ಮೊಳಕಾಲ್ಮೂರು: ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡು ಹಲವಾರು ದಿನಗಳಾಗಿವೆ. ಆದರೂ ಪ್ರಯಾಣಿಕರ ಬಳಕೆಗೆ ನೀಡುವಲ್ಲಿ ಪಟ್ಟಣ ಪಂಚಾಯತ್ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ವ್ಯಕ್ತವಾಗಿದೆ.
ತಾಲೂಕಿನ ಕೇಂದ್ರ ಸ್ಥಾನವಾದ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣ ಧೂಳಿನಿಂದ ಕೂಡಿತ್ತು. ಸರಿಯಾದ ರಸ್ತೆ ಇಲ್ಲದ ಕಾರಣ ಪ್ರಯಾಣಿಕರು ಪರದಾಡುವಂತಾಗಿತ್ತು. ಇದರ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳಿಗೆ ಸ್ಪಂದಿಸಿದ ಶಾಸ ಕರು, ಪಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ನಗರೋತ್ಥಾನ ಯೋಜನೆಯಡಿ 46 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು.
ಕಾಮಗಾರಿ ಪ್ರಾರಂಭವಾಗುವ ಮುನ್ನ ಬಸ್ ನಿಲ್ದಾಣದ ಆವರಣದಲ್ಲಿದ್ದ ಗೂಡಂಗಡಿಗಳನ್ನು ತೆರವುಗೊಳಿಸಲಾಗಿತ್ತು. ಕಾಮಗಾರಿಯ ಗುತ್ತಿಗೆ ಪಡೆದ ಗುತ್ತಿಗೆದಾರರು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿಕೊಟ್ಟಿದ್ದಾರೆ. ಆದರೆ ಇನ್ನೂ ಬಳಕೆಗೆ ನೀಡದೇ ಇರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಸ್ ನಿಲ್ದಾಣ ಆವರಣದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆದಿದ್ದರೂ ಬಸ್‌ಗಳ ನಿಲುಗಡೆಗೆ ಪಪಂ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಇದರಿಂದಾಗಿ ಚಿತ್ರದುರ್ಗ, ದಾವಣಗೆರೆ , ಬಳ್ಳಾರಿ, ಬೆಂಗಳೂರು, ಚಳ್ಳಕೆರೆ , ರಾಯದುರ್ಗ, ಅನಂತಪುರ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವ ಖಾಸಗಿ ಮತ್ತು ಸರ್ಕಾರಿ ಬಸ್‌ಗಳನ್ನು ಕಿರಿದಾದ ಮುಖ್ಯ ರಸ್ತೆ ಬದಿಯಲ್ಲಿಯೇ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಉದ್ಭವಿಸಿದೆ. ರಸ್ತೆಯ ಎರಡೂ ಬದಿಗಳಲ್ಲಿ ಗೂಡಂಗಡಿಗಳಿದ್ದು, ಅವರ ವ್ಯಾಪಾರಕ್ಕೂ ತೊಂದರೆಯಾಗುತ್ತಿದೆ.
ಕೆಲವು ಬಸ್‌ಗಳನ್ನು ಕೆಇಬಿ ವೃತ್ತದ ಬಳಿ ನಿಲುಗಡೆ ಮಾಡುವುದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಕೆಇಬಿ ವೃತ್ತದವರೆಗೂ ನಡೆದುಕೊಂಡು ಬರಬೇಕಾಗಿದೆ. ರಸ್ತೆ ಬದಿಯ ವ್ಯಾಪಾರಸ್ಥರು ಜಾಗದ ಕೊರತೆಯಿಂದ ಪರದಾಡುವಂತಾಗಿದೆ. ಬಸ್‌ನಿಲ್ದಾಣದಲ್ಲಿ ಬೈಕ್ ಮತ್ತು ಕಾರುಗಳ ನಿಲುಗಡೆಗಾಗಿ ಅಗತ್ಯ ಜಾಗ ಮತ್ತು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಯೋ ವೃದ್ಧರು ಮತ್ತು ಗರ್ಭಿಣಿಯರು ಕೆಇಬಿ ವೃತ್ತದಿಂದ ಲಗೇಜ್‌ಗಳೊಂದಿಗೆ ಬಸ್‌ನಿಲ್ದಾಣಕ್ಕೆ ಬರಲು ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಪಪಂ ಮುಖ್ಯಾಧಿಕಾರಿಗಳು ನಿರ್ಲಕ್ಷಿಸದೆ ಸಿಸಿ ರಸ್ತೆಯನ್ನು ಕೂಡಲೇ ಉದ್ಘಾಟಿಸಬೇಕು.
ಬೆಳಗಲ್ ಈಶ್ವರಯ್ಯಸ್ವಾಮಿ, ರೈತ ಸಂಘದ ತಾಲೂಕು ಅಧ್ಯಕ್ಷ.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದ ಸಿಸಿ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ಪಟ್ಟಣ ಪಂಚಾಯತ್‌ಗೆ ಹಸ್ತಾಂತರಿಸಿಲ್ಲ. ಈ ಕಾಮಗಾರಿಯನ್ನು ಥರ್ಡ್ ಪಾರ್ಟಿಯಿಂದ ಪರೀಕ್ಷಿಸಿದ ನಂತರ ಸಾರ್ವಜನಿಕ ಬಳಕೆಗೆ ನೀಡಲಾಗುವುದು.
ಎಸ್. ರುಕ್ಮಿಣಿ, ಪಪಂ ಮುಖ್ಯಾಧಿಕಾರಿ.
ಎಸ್. ರಾಜಶೇಖರ