Advertisement
ಸಣ್ಣಪುಟ್ಟ ಮುನಿಸಿನ ನಡುವೆಯೂ ಒಬ್ಬರಿಗೊಬ್ಬರು ಆಸರೆಯಾಗುವ ಅನಂತ ಉದಾಹರಣೆಗಳಿವೆ… “ಅಮ್ಮಾ, ತಂಗಿ ಹೊರಗೆ ಓಡುತ್ತಿದ್ದಾಳೆ ಬಾ ಎತ್ತಿಕೋ’, “ಅವಳನ್ನು ಶಾಲೆಗೆ ನನ್ನೊಡನೆ ಕಳುಹಿಸಬೇಡಮ್ಮ. ಗೆಳತಿಯರು ಹೊಡೆಯಬಹುದು’, “ನನಗೆ ಬೇಡಮ್ಮ, ಅವಳು ಸಣ್ಣವಳು. ಅವಳಿಗೇ ಕೊಡು’ ಎಂದು ತನ್ನ ಪಾಲನ್ನೂ ನೀಡುವ, ತಂಗಿ ತೀಟೆ ಮಾಡಿದಾಗ ಅವಳ ಪರ ವಹಿಸಿ ತಂದೆಯ ಹೊಡೆತವನ್ನು ತಪ್ಪಿಸುವವಳೇ ಅಕ್ಕ. ಶಾಲೆಗೆ ಕೈಹಿಡಿದು ಕರೆದುಕೊಂಡು ಹೋಗಿ, ಆಟ- ಪಾಠಗಳನ್ನು ಹೇಳಿಕೊಟ್ಟಾಕೆ.
Related Articles
Advertisement
ಅಕ್ಕ, ಮಗನಿಗೆ ಅಜಯನೆಂದು ಹೆಸರಿಟ್ಟು, ಆ ಹೆಸರು ಚಂದವೆಂದು ತನ್ನ ಮಗನಿಗೆ ವಿಜಯನೆಂದು ತಂಗಿ ಹೆಸರಿಟ್ಟರೆ ಅದನ್ನೂ ತಪ್ಪೆಂದು ಭಾವಿಸುವವರು ಇದ್ದಾರೆ! ತಂಗಿ ಗರ್ಭಿಣಿಯೆಂದು ತಿಳಿದು ವಾಕರಿಕೆ, ಸುಸ್ತು ಜಾಸ್ತಿಯೆಂದು ಅಮ್ಮ ಅವಳ ಬಳಿ ಹದಿನೈದು ದಿನ ಇದ್ದು ಆರೈಕೆ ಮಾಡಿದರೂ, ಅಕ್ಕನಿಗೆ ಸಿಟ್ಟು. ನಾನು ಗರ್ಭಿಣಿಯಿದ್ದಾಗಲೂ ಬಾರದವಳು, ತಂಗಿಗೋಸ್ಕರ ಅವಳ ಮನೆಗೆ ಓಡಿದ್ದಾಳೆ ನೋಡು ಎಂಬ ಸಿಡಿಮಿಡಿಯ ಭಾವನೆ. ಅವಳ ಹೆರಿಗೆ ಸಮಯದಲ್ಲಿ ಅಪ್ಪನಿಗಾದ ಆಪರೇಷನ್‌ನ ಕಾರಣ ತಾಯಿ ಬರಲಿಲ್ಲವೆಂಬ ಅಂಶವನ್ನು ಹೇಗೆ ಮರೆತಳ್ಳೋ?!
ರಿಯಾಳ ಅಕ್ಕನ ಮಗನಿಗೆ ಅವರಪ್ಪ ಸೈಕಲ… ಕೊಡಿಸಿದ್ದರು. ಅವರು ಕಾಲವಾದ ನಂತರ ಹುಟ್ಟಿದ ರಿಯಾಳ ಮಗಳಿಗೆ ತವರಿನವರು ಸೈಕಲ… ಕೊಡಿಸಿಲ್ಲವೆಂದು ಕೋಪ! ತನಗೆ ಹೊಸ ಬಟ್ಟೆ, ಹೊಸ ಬ್ಯಾಗು, ಪುಸ್ತಕ ಯಾವುದೂ ಇಲ್ಲ. ಎಲ್ಲವೂ ಅಕ್ಕ ಉಪಯೋಗಿಸಿ ಕೊಟ್ಟ ವಸ್ತುಗಳೇ ಎಂದು ಕೆಲವು ತಂಗಿಯರ ಕೊರಗು. ತಂಗಿ ಸಣ್ಣವಳು ಎಂದು ಅವಳನ್ನು ಎಲ್ಲರೂ ಪ್ರೀತಿಸುತ್ತಾರೆ. ನನ್ನನ್ನು ಯಾರೂ ಕೇಳುವವರೇ ಇಲ್ಲ ಎಂಬ ಮುನಿಸು ಅಕ್ಕನದು. ಈ ಸಣ್ಣಪುಟ್ಟ ದ್ವೇಷಗಳನ್ನೇ ಮದುವೆಯ ನಂತರ ಗಂಡನ ಮನೆ ಸೇರಿದ ಮೇಲೂ ಅಕ್ಕ- ತಂಗಿಯರು ಮುಂದುವರಿಸಬಹುದು.
ತಂಗಿ ದುಡಿದು ಸಂಪಾದಿಸುತ್ತಿದ್ದಾಳೆ. ನನಗೆ ಅಷ್ಟು ಓದಿಸದೇ, ಅಪ್ಪ ಬೇಗ ಮದುವೆ ಮಾಡಿಬಿಟ್ಟರು. ಅದಕ್ಕೇ ನಾನೀಗ ಮನೆಯಲ್ಲಿ ಕೂರುವಂತಾಯ್ತು ಎಂಬುದು ಅಕ್ಕನ ಕೊರಗು. ಅಕ್ಕನಿಗೆ ಒಳ್ಳೆಯ ಗಂಡನ್ನು ಹುಡುಕಿದ ಅಪ್ಪ, ತನಗೆ ಮದುವೆ ಮಾಡುವಾಗ ಅವಸರ ಮಾಡಿ ಸಿಕ್ಕಿದ ಹುಡುಗನನ್ನು ಕಟ್ಟಿದರು ಎಂಬ ಭಾವನೆ ತಂಗಿಗೆ. ಇನ್ನು ಅಕ್ಕ ತಂಗಿಯರ ಸಂಖ್ಯೆ ಎರಡನ್ನು ದಾಟಿದರಂತೂ, ಇಬ್ಬರು ಅಕ್ಕಂದಿರು ಸೇರಿ ತಂಗಿಯನ್ನು ದೂರ ಮಾಡುವುದು, ತಂಗಿಯರಿಬ್ಬರೂ ಸೇರಿ ಅಕ್ಕನನ್ನು ದೂರುವುದು ಇವೆಲ್ಲ ಮಾಮೂಲು.
ಅಕ್ಕ-ತಂಗಿಯರ ಬಾಂಧವ್ಯ ಯಾವ್ಯಾವ ಕಾರಣಕ್ಕೆ ಸಡಿಲಗೊಳ್ಳುತ್ತದೆ? ಒಬ್ಬರನ್ನು ಕಂಡಾಕ್ಷಣ ಮುಖ ತಿರುಗಿಸುವ ಮನಸ್ಸು ಇನ್ನೊಬ್ಬರಿಗೆ ಏಕೆ ಬರುತ್ತದೆ ಎಂಬುದಕ್ಕೆ ಇವೆಲ್ಲಾ ಉದಾಹರಣೆಗಳು. ಅದರರ್ಥ, ಅಕ್ಕ- ತಂಗಿಯರೆಂದರೆ ಬರೀ ಜಗಳವೇ ಎಂದಲ್ಲ. ಇಬ್ಬರೂ ಬಹಳ ಪ್ರೀತಿಯಿಂದಿರುವ ಬಹಳ ಉದಾಹರಣೆಗಳಿವೆ. ತಂಗಿಯಂದಿರ ಓದಿಗಾಗಿ ತನ್ನ ಓದನ್ನು ತ್ಯಾಗ ಮಾಡಿ, ಹಾಸಿಗೆ ಹಿಡಿದ ತಾಯಿಯ ಆರೈಕೆ ಮಾಡಿದ ಅಕ್ಕ, ತಂಗಿಯರ ಮದುವೆ ಮಾಡಿಸಿ ಕಡೆಗೆ ತಾನು ಮದುವೆಯಾಗಿರುವ ಉದಾಹರಣೆಗಳನ್ನು ನಾವು ನೋಡಿದ್ದೇವೆ. ಗೆಳತಿ ತುಳಸಿಯ ಅಕ್ಕ, ಆಕೆಯ ಬಾಣಂತನಕ್ಕಾಗಿ ಎರಡು ತಿಂಗಳು ತವರಿಗೆ ಬಂದು ಸಹಾಯ ಮಾಡಿದ್ದಾಳೆ. ತಂಗಿಗೆ ಹೆರಿಗೆ ಸಮಯದಲ್ಲಿ ನಾನಾ ಬಗೆಯ ಸಲಹೆಗಳನ್ನು ನೀಡಿ ಧೈರ್ಯ ಹೇಳಿದ್ದಾಳೆ.
ತಾಯಿಯಿಲ್ಲದವರಿಗೆ ಅಕ್ಕನೇ ತಾಯಿ. ಅಂಥಾ ತಾಯಿ ಮನಸ್ಸಿನ ಅಕ್ಕನನ್ನು ಅನುಸರಿಸಿದ ತಂಗಿಯರು ಚೆನ್ನಾಗಿ ಜೀವನ ನಡೆಸಿರುವುದಕ್ಕೆ ಉದಾಹರಣೆಗಳಿವೆ. ಅಕ್ಕ ತಂಗಿಯರಿಬ್ಬರೂ ಸಂಗೀತ, ನೃತ್ಯ ಕಲಿತು ಒಟ್ಟಾಗಿ ಪ್ರದರ್ಶನ ನೀಡಿದ ನಿದರ್ಶನಗಳಿವೆ. ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಹಚ್ಚಿಕೊಂಡ ಅಕ್ಕ ತಂಗಿಯರು, ಒಂದೇ ಮನೆಗೆ ಸೊಸೆಯರಾಗಿದ್ದಾರೆ. ಬಹಳ ಹಿಂದಿನ ಕಾಲದಲ್ಲಾದರೆ ಒಂದೇ ಗಂಡನನ್ನು ಕಟ್ಟಿಕೊಂಡ ಉದಾಹರಣೆಗಳೂ ಇದ್ದವೇನೋ?!
ಅಕ್ಕನ ಮಕ್ಕಳನ್ನು ತನ್ನ ಮಕ್ಕಳಂತೆ ಪ್ರೀತಿಸುವ ತಂಗಿಯರು ಬಹಳ. ಆಕಸ್ಮಿಕವಾಗಿ ಅಕ್ಕ ತೀರಿಕೊಂಡಾಗ, ಅವಳ ಮಕ್ಕಳನ್ನು ತಂದಿಟ್ಟುಕೊಂಡು, ಅಮ್ಮನಿಲ್ಲದ ಕೊರತೆ ಅವರನ್ನು ತಟ್ಟದಂತೆ ನೋಡಿಕೊಂಡು, ಅವರನ್ನು ಓದಿಸಿ, ಮದುವೆ ಮಾಡಿ, ನೂರು ವರ್ಷ ಸುಖವಾಗಿ ಬಾಳಿ ಎಂದು ಹಾರೈಸುವ ಚಿಕ್ಕಮ್ಮಂದಿರು ಇದ್ದಾರೆ. ಅಕ್ಕ-ತಂಗಿಯರ ಕುಟುಂಬಗಳು ಒಟ್ಟಿಗೇ ಪ್ರವಾಸ ಹೋಗಿ ಸಂಭ್ರಮಿಸುವ ಚಿತ್ರಗಳಿಗೂ ಕೊರತೆಯಿಲ್ಲ. ಅಕ್ಕನನ್ನು ತಾಯಿ ಎಂದೂ, ತಂಗಿಯನ್ನು ಮಗಳೆಂದೂ ಭಾವಿಸುವ ಚೇತನಗಳೂ ನಮ್ಮ ನಡುವೆ ಇವೆ. ಅಕ್ಕ ತಂಗಿಯ ಬಾಂಧವ್ಯವೇ ಅಂಥದ್ದು. ಅಕ್ಕ- ತಂಗಿಯಾಗಿ ಹುಟ್ಟಲು ಎಷ್ಟು ಜನ್ಮದ ಪುಣ್ಯ ಮಾಡಿದ್ದಾರೋ! ಅವರಿಬ್ಬರಿಗಿಂತ ಒಳ್ಳೆಯ ಗೆಳತಿಯರು ಈ ಜಗತ್ತಿನಲ್ಲಿ ಸಿಗಲಿಕ್ಕಿಲ್ಲ. ಏನಂತೀರಾ?
ತಾಜಾ ಬಾಂಧವ್ಯಕ್ಕೆ… – ಮದುವೆಯವರೆಗೆ ಸರಿ ಇರುವ ಸಂಬಂಧ, ತದನಂತರ ಅಕ್ಕ- ತಂಗಿಯರ ಬಾಂಧವ್ಯವು ಪೈಪೋಟಿಗೆ ತಿರುವುದು ಬೇಡ. – ಪರಸ್ಪರ ಕಿವಿಯಾಗುವ, ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಕೊನೆಯವರೆಗೂ ಮುಂದುವರಿಸಿ. – ನೀವಿಬ್ಬರೂ ಒಡಹುಟ್ಟಿದವರು ಎಂಬುದು ಮೊದಲು ನೆನಪಿರಲಿ. ನಿಮ್ಮ ನಡುವೆ ಯಾರೇನೇ ಹುಳಿ ಹಿಂಡಿದರೂ, ಅವರಿಗೆ ನಿಮ್ಮ ಸಂಬಂಧ ಎಷ್ಟೊಂದು ಗಟ್ಟಿಯಿದೆ ಎಂಬುದನ್ನು ತಿಳಿಹೇಳಿ. – ಕಷ್ಟ ಕಾಲದಲ್ಲಿ ಪರಸ್ಪರ ಕೈ ಬಿಡಬೇಡಿ. ಹೊಟ್ಟೆಕಿಚ್ಚು, ತಾರತಮ್ಯ, ಸ್ಪರ್ಧಾಭಾವ… ಇವನ್ನು ಮನಸ್ಸಿನಿಂದ ದೂರ ತಳ್ಳಿ. – ಮದುವೆಯಾದ ಮೇಲೂ ತಂಗಿಯ ಮನೆಗೆ ಅಕ್ಕನು, ಅಕ್ಕನ ಮನೆಗೆ ತಂಗಿಯೂ ಹೋಗುವುದನ್ನು ರೂಢಿಸಿಕೊಂಡರೆ ಸಂಬಂಧ ಇನ್ನಷ್ಟು ಗಟ್ಟಿ. – ಪರಸ್ಪರ ಭೇಟಿಯಾದಾಗಲೆಲ್ಲ, ಬಾಲ್ಯದ ಬಾಂಧವ್ಯದ ನೆನಪುಗಳನ್ನು ಮಾತಿಗೆ ಹರವಿಕೊಳ್ಳಿ. * ಸಾವಿತ್ರಿ ಶ್ಯಾನಭಾಗ್