Advertisement

ತಾಲೂಕಿನ 6 ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೇ ಇಲ್ಲ!

11:19 AM Jul 29, 2019 | Naveen |

ಸಿರುಗುಪ್ಪ: ತಾಲೂಕಿನಲ್ಲಿ ಒಟ್ಟು 171 ಸರ್ಕಾರಿ ಶಾಲೆಗಳಿದ್ದು, ಇದರಲ್ಲಿ 6 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. 29 ಏಕೋಪಾಧ್ಯಾಯ ಶಾಲೆಗಳಿವೆ. 576 ಶಿಕ್ಷಕರಿದ್ದು, 472 ಶಿಕ್ಷಕರ ಕೊರತೆ ಇದೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

Advertisement

ಕಡ್ಡಾಯ ಶಿಕ್ಷಣದ ಮೂಲಕ ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಕರು ಸರ್ಕಾರದ ಯೋಜನೆಗಳನ್ನು ಪಾಲಕರಿಗೆ ತಿಳಿಸಿ ಮಕ್ಕಳನ್ನು ಶಾಲೆಗೆ ದಾಖಲಿಸಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ ಸರ್ಕಾರ ಮಾತ್ರ ಶಿಕ್ಷಕರನ್ನು ನೇಮಿಸುತ್ತಿಲ್ಲ, ನಿಯಮಾನುಸಾರವಾಗಿ ಕನಿಷ್ಠ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿರಬೇಕು. ಆದರೆ ಕೆಲವು ಶಾಲೆಗಳಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಇಂಥ ಶಾಲೆಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠಮಾಡುವುದಾದರೂ ಹೇಗೆ? ಪಾಠದೊಂದಿಗೆ ಬಿಸಿಯೂಟದ ಬಗ್ಗೆ ಗಮನಹರಿಸಬೇಕು, ಹಾಲು ಕೊಡಬೇಕು, ದಾಖಲಾತಿ ನೋಡಿಕೊಳ್ಳಬೇಕು, ಪ್ರತಿದಿನ ಹಾಜರಾತಿಯನ್ನೂ ಹಾಕಬೇಕು. ಈ ಕೆಲಸದ ಜತೆಗೆ ಕಚೇರಿ ಕೆಲಸವನ್ನು ನೋಡಿಕೊಳ್ಳಬೇಕು. ಇಷ್ಟೆಲ್ಲವನ್ನು ಒಬ್ಬ ಶಿಕ್ಷಕರು ಮಾಡಬಹುದು ಹೇಗೆ ಎನ್ನುವುದರ ಬಗ್ಗೆ ಸರ್ಕಾರದ ಗಮನ ಹರಿಸದಿರುವುದು ಮಾತ್ರ ವಿಷಾದ.

ಕನಿಷ್ಠ ಪಕ್ಷ ಸರ್ಕಾರ ಶಿಕ್ಷಕರ ಕೊರತೆ ನೀಗಿಸಲು ಶೈಕ್ಷಣಿಕ ವರ್ಷ ಪ್ರಾರಂಭದ ದಿನಗಳಲ್ಲಿಯೇ ಅತಿಥಿ ಶಿಕ್ಷಕರನ್ನಾದರೂ ನೇಮಿಸಿದರೆ ವಿದ್ಯಾರ್ಥಿಗಳಿಗೆ ಪಾಠಮಾಡಲು ಅನುಕೂಲವಾಗುತ್ತದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಇತರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಂತೆ ವಿದ್ಯಾಭ್ಯಾಸದಲ್ಲಿ ಮುಂದುವರೆಯಲು ಸಾಧ್ಯವಾಗುತ್ತದೆ.

ಅತಿಥಿ ಶಿಕ್ಷಕರ ನೇಮಕಕ್ಕೆ ಆದೇಶ
ಈಗಾಗಲೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ನಮ್ಮ ತಾಲೂಕಿಗೆ 370 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರ ಆದೇಶ ನೀಡಿದೆ. ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಒಬ್ಬ ಶಿಕ್ಷಕರನ್ನು ನಿಯೋಜನೆ ಮಾಡಿದ್ದು, ಒಬ್ಬ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು.
ಪಿ.ಡಿ.ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ

ಶಿಕ್ಷಕರ ನೇಮಿಸಿ
ಸರ್ಕಾರ ಕೇವಲ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಬಟ್ಟೆ, ಶೂ, ಹಾಲು ನೀಡುವುದು ಮುಖ್ಯವಲ್ಲ. ಶಿಕ್ಷಕರ ಕೊರತೆ ಇಲ್ಲದಂತೆ ಮಾಡಬೇಕು. ಪ್ರತಿ ಶಾಲೆಯಲ್ಲಿ ಮಕ್ಕಳ ದಾಖಲಾತಿಗೆ ತಕ್ಕಂತೆ ಶಿಕ್ಷಕರನ್ನು ನೇಮಿಸಬೇಕು.
ಎನ್‌.ನಾಗರಾಜ, ವಕೀಲ, ತೆಕ್ಕಲಕೋಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next