Advertisement

SIT: 3 ದೇಶಗಳ ಬಿಟ್‌ ಕಾಯಿನ್‌ ಮಾಹಿತಿಗೆ ಕಾದ ಎಸ್‌ಐಟಿ!

12:28 AM Dec 20, 2023 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್‌ ಹಗರಣದ ಜಾಡು ಹಿಡಿಯಲು ಹೊರಟಿರುವ ವಿಶೇಷ ತನಿಖಾ ದಳವು (ಎಸ್‌ಐಟಿ) ಸದ್ಯ ಐರ್ಲೆಂಡ್‌, ಸಿಷೆಲ್ಸ್‌, ಸ್ವಿಡ್ಜರ್‌ಲ್ಯಾಂಡ್‌ ದೇಶಗಳಿಂದ ಲಭ್ಯವಾಗಬೇಕಿರುವ ಮಹತ್ವದ ಮಾಹಿತಿಗಾಗಿ ಕಾದು ಕುಳಿತಿದೆ.

Advertisement

ಬಿಟ್‌ಕಾಯಿನ್‌ ಹಗರಣದ ತನಿಖೆಗಾಗಿ ರಾಜ್ಯ ಸರಕಾರ ನೇಮಿಸಿರುವ ಸಿಐಡಿ ಘಟಕದ ಎಸ್‌ಐಟಿ ತಂಡ ತನಿಖೆ ಚುರುಕುಗೊಳಿಸಿದೆ. ಬಿಟ್‌ಕಾಯಿನ್‌ ಹಗರಣ ಸಂಬಂಧಿತ ತನಿಖೆಗೆ ಅಗತ್ಯವಿರುವ ಮಹತ್ವದ ತಾಂತ್ರಿಕ ಮಾಹಿತಿ ನೀಡುವಂತೆ ಐರ್ಲೆಂಡ್‌, ಸಿಷೆಲ್ಸ್‌, ಸ್ವಿಡ್ಜರ್‌ಲ್ಯಾಂಡ್‌ ದೇಶಗಳಿಗೆ ಎಸ್‌ಐಟಿ ತಂಡ ಇಂಟರ್‌ಪೋಲ್‌ ಮೂಲಕ ಮನವಿ ಸಲ್ಲಿಸಿದೆ. ಈ ದೇಶಗಳಿಂದ ಸಿಗುವ ಮಾಹಿತಿ ಆಧಾರದಲ್ಲಿ ತನಿಖೆಯ ಮುಂದಿನ ಹಾದಿ ನಿರ್ಧಾರವಾಗಲಿದೆ.

ಇನ್ನು ಅಮೆರಿಕ, ಫಿನ್‌ಲ್ಯಾಂಡ್‌, ಲೆಕ್ಸೆಂಬರ್ಗ್‌, ಹಾಂಗ್‌ಕಾಂಗ್‌, ಕೊರಿಯಾ, ಸಿಂಗಾಪುರ, ಇರಾನ್‌, ಟರ್ಕಿ, ನೈಜೀರಿಯಾ ದೇಶಗಳ ಕೆಲವೊಂದು ಸಂಸ್ಥೆಗಳಿಂದ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬೇಕಾಗಿದೆ. ತನಿಖೆಗೆ ಅಗತ್ಯವಿರುವ ದಾಖಲೆ, ಸಾಕ್ಷ್ಯ ಒದಗಿಸುವಂತೆ ಮೇಲಿನ 9 ದೇಶಗಳಿಗೂ ಕಾನೂನು ಪ್ರಕ್ರಿಯೆ ಮೂಲಕವೇ ಎಸ್‌ಐಟಿ ಮನವಿ ಸಲ್ಲಿಸಿದೆ. ವಿದೇಶಿ ಸಂಸ್ಥೆಗಳಿಂದ ಹಾಗೂ ಕ್ರಿಪ್ಟೋ ಕರೆನ್ಸಿ ಎಕ್ಸಚೇಂಜ್‌ಗಳ ಮಹತ್ವದ ದಾಖಲೆಗಳಿಗಾಗಿ ಎಸ್‌ಐಟಿ ಕಾದು ಕುಳಿತಿದೆ. ಜೊತೆಗೆ ಕ್ರಿಪ್ಟೋ ಕರೆನ್ಸಿ ಕುರಿತು ತಾಂತ್ರಿಕ ಪರಿಣಿತರ ವಿಶ್ಲೇಷಣಾ ವರದಿ ಶೀಘ್ರದಲ್ಲೇ ಎಸ್‌ಐಟಿ ಕೈ ಸೇರಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ತನಿಖಾಧಿಕಾರಿ ನಿವಾಸದಲ್ಲೂ ಶೋಧ
ಕೆಂಪೇಗೌಡನಗರ ಪೊಲೀಸ್‌ ಠಾಣೆಯ ಪ್ರಕರಣದ ತನಿಖೆ ವೇಳೆ ವಶಪಡಿಸಿಕೊಂಡ ಎಲೆಕ್ಟ್ರಾನಿಕ್‌ ಉಪಕರಣಗಳಲ್ಲಿ ಹಿಂದಿನ ತನಿಖಾಧಿಕಾರಿಗಳ ಅವಧಿಯಲ್ಲಿ ಸಾಕ್ಷ್ಯಾಧಾರ ನಾಶಪಡಿಸಿರುವುದು, ತಿರುಚಿರುವ ಬಗ್ಗೆ ಎಫ್ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿದೆ. ಇದರ ಬೆನ್ನಲ್ಲೇ ಈ ಹಿಂದೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್‌ ಅಧಿಕಾರಿಗಳ ಮನೆ, ತನಿಖೆಯಲ್ಲಿ ನೆರವಾಗಿದ್ದ ತಾಂತ್ರಿಕ ಪರಿಣಿತರ ಮನೆ, ಕಚೇರಿ ಸೇರಿ ಬೆಂಗಳೂರು, ಗೋವಾ ಹಾಗೂ ಪಶ್ಚಿಮ ಬಂಗಾಳದಲ್ಲಿ 11 ಕಡೆ ಎಸ್‌ಐಟಿ ಶೋಧನೆ ನಡೆಸಿ ಬಿಟ್‌ಕಾಯಿನ್‌ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ಎಲೆಕ್ಟ್ರಾನಿಕ್‌ ಉಪಕರಣ ವಶಪಡಿಸಿಕೊಂಡಿದೆ. ಈ ಪೈಕಿ ಕೆಲ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ತಾಂತ್ರಿಕ ಪರಿಣಿತರಿಂದ ಪರಿಶೀಲಿಸಿ ಹೆಚ್ಚುವರಿ ಸಾಕ್ಷ್ಯಾಧಾರ ಕಲೆಹಾಕಲಾಗುತ್ತಿದೆ.

ಎಸ್‌ಐಟಿ ಏನೆಲ್ಲ ತನಿಖೆ ಮಾಡಿದೆ?
ಆರೋಪಿಗಳ ಕ್ರಿಪ್ಟೋ ವ್ಯಾಲೆಟ್‌, ಬ್ಯಾಂಕ್‌ ಖಾತೆಗಳ ವ್ಯವಹಾರಗಳ ಪರಿಶೀಲನೆ ನಡೆಸಲಾಗಿದ್ದು, ತಾಂತ್ರಿಕ ಸಾಕ್ಷ್ಯ ಸಂಗ್ರಹಿಸಲಾಗಿದೆ. ಕೃತ್ಯ ಎಸಗಲು ಆರೋಪಿಗಳು ಬಿಟ್‌ಕಾಯಿನ್‌ ಟ್ರೇಡಿಂಗ್‌, ಬ್ಲಾಕ್‌ಚೈನ್‌, ಡಾರ್ಕ್‌ವೆಬ್‌ ಬಳಸಿರುವುದರಿಂದ ಇವುಗಳ ವ್ಯವಹಾರದ ಕುರಿತು ಮಾಹಿತಿ ಕಲೆ ಹಾಕುವುದೇ ಎಸ್‌ಐಟಿಗೆ ಸವಾಲಾಗಿದೆ. ಹೀಗಾಗಿ ಸರ್ಕಾರದ ಅನುಮತಿ ಪಡೆದು ಖಾಸಗಿ ತಾಂತ್ರಿಕ ಪರಿಣಿತರ ಸಲಹೆ ಪಡೆದು ಬಿಟ್‌ ಕಾಯಿನ್‌ನಲ್ಲಿ ಆರೋಪಿಗಳು ಹೇಗೆ ವ್ಯವಹಾರ ನಡೆಸಿದ್ದಾರೆಂಬ ಕುರಿತು ಮಾಹಿತಿ ಕಲೆ ಹಾಕಲಾಗಿದೆ.

Advertisement

ಏನಿದು ಪ್ರಕರಣ?
2020ರಲ್ಲಿ ಬಿಟ್‌ ಕಾಯಿನ್‌ ಹಗರಣ ಬೆಳಕಿಗೆ ಬಂದಿತ್ತು. ಪ್ರಕರಣದ ಕಿಂಗ್‌ಪಿನ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ಹಾಗೂ ಇತರರು ವಿವಿಧ ವೆಬ್‌ಸೈಟ್‌, ಕ್ರಿಪ್ಟೋ ಕರೆನ್ಸಿ ಎಕ್ಸ್‌ಚೇಂಜ್‌, ಗೇಮಿಂಗ್‌ ಪೋರ್ಟಲ್‌ಗ‌ಳನ್ನು ಹ್ಯಾಕ್‌ ಮಾಡಿ ಅಕ್ರಮ ಲಾಭಗಳಿಸಿ ಕೋಟ್ಯಂತರ ರೂ. ಸಂಪಾದಿಸಿರುವ ಆರೋಪ ಕೇಳಿ ಬಂದಿತ್ತು. ಸ್ಥಳೀಯ ಪೊಲೀಸರು ತನಿಖೆ ನಡೆಸಿದಾಗ ಇದರ ಹಿಂದೆ ಅಂತಾರಾಷ್ಟ್ರೀಯ ಜಾಲಗಳು ಭಾಗಿಯಾಗಿ ಬಿಟ್‌ಕಾಯಿನ್‌ ಹಾಗೂ ಡಾರ್ಕ್‌ನೆಟ್‌ಗಳಲ್ಲಿ ವ್ಯವಹಾರ ನಡೆಸಿರುವುದು ಕಂಡು ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರವು 2023 ಜೂನ್‌ನಲ್ಲಿ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಿತ್ತು.

 ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next