Advertisement

ರೋಷನ್‌ ಬೇಗ್‌ಗೆ ಎಸ್‌ಐಟಿ ನೋಟಿಸ್‌

10:59 PM Jul 09, 2019 | Team Udayavani |

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಮಾಜಿ ಸಚಿವ ಆರ್‌.ರೋಷನ್‌ ಬೇಗ್‌ಗೆ ನೋಟಿಸ್‌ ಜಾರಿ ಮಾಡಿದ್ದು, ಇದೇ ಜು.11ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

Advertisement

ಐಎಂಎ ಮುಖ್ಯಸ್ಥ ಹಾಗೂ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಜೂ.8ರಂದು ವಿದೇಶಕ್ಕೆ ಪರಾರಿಯಾದ ಬಳಿಕ ಅಜ್ಞಾತ ಸ್ಥಳದಲ್ಲಿ ಕುಳಿತು ಕೆಲ ಆಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿದ್ದ. ಆ ಆಡಿಯೋಗಳಲ್ಲಿ ಶಿವಾಜಿನಗರದ ಶಾಸಕ ಆರ್‌.ರೋಷನ್‌ ಬೇಗ್‌ಗೆ 400 ಕೋಟಿ ರೂ. ಕೊಟ್ಟಿರುವುದಾಗಿ ಹೇಳಿಕೊಂಡಿದ್ದ. ಅಲ್ಲದೆ, ರೋಷನ್‌ ಬೇಗ್‌ ಕಾಟದಿಂದಲೇ ದೇಶ ಬಿಡುವ ಪರಿಸ್ಥಿತಿ ನಿರ್ಮಾಣವಾಯಿತು ಎಂಬುದೂ ಸೇರಿದಂತೆ ಕೆಲ ಗಂಭೀರ ಆರೋಪಗಳನ್ನು ಮಾಡಿದ್ದ.

ಈ ಮಧ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವಂಚಕ ಸಂಸ್ಥೆಯ ನಿರ್ದೇಶಕರು ಹಾಗೂ ಬಿಬಿಎಂಪಿಯ ನಾಮನಿರ್ದೇಶಿತ ಸದಸ್ಯ ಸೈಯದ್‌ ಮುಜಾಹಿದ್‌ ಕೂಡ ರೋಷನ್‌ ಬೇಗ್‌ ಹೆಸರು ಪ್ರಸ್ತಾಪ ಮಾಡಿದ್ದರು. ಈ ಎಲ್ಲ ಆರೋಪಿಗಳ ಹೇಳಿಕೆ ಹಾಗೂ ಇತರೆ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ರೋಷನ್‌ ಬೇಗ್‌ಗೆ ಮಂಗಳವಾರ ಬೆಳಿಗ್ಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

12ರವರೆಗೆ ಡಿಸಿ ಎಸ್‌ಐಟಿ ವಶಕ್ಕೆ: ಆರೋಪಿ ಮನ್ಸೂರ್‌ ಖಾನ್‌ ಹಾಗೂ ಆತನ ಐಎಂಎ ಸಂಸ್ಥೆಯ ಪರವಾಗಿ ಸರ್ಕಾರಕ್ಕೆ ಅನುಕೂಲಕರ ವರದಿ ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ. ವಿಜಯ ಶಂಕರ್‌ ಅವರನ್ನು ಜುಲೈ 12ರವರೆಗೆ ಎಸ್‌ಐಟಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದೆ.

ಮಂಗಳವಾರ ಎಸ್‌ಐಟಿ ಅಧಿಕಾರಿಗಳು ವಿಜಯ ಶಂಕರ್‌ ಅವರನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಈ ಹಿಂದೆ ಬಂಧನಕ್ಕೊಳಗಾಗಿದ್ದ ಆರೋಪಿಗಳು ಕೆಲ ಮಹತ್ವದ ಮಾಹಿತಿಯನ್ನು ಬಹಿರಂಗ ಪಡಿಸಿದ್ದು, ಈ ಬಗ್ಗೆ ವಿಜಯ ಶಂಕರ್‌ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಹೀಗಾಗಿ ಏಳು ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ ಕೋರ್ಟ್‌ ನಾಲ್ಕು ದಿನ ಎಸ್‌ಐಟಿ ವಶಕ್ಕೆ ನೀಡಿ ಆದೇಶಿಸಿದೆ.

Advertisement

90 ಲಕ್ಷ ರೂ. ಮೌಲ್ಯದ ಗೋಲ್ಡ್‌ ಬಿಸ್ಕೆಟ್‌ ವಶಕ್ಕೆ: ಐಎಂಎ ಸಮೂಹ ಸಂಸ್ಥೆಗೆ ಸೇರಿದ ಶಿವಾಜಿನಗರದಲ್ಲಿರುವ “ದತ್ತ ಚಿನ್ನ ಮತ್ತು ಬೆಳ್ಳಿ ಸಂಸ್ಕರಣಾ ಕೇಂದ್ರ’ದ ಮೇಲೆ ಮಂಗಳವಾರ ಎಸ್‌ಐಟಿ ದಾಳಿ ನಡೆಸಿದೆ. ಈ ವೇಳೆ 90 ಲಕ್ಷ ರೂ ಮೌಲ್ಯದ ಚಿನ್ನದ ಬಿಸ್ಕೆಟ್‌ಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ವೇಳೆ 71.39 ಲಕ್ಷ ರೂ ಮೌಲ್ಯದ 2325ಗ್ರಾಂ ತೂಕದ ಚಿನ್ನದ ಬಿಸ್ಕೆಟ್‌ಗಳು ಹಾಗೂ 18.61 ಲಕ್ಷ ರೂ.ನಗದು ಪತ್ತೆಯಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next