ಸಿರುಗುಪ್ಪ: ಭತ್ತದ ನಾಡು ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡದ ಹತ್ತಿರ ತುಂಗಭದ್ರಾ ನದಿಯಲ್ಲಿ ವಿಜಯನಗರ ಅರಸರ ಕಾಲದಲ್ಲಿ ಕೃಷಿಗಾಗಿ ನೀರು ಹರಿಸಲು ಕಟ್ಟಲಾಗಿರುವ ಸಂಗ್ರಹ ಕಟ್ಟೆಗಳ ಮೇಲೆ ಈಗ ನೀರು ಜಲಪಾತದಂತೆ ಧುಮ್ಮಿಕ್ಕುತ್ತಿವೆ.
ಒಂದೂವರೆ ಕಿಮೀ ಉದ್ದದ ಗಂಗಮ್ಮನ ಕಟ್ಟೆ, ದೇಶನೂರು ಕಟ್ಟೆ, ಬೆಳ್ಳಕ್ಕಿ ಕಟ್ಟೆ ಮತ್ತು ವಿದ್ಯುತ್ ಘಟಕಕ್ಕೆ ನೀರು ಹರಿಸಲು ಕಟ್ಟಿರುವ ಕಾಲುವೆ ಮೇಲಿಂದ ನೀರಿನ ಜಲಧಾರೆ ಜಲಪಾತಗಳಂತೆ ಹರಿಯುತ್ತಿದೆ. ಹಾಲಿನ ನೊರೆ ಸುರಿದಂತೆ ಬೀಳುತ್ತಿರುವ ದೃಶ್ಯ ಕಣ್ಮನ ಸೆಳೆಯುತ್ತಿವೆ. ಪವರ್ ಪ್ಲಾಂಟ್‌ಗೆ ನೀರು ಹರಿಸಲು ಕಟ್ಟಲಾಗಿರುವ ಕಾಲುವೆ ಕಟ್ಟಡದ ಎಡಭಾಗದಲ್ಲಿ ಹಾಲು ಸುರಿದಂತೆ ನೀರು ಜಲಪಾತವಾಗಿ ಹರಿಯುತ್ತಿರುವುದು ದೂರದಿಂದ ನಯನ ಮನೋಹರವಾಗಿ ಕಾಣುತ್ತಿದೆ.
ನದಿಯಲ್ಲಿ ನೀರಿನ ರಭಸ ಹೆಚ್ಚಾಗಿರುವುದರಿಂದ ಈಜುವುದು ಅಪಾಯ. ಆದರೆ ಈ ಬಗ್ಗೆ ಎಚ್ಚರಿಸುವ ಯಾವುದೇ ನಾಮಫಲಕಗಳಿಲ್ಲ. ಇಲ್ಲಿ ಯಾವುದೇ ಸುಸಜ್ಜಿತ ಹೋಟೆಲ್, ಖಾನಾವಳಿಗಳು ಇಲ್ಲ. ರಾತ್ರಿ ವಾಸ್ತವ್ಯಕ್ಕೂ ಯಾವುದೇ ಅನುಕೂಲಗಳಿಲ್ಲ. ಸಿರುಗುಪ್ಪದಿಂದ 6 ಕಿಮೀ ದೂರದಲ್ಲಿರುವ ಕೆಂಚನಗುಡ್ಡಕ್ಕೆ ಆಟೋ, ಬಸ್ ವ್ಯವಸ್ಥೆ ಇದ್ದು, ಸುಮಾರು 2ಕಿಮೀ ನಡೆದುಕೊಂಡು ಹೋಗಬೇಕು. ನದಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲ, ವಾಹನ ಸೌಲಭ್ಯ ಇರುವವರು ನದಿ ಸಮೀಪಕ್ಕೆ ಹೋಗಬಹುದು.
ಮೊಸಳೆಗಳ ಕಾಟ: ಈ ಭಾಗದಲ್ಲಿ ಮೊಸಳೆಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ನದಿಯ ವಿವಿಧ ಕಡೆಗಳಲ್ಲಿ ಮೊಸಳೆ ಕಾಣಿಸಿಕೊಳ್ಳುತ್ತಿವೆ. ಇದರಿಂದಾಗಿ ನದಿಯಲ್ಲಿ ಇಳಿದು ಈಜಾಡುವುದು ಅಪಾಯಕಾರಿ ಸಂಗತಿಯಾಗಿದೆ.
ಅಪಾಯದ ಜಾಗದಲ್ಲಿ ಸೆಲ್ಫಿ: ಪವರ್‌ಪ್ಲಾಂಟ್‌ಗೆ ನೀರು ಹರಿಸಲು ಕಟ್ಟಲಾಗಿರುವ ಕಾಲುವೆಯ ಮೇಲೆ ಝುಳು ಝುಳು ಹರಿಯುವ ನೀರಿನ ಕಟ್ಟೆಗಳ ಮೇಲೆ ನಿಂತು ಮೊಬೈಲ್ನಿಂದ ಸೆಲ್ಫಿ ತೆಗೆಸಿಕೊಳ್ಳುವವರ ಸಂಖ್ಯೆಯು ಹೆಚ್ಚಾಗಿದೆ. ಇಲ್ಲಿ ನೀರಿನ ಆಳ ಹೆಚ್ಚಾಗಿದ್ದು, ಆಕಸ್ಮಿಕವಾಗಿ ಜಾರಿ ಬಿದ್ದರೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದೆ.
ಗಂಗಮ್ಮನ ಪೂಜೆ: ನದಿಗೆ ಆಗಮಿಸುವ ಪ್ರವಾಸಿಗರು ಗಂಗಾಮಾತೆಯು ಶಾಂತವಾಗಲಿ, ತುಂಗಾಮಾತೆಯು ರೈತರ ಬದುಕನ್ನು ಹಸನು ಮಾಡಲಿ ಎಂದು ಪೂಜೆ ಸಲ್ಲಿಸಿ ತೆಂಗಿನಕಾಯಿ, ವೀಳ್ಯದೆಲೆ, ಅಡಿಕೆ, ಹೂವನ್ನು ನದಿಗೆ ಬಿಟ್ಟು ಕೈಮುಗಿಯುವ ದೃಶ್ಯಗಳು ಸಾಮಾನ್ಯವಾಗಿವೆ. ಮಳೆಗಾಲದಲ್ಲಿ ತುಂಗಭದ್ರ ನದಿಯಲ್ಲಿ ನೀರಿನ ಹರಿವು ಹೆಚ್ಚಾದಾಗ ಇಲ್ಲಿ ಸಾರ್ವಜನಿಕರ ದಂಡು ಕೆಂಚನಗುಡ್ಡಕ್ಕೆ ಭೇಟಿನೀಡಿ ನದಿಯಲ್ಲಿ ಸ್ನಾನಮಾಡಿ ಪೂಜೆ ಸಲ್ಲಿಸಿ ಮನೆಯಿಂದ ತಂದ ತಿಂಡಿಯನ್ನು ಸವಿದು ನದಿಯ ನೀರಿನ ಸೌಂದರ್ಯ ಕಣ್ತುಂಬಿಕೊಳ್ಳುತ್ತಾರೆ.