ಸಿರುಗುಪ್ಪ: ನಗರದ ಸಿಡಿಪಿಒ ಕಚೇರಿ ಪಕ್ಕದಲ್ಲಿರುವ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರದ ಕಟ್ಟಡವು ಶಿಥಿಲಗೊಂಡಿರುವುದು ಒಂದು ಕಡೆಯಾದರೆ, ಮೂಲ ಸೌಕರ್ಯಗಳ ಕೊರತೆಯಿಂದ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ಕೇಂದ್ರಕ್ಕೆ ಬರುವ ಜನರಿಗೆ ತೊಂದರೆಯಾಗುತ್ತಿದೆ.
ಸುಮಾರು 40ವರ್ಷಗಳ ಹಿಂದಿನ ಕಟ್ಟಡದಲ್ಲಿ ಕಳೆದ ಏಳು ವರ್ಷಗಳಿಂದ ಮಹಿಳಾ ಸಾಂತ್ವನ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಕೌಟುಂಬಿಕ ಸಮಸ್ಯೆಗಳನ್ನು ಹೊತ್ತು ಬರುವ ಮಹಿಳೆಯರಿಗೆ ಸಾಂತ್ವನ ನೀಡುವ ಉದ್ದೇಶದಿಂದ ಸೆಂಟ್ರಲ್ ಫಾರ್ ರೂರಲ್ ಡೆವಲಪ್‌ಮೆಂಟ್ ಸಂಸ್ಥೆಯಿಂದ ಈ ಕೇಂದ್ರವನ್ನು ನಡೆಸುತ್ತಿದ್ದಾರೆ.
ಈ ಕಟ್ಟಡದ ಮೇಲ್ಛಾವಣಿಯ ಸಿಮೆಂಟ್ ಪದರು ಆಗಾಗ ಉದುರಿ ಬೀಳುತ್ತಿರುವುದರಿಂದ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಮತ್ತು ದೂರುದಾರರ ಮೇಲೆ ಯಾವ ಕ್ಷಣದಲ್ಲಿ ತಮ್ಮ ಮೇಲೆ ಸಿಮೆಂಟ್ ಪದರು ಬೀಳುತ್ತದೆಯೋ ಎನ್ನುವ ಆತಂಕ ಮನೆ ಮಾಡಿದೆ. ಅನಾಹುತಗಳಾಗುವುದಕ್ಕಿಂತ ಮುಂಚೆ ಕೇಂದ್ರವನ್ನು ಬೇರೆಡೆ ಸ್ಥಳಾಂತರ ಮಾಡಬೇಕಾಗಿದೆ.
ಇರುವ ಒಂದು ಕೊಠಡಿಯೊಳಗೆ ಸಿಡಿಪಿಒ ಕಚೇರಿಗೆ ಸಂಬಂಧಿಸಿದ ಶುಚಿ ನ್ಯಾಪಕಿನ್ ಬಾಕ್ಸ್‌ಗಳು ಮತ್ತು ಹಾಳಾದ ಪೀಠೊಪಕರಣ ಶೇಖರಿಸಿರುವುದರಿಂದ ಇಲ್ಲಿಗೆ ಬರುವ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಈ ಕೇಂದ್ರಕ್ಕೆ ನಿತ್ಯ ಕೌಟುಂಬಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹತ್ತಾರು ಜನ ಬರುತ್ತಿದ್ದು, ಇಲ್ಲಿಗೆ ಬರುವವರ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಆಗಿರುವುದರಿಂದ ಮಹಿಳೆಯರಿಗೆ ಪ್ರತ್ಯೇಕ ಆಪ್ತ ಸಮಾಲೋಚನೆ ನಡೆಸಲು ಪ್ರತ್ಯೇಕ ಕೊಠಡಿ ಇಲ್ಲದೆ ಎಲ್ಲರ ಮುಂದೆಯೇ ವಿಚಾರಣೆ ಮಾಡುವುದರಿಂದ ದೂರು ನೀಡಿದ ಮಹಿಳೆಯರು ತಮ್ಮ ಗುಪ್ತ ವಿಚಾರಗಳನ್ನು ಹೇಳಲಾಗದೆ ಮುಜುಗರಕ್ಕೀಡಾಗುತ್ತಿದ್ದಾರೆ. ಇದರಿಂದಾಗಿ ಸರಿಯಾಗಿ ವಿಚಾರಣೆಯಾಗದೆ ಪ್ರಕರಣ ದಾರಿ ತಪ್ಪುತ್ತಿರುವುದನ್ನು ಕಾಣಬಹುದಾಗಿದೆ. ದೂರು ನೀಡಲು ಕೇಂದ್ರಕ್ಕೆ ಬರುವ ಮಹಿಳೆಯರಿಗೆ ಶೌಚಾಲಯವಿಲ್ಲದೆ ಪರದಾಡುವಂತಾಗಿದ್ದು, ದೂರದಲ್ಲಿರುವ ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ತೆರಳಿ ಶೌಚಕ್ರಿಯೆ ಮುಗಿಸಿಕೊಳ್ಳಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರಕ್ಕೆ ಬರುವವರಿಗೆ ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದಿರುವುದರಿಂದ ಅಕ್ಕ ಪಕ್ಕದ ಹೋಟೆಲ್ಗಳಿಗೆ ತೆರಳಿ ನೀರು ಕುಡಿದು ಬರಬೇಕಾಗಿದೆ. ಒಟ್ಟಾರೆ ಮೂಲ ಸೌಕರ್ಯಗಳಿಲ್ಲದ ಹಾಗೂ ಶಿಥಿಲಗೊಂಡ ಕಟ್ಟದಿಂದ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರ ಬೇರೆಡೆ ಸ್ಥಳಾಂತರಿಸಿ, ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಕೇಂದ್ರಕ್ಕೆ ನಾವು ನಮಗೆ ಇರುವ ಕೌಟುಂಬಿಕ ಸಮಸ್ಯೆಗಳ ಗೌಪ್ಯ ವಿಚಾರ ಹೇಳಿಕೊಳ್ಳಲು ಬರುತ್ತೇವೆ. ಆದರೆ ವಿಚಾರಣೆಗೆ ಇಲ್ಲಿ ಪ್ರತ್ಯೇಕ ಕೊಠಡಿ ಇಲ್ಲದಿರುವುದರಿಂದ ನಾವು ಗೌಪ್ಯ ವಿಷಯಗಳನ್ನು ಎಲ್ಲರ ಮುಂದೆ ಹೇಳಲಾಗದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ವಿಚಾರಣೆಗೆ ಪ್ರತ್ಯೇಕ ಕೊಠಡಿ ಇದ್ದರೆ ನಮ್ಮ ಸಮಸ್ಯೆ ಹೇಳಿಕೊಂಡು ಪರಿಹಾರ ಮಾಡಿಕೊಳ್ಳಬಹುದಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಮಹಿಳೆ ತಿಳಿಸಿದ್ದಾರೆ.
ಬಸವರೆಡ್ಡಿ