ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದ ತನಿಖೆ ಮುಂದುವರಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ವಂಚಕ ಸಂಸ್ಥೆಗೆ ಸೇರಿದ 2 ಕೋಟಿ ರೂ.ಗೂ ಅಧಿಕ ಮೌಲ್ಯದ ಚರಾಸ್ತಿ ಮತ್ತು 2.20 ಕೋಟಿ ರೂ. ನಗದು ವಶಕ್ಕೆ ಪಡೆದಿದೆ.
ಸಕ್ಷಮ ಪ್ರಾಧಿಕಾರ ಪ್ರಾದೇಶಿಕ ಆಯುಕ್ತರ ನೇತೃತ್ವದ ತಂಡದ ಜತೆ ಜಂಟಿ ಕಾರ್ಯಾಚರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು, ಐಎಂಎ ಸಂಸ್ಥೆಯ ಜಯನಗರ, ಯಶವಂತಪುರ, ಶಿವಾಜಿನಗರ, ತಿಲಕನಗರ ಶಾಖೆಗಳು ಮತ್ತು ಬನ್ನೇರುಘಟ್ಟ ರಸ್ತೆಯಲ್ಲಿರುವ ಐಎಂಎ ಪಬ್ಲಿಷರ್ಸ್ ಪ್ರೈವೆಟ್ ಲಿಮಿಡೆಟ್ ಮೇಲೆ ದಾಳಿ ನಡೆಸಿದ್ದಾರೆ.
ಈ ವೇಳೆ ಪೀಠೊಪಕರಣ ಸೇರಿದಂತೆ ಚರಾಸ್ಥಿಗಳನ್ನು ಪಟ್ಟಿಮಾಡಿ ಮಹಜರು ಮಾಡಿ, ಹರಾಜಿಗೆ ಕ್ರಮ ಕೈಗೊಳ್ಳಲಾಗುವುದು. ಅವುಗಳ ಒಟ್ಟು ಮೌಲ್ಯ 2.15 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.
2.20 ಕೋಟಿ ರೂ. ನಗದು ಜಪ್ತಿ: ಆರೋಪಿ ಮನ್ಸೂರ್ ಖಾನ್‌ಜತೆ ಸ್ಕೈವಾಕ್ ನಿರ್ಮಾಣ ವ್ಯವಹಾರ ಹೊಂದಿದ್ದ ಅಬ್ದುಲ್ ಸಾಬೀರ್ ಎಂಬಾತ, ಖಾನ್‌ನಿಂದ 2 ಕೋಟಿ ರೂ. ಪಡೆದಿದ್ದ. ಈ ಹಿನ್ನೆಲೆಯಲ್ಲಿ ಅಬ್ದುಲ್ ಸಾಬೀರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡು, ಡಿಡಿ ಮೂಲಕ 2 ಕೋಟಿ ರೂ. ಹಿಂದಿರುಗಿಸಿದ್ದಾರೆ. ಅಲ್ಲದೆ, ಆರೋಪಿ ಮನ್ಸೂರ್ ಖಾನ್, ನವನೀತ್ ಮೋಟಾರ್ಸ್‌ನಲ್ಲಿ ಬಿಎಂಡಬ್ಲೂ ಕಾರು ಖರೀದಿಸಲು ಮುಂಗಡವಾಗಿ ನೀಡಿದ್ದ 10 ಲಕ್ಷ ರೂ.ಗಳನ್ನೂ ಡಿಡಿ ಮೂಲಕ ಪಡೆದುಕೊಳ್ಳಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.
ಮನ್ಸೂರ್ ಖಾನ್‌ಗೆ ಸ್ಟಂಟ್ ಅಳವಡಿಕೆ: ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್‌ಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಸ್ಟಂಟ್ ಅಳವಡಿಸಿ ಮತ್ತೆ ಜೈಲಿಗೆ ಕಳಿಸಲಾಗಿದೆ. ಮನ್ಸೂರ್ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದ ಕಾಲವಕಾಶ ಮುಗಿಯುತ್ತಿದ್ದಂತೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಮಧ್ಯೆ ಕಾಯಿಲೆ ಹೆಚ್ಚಾದ ಕಾರಣ ವೈದ್ಯರ ಸೂಚನೆ ಮೇರೆಗೆ ಸ್ಟಂಟ್ ಅಳವಡಿಸಲಾಗಿದೆ. ಎರಡು ದಿನ ಮನ್ಸೂರ್ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದಿದ್ದು, ಭಾನುವಾರ ಆಸ್ಪತ್ರೆಯಿಂದ ಜೈಲಿಗೆ ರವಾನಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅಧಿಕಾರಿಗಳು, ಮನ್ಸೂರ್ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ. ಈ ನಡುವೆ ಸಿಬಿಐ ಅಧಿಕಾರಿಗಳು ಪ್ರಕರಣದ ಕಡತಗಳನ್ನು ಸದ್ಯದಲ್ಲೇ ಪಡೆದುಕೊಳ್ಳಲಿದ್ದಾರೆ.