ಸಿರುಗುಪ್ಪ: ತುಂಗಭದ್ರಾ ನದಿಗೆ ಜಲಾಶಯದಿಂದ ನೀರು ಬಿಟ್ಟಿರುವುದರಿಂದ ನದಿಯಲ್ಲಿರುವ ಮೀನು, ಮೊಸಳೆ, ನೀರು ನಾಯಿ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳಿಗೆ ಅನುಕೂಲವಾಗಿದೆ.
ಕಳೆದ 2 ತಿಂಗಳಿನಿಂದ ತುಂಗಭದ್ರಾ ನದಿಯಲ್ಲಿ ನೀರು ಹರಿಯದೇ ಕೇವಲ ನದಿಯ ತಗ್ಗುದಿನ್ನೆಗಳಲ್ಲಿ ಮಾತ್ರ ನೀರು ಇದ್ದವು. ಈ ತಗ್ಗುದಿನ್ನೆಗಳಲ್ಲಿ ಮೀನುಗಳು, ಮೊಸಳೆಗಳು, ನೀರು ನಾಯಿಗಳು ವಾಸ ಮಾಡುತ್ತಿದ್ದವು. ಆದರೆ ಕಳೆದ ಒಂದು ವಾರದ ಹಿಂದೆ ನದಿ ದಂಡೆಯ ಗ್ರಾಮಗಳ ಜನರಿಗೆ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಸರ್ಕಾರವು ಜಲಾಶಯದಿಂದ ನದಿಗೆ ನೀರನ್ನು ಬಿಟ್ಟಿರುವುದು ನದಿಯಲ್ಲಿರುವ ಜಲಚರಗಳ, ಪ್ರಾಣಿ ಪಕ್ಷಿಗಳ ನೀರಿನ ದಾಹ ತಣಿಸಲು ಅನುಕೂಲವಾಗಿದೆ.
ಕೆಂಚನಗುಡ್ಡ ಗ್ರಾಮದ ಹತ್ತಿರ ಹರಿಯುವ ತುಂಗಭದ್ರ ನದಿಗೆ ನೀರು ಸಂಗ್ರಹಗಾರ ಕಟ್ಟಲಾಗಿದ್ದು, ಇಲ್ಲಿ ಸದ್ಯ ಜಲಾಶಯದಿಂದ ಬಿಟ್ಟ ನೀರು ಸಂಗ್ರಹವಾಗಿದ್ದು, ಅನೇಕ ಜಾತಿಯ ಮೀನುಗಳು ಉಸಿರಾಡಲು ಅನುಕೂಲವಾಗಿದೆ.
ನದಿಗೆ ನೀರು ಬಿಟ್ಟಿರುವುದರಿಂದ ನದಿಯಲ್ಲಿ ವಿವಿಧ ಜಲಚರಗಳು ತಮ್ಮ ಆವಾಸ ಸ್ಥಾನ ಕಂಡುಕೊಂಡಿದ್ದು, ಜೀವ ಸರಪಳಿ ಕಾಣಬಹುದಾಗಿದೆ. ಮಿಂಚುಳ್ಳಿ, ವಿವಿಧ ಜಾತಿಯ ಕೊಕ್ಕರೆಗಳು, ನೀರುನಾಯಿ ಸೇರಿದಂತೆ ಅನೇಕ ಜಲಚರಗಳು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿರುವುದನ್ನು ಕಾಣಬಹುದಾಗಿದೆ. ಕೆಂಚನಗುಡ್ಡದ ನೀರು ಸಂಗ್ರಹಗಾರಗಳ ಸಮೀಪ 30-40ಕ್ಕೂ ಹೆಚ್ಚು ಮೊಸಳೆಗಳು ಇರುವುದು ಕಂಡುಬಂದಿದ್ದು, ಮೀನುಗಾರರು ನದಿಯಲ್ಲಿ ಮೀನು ಹಿಡಿಯುವ ಕೆಲಸ ನಿಲ್ಲಿಸಿದ ನಂತರ ಮತ್ತು ಜನರ ಸಂಚಾರ ನದಿ ತೀರದಲ್ಲಿ ಕಡಿಮೆಯಾದ ಮೇಲೆ ದಂಡೆಗೆ ಬಂದು ಮೊಸಳೆಗಳು ವಿಶ್ರಾಂತಿ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.
ಹರಿಗೋಲ್ ಘಾಟ್‌ನಲ್ಲಿ ಮೊಸಳೆ, ನೀರುನಾಯಿಗಳು ಕಂಡು ಬಂದಿದ್ದು, ಈ ಭಾಗದಲ್ಲಿ ಕಂಡುಬಂದ ಮೊಸಳೆಗಳು ಯಾವುದೇ ಜೀವಹಾನಿ ಮಾಡಿಲ್ಲ. ಮೊಸಳೆ ಮತ್ತು ನೀರುನಾಯಿಗಳನ್ನು ಬೇಟೆಯಾಡಲು ಬೇಟೆಗಾರರು ಬರುತ್ತಾರೆನ್ನುವ ಮಾಹಿತಿ ಬಂದಿದ್ದು, ಅವುಗಳನ್ನು ರಕ್ಷಿಸಲು ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ.
•
ಟಿ.ಪಂಪಾಪತಿನಾಯ್ಕ,
ವಲಯ ಅರಣ್ಯಾಧಿಕಾರಿ.