Advertisement

HD Revanna ಫಾರ್ಮ್ ಹೌಸ್‌ನಲ್ಲಿ ಎಸ್‌ಐಟಿ ತಂಡ ಪರಿಶೀಲನೆ

11:25 PM May 03, 2024 | Team Udayavani |

ಹೊಳೆನರಸೀಪುರ: ಸಂಸದ ಪ್ರಜ್ವಲ್‌ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಎಸ್‌ಐಟಿ ತಂಡ ತಾಲೂಕಿನ ವಿವಿಧೆಡೆ ಶೋಧ ನಡೆಸಿತು.

Advertisement

ಶುಕ್ರವಾರ ಮುಂಜಾನೆ 3.15ಕ್ಕೆ ಎಸ್ಪಿ ಸೀಮಾ ಲಾಟ್ಕರ್‌ ನೇತೃತ್ವದಲ್ಲಿ ಹಾಸನ ಜಿಲ್ಲೆಗೆ ಐದು ವಾಹನಗಳಲ್ಲಿ ಆಗಮಿಸಿದ ತನಿಖಾ ತಂಡ, ಪಡುವಲಹಿಪ್ಪೆ ಗ್ರಾಮದ ಎಚ್‌.ಡಿ.ರೇವಣ್ಣ ಅವರಿಗೆ ಸೇರಿದ ಫಾರ್ಮ್ ಹೌಸ್‌, ಗನ್ನಿಕಡ ಹಾಗೂ ಕಾಮೇನಹಳ್ಳಿ ಗ್ರಾಮದ ಬಳಿ ಇರುವ ಫಾರ್ಮ್ ಹೌಸ್‌ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಪೆನ್‌ಡ್ರೈವ್‌ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಗಳು ಈ ಫಾರ್ಮ್ ಹೌಸ್‌ ಗಳಲ್ಲಿ ಚಿತ್ರೀಕರಣ ಆಗಿವೆಯೇ ಎಂಬ ಬಗ್ಗೆ ತಂಡ ಮಾಹಿತಿ ಕಲೆ ಹಾಕಿತು. ಪಡುವಲಹಿಪ್ಪೆ ಫಾರ್ಮ್ ಹೌಸ್‌ ನಲ್ಲಿರುವ ಅಸ್ಸಾಂ ಹಾಗೂ ಬಿಹಾರ ಮೂಲದ ಕಾರ್ಮಿಕರಿಂದಲೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು. ಮೊಬೈಲ್‌ನಲ್ಲಿದ್ದ ಫೋಟೋವನ್ನು ಕಾರ್ಮಿಕರಿಗೆ ತೋರಿಸಿದ ತನಿಖಾ ತಂಡ ಇವರು ಇಲ್ಲಿಗೆ ಈ ಹಿಂದೆ ಬಂದಿದ್ದರೇ ಎಂದು ಕೇಳಿದರೆಂದು, ಇವರನ್ನು ನೋಡಿಲ್ಲ ಎಂದು ಕಾರ್ಮಿಕರು ಉತ್ತರಿಸಿದ್ದಾರೆ ಎಂದು ತಿಳಿದು ಬಂದಿದೆ.

30ಕ್ಕೂ ಹೆಚ್ಚು ಮಂದಿ ಇದ್ದ ಅಧಿಕಾರಿಗಳು ಹಾಗೂ ಸಿಬಂದಿ ಏಕಕಾಲಕ್ಕೆ ಮೂರೂ ಕಡೆ ದಾಳಿ ನಡೆಸಿ ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.

ಎಚ್‌.ಡಿ.ರೇವಣ್ಣಗೆ ಮತ್ತೊಂದು ನೋಟಿಸ್‌
ಹೊಳೆನರಸೀಪುರ: ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮೊದಲ ನೋಟಿಸ್‌ಗೆ ಯಾವುದೇ ಉತ್ತರ ನೀಡದ ಮಾಜಿ ಸಚಿವ ರೇವಣ್ಣ ಅವರಿಗೆ ಎಸ್‌ಐಟಿಯಿಂದ ಮತ್ತೊಂದು ನೋಟಿಸ್‌ ಜಾರಿ ಮಾಡಲಾಗಿದೆ.

Advertisement

ಹೊಳೆನರಸೀಪುರದ ಅವರ ನಿವಾಸಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ, ಎಸ್‌ಐಟಿ ನೋಟಿಸ್‌ ನೀಡಿದರು. ಪಿಎಸ್‌ಐ ಅಜಯ್‌ ಕುಮಾರ್‌ ಜತೆ ಮಹಿಳಾ ಸಿಬಂದಿಯೂ ಇದ್ದರು. ಆಗ ರೇವಣ್ಣ ಹಾಗೂ ಪತ್ನಿ ಭವಾನಿ ಮನೆಯಲ್ಲೇ ಇದ್ದರು ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next