆ ಇತರ ಭಾಷೆಗಳು ಮುಖ್ಯವಲ್ಲ. ಇನ್ನು ಎಲ್ಲ ಭಾಷೆಗಳಲ್ಲಿಯೂ ಶೇ.20-30 ಸಂಸ್ಕೃತದ ಶಬ್ದಗಳೇ ಇರುವುದರಿಂದ ಅರ್ಥ ಮಾಡಿಕೊಳ್ಳಲು ಕಷ್ಟವಲ್ಲ. ನಾನಾಗಿ ಭಾಷೆ ಕಲಿತದ್ದು ಏನೂ ಇಲ್ಲ, ಅದು ತಾನಾಗಿ ಬರುತ್ತದೆ. ಸಮಾಜವೇ ಕಲಿಸುತ್ತದೆ, ನಾವು ಸಮಾಜದ ಜತೆ ಇದ್ದರೆ ಸಾಕು.
Advertisement
ನೀವು ಉಳಿದುಕೊಳ್ಳುವ ಮನೆಗಳಲ್ಲಿ ಗೋವು ಇರಬೇಕೆಂಬ ನಿಯಮ ಹಾಕಿಕೊಂಡಿದ್ದೀರಲ್ಲ? ಈ ನಿಯಮ ಪಾಲನೆಗೆ ಕಷ್ಟವಾಯಿತೆ?ಬೆಳಗ್ಗೆದ್ದು ಹೊರಡುವಾಗ ಗೋಪೂಜೆ ಮಾಡಿ ಇನ್ನೊಂದೂರಿಗೆ ಹೊರಡುತ್ತಿದ್ದೆವು. ಎಷ್ಟೋ ಮಂದಿ ಗೋಪೂಜೆ ಮಾಡಬೇಕೆಂದು ಹಿಂದಿನ ದಿನ ಗೋವನ್ನು ತಂದು ಕಟ್ಟಿಕೊಂಡರು. ನಾವು ಹೊರಟು ಹೋದ ಬಳಿಕ “ನಾವು ತಪ್ಪು ಮಾಡಿದೆವು. ಗೋವನ್ನು ಕಟ್ಟಿಕೊಳ್ಳಬೇಕಿತ್ತು’ ಎಂದು ಭಾವಿಸಿ ಮತ್ತೆ ಅವರು ಗೋ ಸಾಕಣೆಗೆ ಮುಂದಾದ ಉದಾಹರಣೆಗಳೂ ಇವೆ. ನೀವು ಹೋದ ರಾಜ್ಯಗಳಲ್ಲಿ ಆಡಳಿತಾರೂಢರಿಗೆ ಪತ್ರ ಬರೆದು ಒತ್ತಾಯಿಸುತ್ತಿದ್ದೀರಿ? ನಿಮ್ಮ ಒತ್ತಾಯಗಳೇನು?
ನಾವು ಭಾರತವನ್ನು ತಿಳಿದು ಭಾರತರಾಗಿ ಭಾರತವನ್ನು ರೂಪಿಸಬೇಕು. ಗಡಿಬಿಡಿಯಲ್ಲಿ ಸ್ವಾತಂತ್ರ್ಯ ಬಂದ ಕಾರಣವೋ ಏನೋ ಶಿಕ್ಷಣ, ಆರ್ಥಿಕ, ಕಾನೂನು, ಹಣಕೇಂದ್ರಿತ ಚಿಂತನೆ, ಯಂತ್ರಾಧಾರಿತ ಬದುಕು ಹೀಗೆ ಎಲ್ಲವೂ ಬ್ರಿಟಿಷರ ವ್ಯವಸ್ಥೆಯೇ ಮುಂದುವರಿಯಿತು. ರಾಜ್ಯ ಸರಕಾರವಿರಬಹುದು, ಕೇಂದ್ರ ಸರಕಾರವಿರಬಹುದು- ಅವರು ಭಾರತವನ್ನು ಅರ್ಥ ಮಾಡಿಕೊಂಡು ಭಾರತೀಯ (ಸ್ವದೇಶೀ) ಚಿಂತನೆಯಲ್ಲಿ ನೀತಿ ರೂಪಣೆ ಮಾಡಬೇಕು. ಸ್ವದೇಶೀ ಚಿಂತನೆ ಎಂದಾಗ ಪ್ರಗತಿ ವಿರೋಧಿ ಆಗುತ್ತದೆಯಲ್ಲ?
ನಮ್ಮಲ್ಲೀಗ ಇರುವ ಪ್ರಗತಿ ಕಲ್ಪನೆ ವಿದೇಶೀ ಮೂಲದ್ದು. ನಮ್ಮ ದೇವಸ್ಥಾನಗಳಿರಬಹುದು, ವೇದಗಣಿತ, ವಿಜ್ಞಾನದ ಪರಿಕಲ್ಪನೆಗಳಿರಬಹುದು- ಗಮನಿಸಿದರೆ ಆಗಿನ ಭಾರತ ಈಗಿನದ್ದಕ್ಕಿಂತ ಹತ್ತು ಪಟ್ಟು ಮುಂದಿತ್ತು ಎನ್ನುವುದು ತಿಳಿಯುತ್ತದೆ. ಉದಾಹರಣೆಗೆ, ರಾಮಸೇತು- ಈಗಲೂ ಕಾಣುತ್ತಿದೆ. ಸಮುದ್ರದೊಳಗೆ ಹೇಗೆ ಸೇತುವೆಯನ್ನು ಕಟ್ಟಿದರು? ಇಂತಹ ಪ್ರಗತಿಗಳು ಆಗಲೂ ಇತ್ತು. ಈಗ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿದಾಗ ಇರುವ ನಾಟಿವೈದ್ಯ ಪದ್ಧತಿ, ಕರಕುಶಲಕಲೆಗಳನ್ನು ನೋಡಿದರೆ ನಮ್ಮ ವಿಕಾಸ ಹೇಗೆ ಇದುವರೆಗೆ ಹರಿದುಬಂದಿದೆ ಎನ್ನುವುದು ತಿಳಿಯುತ್ತದೆ. ಪ್ರಕೃತಿ, ಪರಿಸರವನ್ನು ಹಾಳು ಮಾಡಿ ಅಭಿವೃದ್ಧಿಪಡಿಸುವುದು ಸರಿಯಲ್ಲ. ಭೂಮಿ, ನೀರು, ಗಾಳಿಯನ್ನು ಮಲಿನಗೊಳಿಸಿ ಮಾಡುವ ಅಭಿವೃದ್ಧಿಯಿಂದ ಮತ್ತಷ್ಟು ಹಾನಿ ಇದೆ. ಪ್ರಕೃತಿಪ್ರಿಯರಾಗಿಯೇ ಅಭಿವೃದ್ಧಿ ಸಾಧಿಸಬಹುದು, ಅದು ಸ್ವದೇಶೀ ಕೇಂದ್ರಿತ ಕಲ್ಪನೆಯಿಂದ. ದುಃಖೀತ ಕುಟುಂಬಗಳ ಮನೆಗೆ ಭೇಟಿ ಕೊಡುತ್ತಿರುವ ಕಾರಣಗಳೇನು? ಇದರ ಅಗತ್ಯವೇನಿದೆ? ಪರಿಣಾಮ ಏನು?
ಗಂಭೀರ ಕಾಯಿಲೆಗಳಿರಬಹುದು, ಮೃತ್ಯು ಸಂಭವಿಸಿರಬಹುದು, ವಿಕಲಾಂಗರಿರಬಹುದು- ಹೀಗೆ ದುಃಖೀತ ಕುಟುಂಬಗಳನ್ನು ಪ್ರತಿನಿತ್ಯ ಭೇಟಿ ಮಾಡಿದ್ದೇನೆ. ಇದರಿಂದ ಅವರಿಗೆ ಕೌನ್ಸೆಲಿಂಗ್ ಆದಂತಾಗುತ್ತದೆ. ಇಂತಹ ಮನೆಯವರನ್ನು ಮಾತನಾಡಿಸುವವರ ಸಂಖ್ಯೆ ಬಹಳ ಕಡಿಮೆ ಇರುವುದರಿಂದ ಇದರ ಅಗತ್ಯವಿದೆ. ನಮಗೂ ಕೂಡ ಒಂದೂರಿನಲ್ಲಿ ಎಂತೆಂಥ ಸಮಸ್ಯೆಗಳಿವೆ ಎನ್ನುವುದು ತಿಳಿಯುತ್ತದೆ. ಅವರಿಗೊಂದು ವಿಶ್ವಾಸ, ಧೈರ್ಯ ಬರುತ್ತದೆ. ಪರಿಣಾಮ ತತ್‌ಕ್ಷಣವೇ ಗೊತ್ತಾಗುವುದಿಲ್ಲ. ಈಗ ನಗರಗಳ ಕಾಯಿಲೆಗಳು ಹಳ್ಳಿಗಳಿಗೆ ಬರುತ್ತಿವೆ. ಇದನ್ನು ವೈದ್ಯಕೀಯ ವಿಜ್ಞಾನ ಲೈಫ್ಸ್ಟೈಲ್ ಡಿಸೀಸ್ ಎಂದು ಕರೆಯುತ್ತದೆ. ಮಧುಮೇಹ, ಕ್ಯಾನ್ಸರ್, ಹೃದಯಾಘಾತ, ಸಂಧಿವಾತ (ಜಾಯಿಂಟ್ ಪೈನ್), ಬ್ರೈನ್ ಹೆಮರೇಜ್, ರಕ್ತದೊತ್ತಡ ಇತ್ಯಾದಿಗಳನ್ನು ಲೈಫ್ ಸ್ಟೈಲ್ ಡಿಸೀಸ್ ಎನ್ನುತ್ತಾರೆ. ಇದು ನೀವು ಈಗಾಗಲೇ ಪ್ರಶ್ನಿಸಿದಂತೆ ಆಧುನಿಕ ಪರಿಕಲ್ಪನೆಯ ಅಭಿವೃದ್ಧಿಯಿಂದ ಉಂಟಾದದ್ದು. “ಬೇಕು ಬೇಕು’ ಎಂಬ ಪಾಶ್ಚಾತ್ಯ ಜೀವನ ಶೈಲಿಯ ಆಧುನಿಕ ಜೀವನ ಪದ್ಧತಿ ಮಾನಸಿಕ ಒತ್ತಡಗಳನ್ನು ಸೃಷ್ಟಿಸುತ್ತದೆ. ಕಾಯಿಲೆಗಳು ಇದನ್ನು ಹಿಂಬಾಲಿಸುತ್ತವೆ. ಆಧುನಿಕ ಪ್ರಗತಿಯ ಪರಿಕಲ್ಪನೆ ಹೊರಗೆ ನೋಡಲು ಚೆನ್ನಾಗಿ ಕಾಣಬಹುದು. ಆದರೆ ಅದು ನಿಯಂತ್ರಣ ತಪ್ಪಿದರೆ ಹಾನಿ, ಸಾವು ನೋವು ಖಾತ್ರಿ ಎಂಬುದು ಅನುಭವಕ್ಕೆ ಬರುತ್ತದೆ. ಅತ್ಯಾಧುನಿಕ ಅಭಿವೃದ್ಧಿಯ ಅಮೆರಿಕದಲ್ಲಿ ಆತ್ಮಹತ್ಯಾ ಪ್ರಕರಣಗಳು ಅತಿ ಹೆಚ್ಚು. ಬೇಕು ಬೇಕು ಎನ್ನುವುದಾಗಲೀ, ಆವಶ್ಯಕತೆಗಳನ್ನು ಹೆಚ್ಚಿಸುವುದಾಗಲೀ ಭಾರತೀಯ ಪರಿಕಲ್ಪನೆಯಲ್ಲ, ಅತಿ ಕಡಿಮೆ ಆವಶ್ಯಕತೆಗಳನ್ನು ಹೊಂದುವುದು ಭಾರತೀಯ ಪರಿಕಲ್ಪನೆ. ಮುಂದೇನು ಮಾಡಲು ನಿರ್ಧರಿಸಿದ್ದೀರಿ?
ನಮ್ಮದು ಎನ್ನುವುದು ಏನೂ ಇಲ್ಲದ ಕಾರಣ ಯಾವ ನಿರ್ಧಾರವನ್ನೂ ಮಾಡಿಲ್ಲ. ಒಳಗಿನವನು ಹೇಳಿದಂತೆ ಆಗುತ್ತದೆ. ತಿರುಗಾಡಿಕೊಂಡೇ ಕೆಲಸ ಮಾಡಬೇಕೆಂದಿಲ್ಲ, ಒಂದು ಕಡೆ ಕುಳಿತೇ ಕೆಲಸ ಮಾಡಬಹುದು. ಸಂದರ್ಶನ: ಮಟಪಾಡಿ ಕುಮಾರಸ್ವಾಮಿ