Advertisement

ತಿಪ್ಪೇರುದ್ರಸ್ವಾಮಿ ದೇಗುಲ ಸುತ್ತ ಸಿಸಿ ರಸ್ತೆ

10:27 AM Jan 15, 2019 | |

ನಾಯಕನಹಟ್ಟಿ: ಇಲ್ಲಿನ ತಿಪ್ಪೇರುದ್ರಸ್ವಾಮಿ ದೇವಾಲಯದ ಸುತ್ತಲಿನ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ವತಿಯಿಂದ 4.9 ಕೋಟಿ ರೂ. ಮಂಜೂರಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಜಿ.ಪಿ. ರವಿಶಂಕರ್‌ ತಿಳಿಸಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣಾ ರೆಡ್ಡಿ ಹಾಗೂ ಚಿತ್ರದುರ್ಗದ ಇಇ ಸತೀಶ್‌ಬಾಬು ಅವರ ವಿಶೇಷ

ಆಸಕ್ತಿಯಿಂದಾಗಿ ಈ ಅನುದಾನ ದೊರೆತಿದೆ. ಇದನ್ನು ಬಳಸಿಕೊಂಡು ಒಳಮಠ ಹಾಗೂ ಹೊರಮಠಗಳ ಆವರಣದಲ್ಲಿನ ಡಾಂಬರ್‌ ರಸ್ತೆಗಳನ್ನು ಸಿಸಿ ರಸ್ತೆಯನ್ನಾಗಿಸಲಾಗುವುದು. ಕಿಷ್ಕೆಂಧೆಯಂತಾಗಿರುವ ರಸ್ತೆಗಳನ್ನು ಅಗಲೀಕರಣಗೊಳಿಸಿ ಉತ್ತಮ ದರ್ಜೆಯ ರಸ್ತೆಗಳನ್ನಾಗಿ ಪರಿವರ್ತಿಸಲಾಗುವುದು ಎಂದರು.

ಪ್ರತಿ ವರ್ಷ ಡಾಂಬರ್‌ ರಸ್ತೆಗಳಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿದ್ದವು. ನಿರ್ಮಿಸಿದ ಒಂದೇ ವರ್ಷದಲ್ಲಿ ರಸ್ತೆಗಳು ಹಾಳಾಗುತ್ತಿವೆ. ಹೀಗಾಗಿ ಎರಡೂ ದೇವಾಲಯಗಳ ಮುಂಭಾಗದಲ್ಲಿ ದ್ವಿಪಥ ಸಿಸಿ ರಸ್ತೆಗಳನ್ನು ನಿರ್ಮಿಸಲಾಗುವುದು. ಮಧ್ಯಭಾಗದಲ್ಲಿ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗುವುದು. ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಇದರ ಬಗ್ಗೆ ವಿಶೇಷ ಗಮನ ಹರಿಸಿದ್ದಾರೆ. ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣಕ್ಕೆ ಈ ಅನುದಾನವನ್ನು ಬಳಸಲಾಗುವುದು. ಎರಡೂ ದೇವಾಲಯಗಳ ಮುಂಭಾಗದಲ್ಲಿ ವಾಹನ ನಿಲುಗಡೆ ಹಾಗೂ ಜನರ ಓಡಾಟಕ್ಕೆ ವಿಶಾಲವಾದ ರಸ್ತೆಗಳನ್ನು ನಿರ್ಮಿಸಲಾಗುವುದು. ತೇರುಬೀದಿಯಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು. ಏಕೆಂದರೆ ರಥದ ಸುಲಭ ಚಲನೆಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

ಉತ್ಸವ ಬೀದಿ ಹಾಗೂ ತೇರುಬೀದಿಯ ಅಗಲೀಕರಣದ ಅಳತೆಯನ್ನು ಲೋಕೋಪಯೋಗಿ ಇಲಾಖೆ ಅಂತಿಮಗೊಳಿಸಲಿದೆ. ಹೊರಮಠದ ಆವರಣದಲ್ಲಿ ವಿಶಾಲ ಪ್ರದೇಶವಿದ್ದು, ಇದನ್ನು ಸಂಪೂರ್ಣವಾಗಿ ಸಿಸಿ ರಸ್ತೆಯನ್ನಾಗಿಸಲಾಗುವುದು. ಎರಡೂ ದೇವಾಲಯಗಳ ಮುಂಭಾಗದಲ್ಲಿ ವಿಭಜಕ ನಿರ್ಮಿಸಿ ಬೀದಿದೀಪಗಳನ್ನು ಅಳವಡಿಸಲಾಗುವುದು. ಈಗಾಗಲೇ ಹೊರಮಠದ ಆವರಣದಲ್ಲಿ ರುದ್ರಾಭಿಷೇಕ ಭವನ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ವ್ಯವಸ್ಥಾಪನ ಸಮಿತಿ ಎರಡು ವರ್ಷಗಳಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದೆ. ದೇವಾಲಯದಲ್ಲಿರುವ ವಸತಿಗೃಹಗಳನ್ನು ಅಭಿವೃದ್ಧಿಪಡಿಸಲಾಗುವುದು. ಸಮಿತಿ ಹೊಸ ಕಟ್ಟಡಗಳನ್ನು ನಿರ್ಮಿಸುತ್ತಿಲ್ಲ. ಬದಲಾಗಿ ಈಗಿರುವ ಕಟ್ಟಡಗಳ ನವೀಕರಣ ಹಾಗೂ ದುರಸ್ತಿಗೆ ಹೆಚ್ಚು ಆಸಕ್ತಿ ವಹಿಸಿದೆ ಎಂದರು. ದೇವಾಲಯ ವ್ಯವಸ್ಥಾಪನ ಸಮಿತಿ ಸದಸ್ಯರಾದ ಎಸ್‌.ವಿ.ಟಿ. ರೆಡ್ಡಿ, ಎನ್‌.ಬಿ. ಮುನಿಯಪ್ಪ, ಟಿ. ರುದ್ರಮುನಿ, ಗೋವಿಂದರಾಜು ಇದ್ದರು.

Advertisement

ಟೆಂಡರ್‌ ಪ್ರಕ್ರಿಯೆ ಶೀಘ್ರ
ದೇವಾಲಯದ ಮುಂಭಾಗದ ರಸ್ತೆಗಳು ಹಾಗೂ ಚರಂಡಿ ಅಭಿವೃದ್ಧಿಗೆ 4.9 ಕೋಟಿ ರೂ. ಮಂಜೂರಾಗಿದೆ. ಶೀಘ್ರದಲ್ಲಿ ಟೆಂಡರ್‌ ಪ್ರತಿಕ್ರಿಯೆ ಅಂತಿಮಗೊಳ್ಳಲಿದೆ. ತೇರುಬೀದಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆದರೆ ಸಿಸಿ ರಸ್ತೆಯಲ್ಲಿ ಬೃಹತ್‌ ಗಾತ್ರದ ರಥದ ಚಲನೆಯ ಮೇಲೆ ಇದು ಪರಿಣಾಮ ಬೀರಲಿದೆ. ಹಾಗಾಗಿ ತೇರುಬೀದಿ ಸಿಸಿ ರಸ್ತೆ ನಿರ್ಮಾಣ ಕೈಬಿಡಲಾಗಿದೆ. ಬದಲಾಗಿ ರಸ್ತೆಯನ್ನು ಅಗಲೀಕರಣಗೊಳಿಸಿ ಡಾಂಬರ್‌ ರಸ್ತೆ ನಿರ್ಮಿಸಲಾಗುವುದು. ಉಳಿದೆಡೆ ಸಿಸಿ ರಸ್ತೆ ನಿರ್ಮಿಸಲಾಗುವುದು. ಇದಕ್ಕಾಗಿ ಇಡೀ ಗ್ರಾಮದ ಸರ್ವೆ ಕಾರ್ಯ ಅಂತಿಮಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆ ಇಇ ಸತೀಶ್‌ಬಾಬು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next