ಸಿರುಗುಪ್ಪ: ತಾಲೂಕಿನಲ್ಲಿ ಸುಮಾರು 50 ಕಿಮೀ ಹರಿಯುವ ತುಂಗಭದ್ರಾ ನದಿ ಪಾತ್ರದಲ್ಲಿ ಮೊಸಳೆಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮನುಷ್ಯರು ಮತ್ತು ದನಗಳ ಮೇಲೆ ದಾಳಿ ಮಾಡಿದ ಘಟನೆಗಳು ನಡೆದಿದೆ.
ನದಿಪಾತ್ರದಲ್ಲಿ ಮೊಸಳೆಗಳಿವೆ ಎಂದು ಅರಣ್ಯ ಇಲಾಖೆ ಮಾತ್ರ ನಾಮಫಲಕಗಳನ್ನು ಅಳವಡಿಸಿಲ್ಲ! ಸಾರ್ವಜನಿಕರು ಎಲ್ಲೆಂದರಲ್ಲಿ ನದಿಗೆ ಇಳಿದು ಸ್ನಾನ ಮಾಡುವುದು, ದನಕರುಗಳಿಗೆ ನೀರು ಕುಡಿಸಿ, ಮೈತೊಳೆಯುವುದು ಮತ್ತು ಹರಿಗೋಲು ಮೂಲಕ ಹೊಲಗದ್ದೆಗಳಿಗೆ, ಪಕ್ಕದ ಗ್ರಾಮಗಳಿಗೆ ತೆರಳುವುದು ಸಾಮಾನ್ಯವಾಗಿದೆ.
ತಾಲೂಕಿನ ಎಂ. ಸೂಗೂರು, ಮಣ್ಣೂರು, ನಡವಿ, ನಿಟ್ಟೂರು, ಹೆರಕಲ್ಲು, ರುದ್ರಪಾದ, ಕೆಂಚನಗುಡ್ಡ, ದೇಶನೂರು, ಸಿರುಗುಪ್ಪ, ಗಡ್ಡೆ ವಿರುಪಾಪುರ, ಇಬ್ರಾಹಿಂಪುರ, ಬಾಗೇವಾಡಿ, ಹೊನ್ನಾರಹಳ್ಳಿ, ಚಿಕ್ಕಬಳ್ಳಾರಿ, 25-ಹಳೇಕೋಟೆ, ಶ್ರೀಧರಗಡ್ಡೆ, ಹಚ್ಚೊಳ್ಳಿ, ಮಾಟೂರು, ಚಳ್ಳೆಕೂಡ್ಲೂರು ಮುಂತಾದ ಗ್ರಾಮಗಳ ಹತ್ತಿರ ಹರಿಯುವ ತುಂಗಭದ್ರಾ ನದಿ ನೀರನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ನದಿ ಪಾತ್ರದಲ್ಲಿ ಆಗಾಗ ಕಾಣಿಸಿಕೊಳ್ಳುವ ಮೊಸಳೆಗಳಿಂದಾಗಿ ಏತನೀರಾವರಿ ಹೊಂದಿದ ರೈತರು ತಮ್ಮ ಮೋಟಾರ್‌ಗೆ ಅಳವಡಿಸಿದ ಪೈಪ್ ಗಳನ್ನು ಸರಿಪಡಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವಾಗ ಮೈಮೇಲೆ ಬಿದ್ದು, ದಾಳಿ ಮಾಡುತ್ತವೋ ಎನ್ನುವ ಭಯದಲ್ಲಿಯೇ ರೈತರು ಕಾಲಕಳೆಯುತ್ತಿದ್ದಾರೆ.
ನಗರದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ಕೆಂಚನಗುಡ್ಡದ ನೀರು ಸಂಗ್ರಹಾಗಾರಗಳು, ವಿನಾಯಕ ಕ್ಯಾಂಪ್‌ನ ಹರಿಗೋಲ್ ಘಾಟ್, ಬಾಗೇವಾಡಿ ಮುಂತಾದ ಕಡೆಗಳಲ್ಲಿ ದೊಡ್ಡ ಗಾತ್ರದ ಮೊಸಳೆಗಳು ಕಂಡುಬರುತ್ತಿವೆ. ಕೆಂಚನಗುಡ್ಡ ಗ್ರಾಮದ ವಿಜಯನಗರ ಕಾಲುವೆಯಲ್ಲಿ ಇಂದಿಗೂ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ. ನಿಟ್ಟೂರು ಮತ್ತು ವಿನಾಯಕ ನಗರದ ಕ್ಯಾಂಪ್ ಹತ್ತಿರ ತುಂಗಭದ್ರಾ ನದಿಯಲ್ಲಿರುವ ಘಾಟ್‌ಗಳಲ್ಲಿ ಮೊಸಳೆಗಳು ಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುತ್ತಿದ್ದು, ಈ ಘಾಟ್‌ಗಳ ಹತ್ತಿರ ದಡದ ಮೇಲೆ ಬಂದು ಗುಂಪುಗುಂಪಾಗಿ ಮಲಗಿಕೊಳ್ಳುವುದು ಸಾಮಾನ್ಯವಾಗಿದೆ.
ವಿನಾಯಕ ನಗರ ಘಾಟ್‌ನಲ್ಲಿ 7ಕ್ಕೂ ಹೆಚ್ಚು ಮತ್ತು ನಿಟ್ಟೂರು ಘಾಟ್‌ನಲ್ಲಿ 20ಕ್ಕೂ ಹೆಚ್ಚು ಮೊಸಳೆಗಳು ವಾಸಮಾಡುತ್ತಿವೆ ಎಂದು ನದಿ ಪಾತ್ರದ ಗ್ರಾಮಸ್ಥರು ತಿಳಿಸಿದ್ದಾರೆ. ಆದರೆ ನದಿಯಲ್ಲಿನ ಮೊಸಳೆಗಳು ಇಲ್ಲಿವರೆಗೆ ಅನೇಕ ಬಾರಿ ಕೇವಲ ದನಗಳ ಮೇಲೆ ಮಾತ್ರ ದಾಳಿ ಮಾಡಿದ್ದವು. ಮಂಗಳವಾರ ಹರಿಗೋಲ್ ಘಾಟ್‌ನ ಹತ್ತಿರ ಸಿರಗುಪ್ಪ ನಗರದ ವ್ಯಕ್ತಿಯೊಬ್ಬನ ಮೇಲೆ ಮೊಸಳೆ ದಾಳಿ ನಡೆಸಿ ಪ್ರಾಣ ತೆಗೆದ ಘಟನೆ ನಡೆದಿದೆ.
2019ರ ಅಕ್ಟೋಬರ್‌ನಲ್ಲಿ ಕೆಂಚನಗುಡ್ಡದ ರೈತರಾದ ಪಕ್ಕೀರಪ್ಪ, ಲಕ್ಷ್ಮಣ, ವೀರೇಶ ಎನ್ನುವವರಿಗೆ ಸೇರಿದ ಹಸು ಮತ್ತು ಎತ್ತುಗಳು ನದಿ ದಾಟುತ್ತಿದ್ದಾಗ ಮೊಸಳೆ ದಾಳಿ ಮಾಡಿ ಗಾಯಗೊಳಿಸಿದ್ದು ಬಿಟ್ಟರೆ ಹೆಚ್ಚಿನ ಕಾಟ ಕೊಟ್ಟಿರಲಿಲ್ಲ. ಆದರೆ ಇತ್ತೀಚೆಗೆ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದರಿಂದ ನದಿ ಪಾತ್ರದಲ್ಲಿ ಜನ ಮೊಸಳೆಗಳ ಬಗ್ಗೆ ಎಚ್ಚರಿಕೆಯಿಂದಿರಬೇಕಾಗಿದೆ.
ನದಿ ಪಾತ್ರದಲ್ಲಿ ಮೊಸಳೆಗಳು ವಾಸಮಾಡುವ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾಮಫಲಕಗಳನ್ನು ಅಳವಡಿಸುವಂತೆ ಅರಣ್ಯ ಇಲಾಖೆ ಅಧಿ ಕಾರಿಗಳಿಗೆ ಪತ್ರ ಬರೆದು ತಿಳಿಸಲಾಗುವುದು.
ಎಸ್.ಬಿ. ಕೂಡಲಗಿ,
ತಹಶೀಲ್ದಾರ್
ತಾಲೂಕಿನಲ್ಲಿ ಮೊಸಳೆಗಳು ವಾಸಿಸುವ 6 ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿ ಮೊಸಳೆಗಳು ವಾಸವಿರುವ ಬಗ್ಗೆ ನಾಮಫಲಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
ಟಿ. ಪಂಪಾಪತಿ ನಾಯ್ಕ,
ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ
2019 ಆಗಸ್ಟ್‌ನಲ್ಲಿ ಕೆಂಚನಗುಡ್ಡದ ಹತ್ತಿರ ನದಿಯಲ್ಲಿ 2 ಜಾನುವಾರುಗಳ ಮೇಲೆ ಮೊಸಳೆ ದಾಳಿ ಮಾಡಿ ತೀವ್ರ ಗಾಯಗೊಳಿಸಿದ್ದವು. ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.
ಗಂಗಾಧರ,
ಪಶುಸಂಗೋಪನ ಇಲಾಖೆ ಅಧಿಕಾರಿ
ಆರ್. ಬಸವರೆಡ್ಡಿ ಕರೂರು