Advertisement

ಹಸಿರಾಗಿ ಉಳಿಯಲಿ ಅತ್ತಿಗೆ-ನಾದಿನಿ ಸಂಬಂಧ

09:55 AM Nov 28, 2019 | mahesh |

“ನಮ್ಮಣ್ಣನಿಗೇನೋ ಸಹಾಯ ಮಾಡುವ ಮನಸ್ಸಿದೆ. ಆದರೆ, ಅತ್ತಿಗೆ ಬಿಡೋದಿಲ್ಲ…’ ಹೀಗೆ ದೂರುವ, ಆ ಮೂಲಕ ಅತ್ತಿಗೆಗೆ ವಿಲನ್‌ ಪಟ್ಟ ಕಟ್ಟುವ ನಾದಿನಿಯರಿದ್ದಾರೆ. ಹಾಗೆಯೇ, ಅತ್ತಿಗೆಯೇ ನನ್ನ ಬೆಸ್ಟ್‌ ಫ್ರೆಂಡ್‌ ಎನ್ನುವ ನಾದಿನಿಯರೂ ಇದ್ದಾರೆ. ಅತ್ತಿಗೆ- ನಾದಿನಿಯರು ಚೆನ್ನಾಗಿದ್ದರೆ, ಒಂದಲ್ಲ, ಎರಡು ಕುಟುಂಬಗಳು ನೆಮ್ಮದಿ ಹಾಗೂ ಸಂಭ್ರಮದಿಂದ ಬಾಳಲು ಸಾಧ್ಯವಿದೆ…’

Advertisement

ಅತ್ತೆ-ಸೊಸೆಯರ ಸಂಬಂಧದಂತೆಯೇ ಸೂಕ್ಷ್ಮವಾದ ಮತ್ತೂಂದು ಸಂಬಂಧ ಅತ್ತಿಗೆ- ನಾದಿನಿಯರದ್ದು. ಹಿಂದೆಲ್ಲಾ, ಅಮ್ಮ ತೀರಿಕೊಂಡ ನಂತರವೂ, ಹೆಣ್ಣು ಖುಷಿಖುಷಿಯಾಗಿ ತವರಿಗೆ ಹೋಗುತ್ತಾಳೆಂದರೆ, ಅಲ್ಲಿ ಅಮ್ಮನಂತೆ ಪ್ರೀತಿಸುವ ಅತ್ತಿಗೆ ಇದ್ದಾಳೆ ಎನ್ನುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅತ್ತಿಗೆ ತವರಿನಲ್ಲಿ ಇರುವುದಿಲ್ಲ. ತವರಿಗೆ ಹೋದಾಗೆಲ್ಲಾ ಆಕೆ ಸಿಗುವುದೂ ಇಲ್ಲ. ಆದರೂ, ಅತ್ತಿಗೆ- ನಾದಿನಿ ನಡುವೆ ಸಂಬಂಧ ಅಷ್ಟೇನೂ ಚೆನ್ನಾಗಿರುವುದಿಲ್ಲ. ಇಬ್ಬರ ನಡುವೆ ಅಸಮಾಧಾನ ಕಂಡೂ ಕಾಣದಂತೆ ಹೊಗೆಯಾಡುತ್ತಿರುತ್ತದೆ.

“ನಮ್ಮ ಅತ್ತಿಗೆ ಮಾತ್ರ ಅವರ ಅಣ್ಣನ ಮನೆಗೆ ಹೋಗ್ತಾರೆ. ಅಲ್ಲಿ, ಅಣ್ಣ-ಅತ್ತಿಗೆ ಅವರನ್ನು ಎಷ್ಟು ಪ್ರೀತಿಯಿಂದ ಕಾಣಾ¤ರೆ. ನನಗೆ ಮಾತ್ರ ಆ ಭಾಗ್ಯ ಇಲ್ಲ. ಅಣ್ಣ, ಅಪ್ಪನ ಸಮ. ಅತ್ತಿಗೆ ಅಮ್ಮನ ಸಮ ಅಂತಾರೆ. ಅದೆಲ್ಲಾ ಬರೀ ಸುಳ್ಳು. ಅಣ್ಣ ನಮ್ಮವನಾದರೇನು, ಅತ್ತಿಗೆ ನಮ್ಮವಳೆ? ಅವಳು ಬಂದ ಮೇಲೆ ಅಣ್ಣನೂ ಮೊದಲಿನಂತಿಲ್ಲ’ ಎಂದು ಮೌನವಾಗಿ ಬಿಕ್ಕುವ ನಾದಿನಿಯರ ಸಂಖ್ಯೆ ಕಡಿಮೆಯೇನಿಲ್ಲ. ನಾದಿನಿ, ಮನೆಗೆ ಬಂದರೆ ಕಿರಿಕಿರಿ ಆಗುತ್ತದೆ. ಅವಳು ನನ್ನ ಮೇಲೆಯೇ ಅಧಿಕಾರ ಚಲಾಯಿಸಲು ಬರುತ್ತಾಳೆ ಅಂತ ಬುಸುಗುಡುವ ಅತ್ತಿಗೆಯರೂ ಇದ್ದಾರೆ.

ಅತ್ತಿಗೆ-ನಾದಿನಿಯರಲ್ಲಿ ಮುನಿಸು ಬರಲು ಸಾವಿರ ಕಾರಣವಿರಬಹುದು. ಸಾಮಾಜಿಕ ಸ್ಥಾನಮಾನಗಳು, ಆರ್ಥಿಕ ಸ್ಥಿತಿಗತಿ, ಕೌಟುಂಬಿಕ ವ್ಯವಹಾರ,ಇತ್ಯಾದಿ. ಒಂದು ಕಾಲದವರೆಗೆ ಆಪ್ತಗೆಳತಿಯರಂತಿದ್ದ ಅತ್ತಿಗೆ-ನಾದಿನಿ, ಆನಂತರದಲ್ಲಿ ಹಾವು-ಮುಂಗುಸಿಯಂತಾದರೆ ಅದರ ಋಣಾತ್ಮಕ ಪರಿಣಾಮ ಎರಡೂ ಕುಟುಂಬಗಳ ಮೇಲೆ ಬೀಳುವುದು ಖಚಿತ. ಅತ್ತಿಗೆ ತನ್ನ ತವರಲ್ಲಿ ನಿರೀಕ್ಷಿಸುವ ಆದರವನ್ನೇ ನಾದಿನಿ ಇಲ್ಲಿ ಅಪೇಕ್ಷಿಸುವುದು. ಸಂಬಂಧಗಳು ಉತ್ತಮ ಮಟ್ಟದಲ್ಲಿಲ್ಲದಿದ್ದರೂ ಕನಿಷ್ಠ ಸವೆಯದಂತೆ ಉಳಿಸಿಕೊಳ್ಳಲು ಎರಡೂ ಕಡೆಯಿಂದ ಹೊಂದಾಣಿಕೆ ಮನೋಭಾವ ಮುಖ್ಯ. ಹಾಗೆ ಒಂದೆರಡನ್ನು ಉದಾಹರಿಸುವುದಾದರೆ-

-ತವರಿಗೆ ಬಂದ ನಾದಿನಿಯು ಇದು ತನ್ನ ಮನೆ ಎಂದು ಹಕ್ಕು ಚಲಾಯಿಸಬಾರದು. ಹೆತ್ತವರ ಅಥವಾ ಸೋದರರ ವೈಯಕ್ತಿಕ ವ್ಯವಹಾರಗಳಲ್ಲಿ ಮೂಗು ಹಾಕದೆ ಇದ್ದರೆ ಒಳಿತು. ತವರಿನಲ್ಲಿ ತಾನು ರಾಣಿಯಂತಿದ್ದೆ ಎಂಬುದು ಸವಿನೆನಪಾಗಿರಲಿ, ಅದೇ ಧೋರಣೆಯನ್ನು ಮದುವೆಯ ನಂತರವೂ ಮುಂದುವರಿಸೋದು ಬೇಡ.

Advertisement

– ಅತ್ತಿಗೆಯನ್ನು ಹೊರಗಿನವಳಂತೆ ಕಾಣದೆ, ಈಕೆ ನಮ್ಮ ಕುಟುಂಬದ ಗೌರವಾನ್ವಿತ ಸದಸ್ಯೆ ಎಂದು ಭಾವಿಸಿ ಪ್ರೀತಿ ಆದರ ತೋರಿಸಬೇಕು.
– ನಾದಿನಿ ಹೇಗೆ ತನ್ನ ಗಂಡನ ಮನೆಯಲ್ಲಿ ಯಜಮಾನಿಯೋ, ತವರಿನಲ್ಲಿ ಅತ್ತಿಗೆಯೇ ಯಜಮಾನಿ ಎಂಬುದು ನೆನಪಿರಲಿ.
-ಅಣ್ಣ-ಅತ್ತಿಗೆಯು ತಮ್ಮ ಇತಿಮಿತಿಯಲ್ಲಿ ಉಡುಗೊರೆ ಗೌರವ ಕೊಟ್ಟಾಗ, ಅದಕ್ಕೆ ಕೊಂಕು ತೆಗೆಯದೇ ಸ್ವೀಕರಿಸುವ ಮನೋಭಾವ ನಾದಿನಿಗೆ ಇರಲಿ.
-ಕೆಲಸಕ್ಕೆ ಹೋಗುವ ನಾದಿನಿ, ತನ್ನ ತಾಯಿಯ ಬಳಿ ಚಿಕ್ಕ ಮಕ್ಕಳನ್ನು ಬಿಡುವ ಪ್ರಸಂಗಗಳಲ್ಲಿ ತಾಯಿಗೆ ಸಹಕಾರಿಯಾಗಿ ಅತ್ತಿಗೆ ಇರುವುದೆಂಬುದು ಗೌರವಿಸಬೇಕಾದ ಸಂಗತಿ. ಅತ್ತಿಗೆ ಉದ್ಯೋಗಸ್ಥೆಯಾದಾಗ ಮಕ್ಕಳನ್ನು ಪೋಷಿಸಲು ನಾದಿನಿಯರ ಸಹಕಾರವನ್ನು ಅಲ್ಲಗಳೆಯುವಂತಿಲ್ಲ.
-ತನ್ನ ಕಷ್ಟವನ್ನರಿತು ಕೇಳುವ ಮೊದಲೇ ಸಹಾಯಹಸ್ತ ಚಾಚುವ ಅತ್ತಿಗೆ /ನಾದಿನಿಯನ್ನು “ಅಟ್ಟ ಹತ್ತಿ ಏಣಿ ಒದೆಯುವಂತೆ’ ಬದಿಗೆ ತಳ್ಳುವುದು ಸರ್ವಥಾ ಸಲ್ಲ.
-ಆಸ್ತಿಯಲ್ಲಿ ಪಾಲು ಕೇಳಲು ಬರುವ ನಾದಿನಿ, ಅನಿವಾರ್ಯ ಸಂದರ್ಭಗಳಲ್ಲಿ ತವರು ಮನೆಯ ಜವಾಬ್ದಾರಿ ನಿಭಾಯಿಸಲು ಏಕೆ ಬರಬಾರದು ಎಂದು ಯೋಚಿಸುವ ಅತ್ತಿಗೆಯ ಮಾತುಗಳಲ್ಲೂ ತರ್ಕವಿದೆ ಎಂಬುದನ್ನು ಮನಗಾಣಬೇಕು
-ತಿಳಿದೋ ತಿಳಿಯದೆಯೋ ಇನ್ನೊಬ್ಬರ ಮನ ನೋಯಿಸಿದಾಗ ಕ್ಷಮೆ ಕೇಳಿ.
ಮನಸ್ತಾಪ, ಮೌನ ಕಲಹ ಎಲ್ಲರ ಮನೆಯಲ್ಲೂ ಇರುವಂಥದ್ದೇ. ಆದರೆ ಅದನ್ನೇ ಸಾಧಿಸಿಕೊಂಡು ಹೋಗುವುದರಲ್ಲಿ ಅರ್ಥವಿಲ್ಲ.ಯಾವುದದೋ ಕ್ಷುಲ್ಲಕ ವಿಷಯಕ್ಕೆ ಮಾತು ನಿಂತು, ಮೌನ ಮಂಜುಗಡ್ಡೆಯಾದರೆ, ಸಂತಸದ ಮಳೆ ಸುರಿಯುವುದು ಹೇಗೆ?

-ಕೆ.ವಿ.ರಾಜಲಕ್ಷ್ಮೀ

Advertisement

Udayavani is now on Telegram. Click here to join our channel and stay updated with the latest news.

Next