ದಾವಣಗೆರೆ: ಪ್ರಧಾನ ಮಂತ್ರಿಯವರ ಹೊಸ 15 ಅಂಶಗಳ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನ ಹಾಗೂ ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾ ಸಮಿತಿ ಸಭೆ ಆಯೋಜಿಸಲು ಒತ್ತಾಯಿಸಿ ಮಂಗಳವಾರ ಮುಸ್ಲಿಂ ಮಹಿಳಾ ಒಕ್ಕೂಟ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಹಲವಾರು ಅಧ್ಯಯನದ ಪ್ರಕಾರ ಮುಸ್ಲಿಂ ಸಮಾಜ ಶಿಕ್ಷಣ, ಸರ್ಕಾರಿ, ಸ್ವಯಂ ಉದ್ಯೋಗ, ಆರ್ಥಿಕ ಒಳಗೊಂಡಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿ ಹಿಂದುಳಿದಿದೆ. ಸಾಚಾರ್ ಸಮಿತಿ ಮುಸ್ಲಿಂ ಸಮಾಜದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಹಿಂದುಳಿದಿರುವ ಬಗ್ಗೆ ಅಧ್ಯಯನ ನಡೆಸಿ, ಕೇಂದ್ರ ಸರ್ಕಾರಕ್ಕೆ 2006 ನ. 30ರಂದು ವರದಿ ಸಲ್ಲಿಸಿತ್ತು.
10 ವರ್ಷವಾದರೂ ಸಾಚಾರ್ ಸಮಿತಿ ವರದಿ ಸಮರ್ಪಕವಾಗಿ ಜಾರಿಗೊಳಿಸಿಲ್ಲ. ಪ್ರಧಾನ ಮಂತ್ರಿಯವರ ಹೊಸ 15 ಅಂಶಗಳ ಕಾರ್ಯಕ್ರಮದ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು. ಮುಸ್ಲಿಂ ಸಮಾಜವನ್ನು ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಿವೆ.
ಒಟ್ಟು ಯೋಜನೆಗಳು ಮತ್ತು ಅನುದಾನದಲ್ಲಿ ಭೌತಿಕ ಮತ್ತು ಆರ್ಥಿಕವಾಗಿ ಮುಸ್ಲಿಂ ಸಮಾಜಕ್ಕೆ ಶೇ. 15 ರಷ್ಟು ಮೀಸಲಿಡುವಂತಾಗಬೇಕು ಎಂಬುದು ಸರ್ಕಾರದ ಆಶಯ. ಹಾಗಾಗಿ ಪ್ರತಿ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಕಾರ್ಯಕ್ರಮ ಅನುಷ್ಠಾನದ ಅವಲೋಕನ ಮಾಡಬೇಕಿದೆ. ಇನ್ನು ಮುಂದೆ ಕಡ್ಡಾಯವಾಗಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಯೋಜನೆಗಳು ಮತ್ತು ಅನುದಾನದಲ್ಲಿ ಶೇ.15ರಷ್ಟು ಮೀಸಲು ಅನುದಾನವನ್ನು ಮುಸ್ಲಿಂ ಸಮಾಜದ ಅಭಿವೃದ್ಧಿಗೆ ಕಡ್ಡಾಯ ಹಾಗೂ ಪರಿಣಾಮಕಾರಿಯಾಗಿ ಬಳಸಬೇಕು. ಎಲ್ಲಾ ಇಲಾಖೆ ಅನುದಾನ ಬಳಕೆ ಮಾಡಿರುವ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. 2017-18ನೇ ಸಾಲಿನಲ್ಲಿ ಖರ್ಚು ಮಾಡುವ ಅನುದಾನದ ಬಗ್ಗೆ ಕ್ರಿಯಾ ಯೋಜನೆ ರೂಪಿಸಬೇಕು.
ಪ್ರತಿ 3 ತಿಂಗಳಿಧಿ ಗೊಮ್ಮೆ ನಡೆಸುವ ಸಭೆಯಲ್ಲಿ ಮುಸ್ಲಿಂ ಮಹಿಳಾ ಒಕ್ಕೂಟದ ಪ್ರತಿನಿಧಿಗಳು ಭಾಗವಹಿಸುವ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಮುಸ್ಲಿಂ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಜಬೀನಾಖಾನಂ, ಸಹ ಸಂಚಾಲಕಿ ಶಿರೀನ್‌ಬಾನು, ಸಬೀನ್‌ತಾಜ್, ಹಸೀನಾಬಾನು, ನಗೀನಾಬಾನು, ಗುಲ್ಜಾರ್‌ಬಾನು, ನಾಹೇರ್ ಜಾನ್, ನಾಜೀಮಾಬಾನು, ಯಾಸೀನ್‌ಬಾನು, ನೂರ್‌ಫಾತಿಮಾ, ಗುಲ್ಜಾರ್, ರಮೀಜಾಬಿ, ದಿಲ್ ಷಾದ್ ಬೀ, ಎಂ. ಕರಿಬಸಪ್ಪ ಇತರರು ಇದ್ದರು.