ಸಿರುಗುಪ್ಪ: ನಗರಸಭೆಯ ಅಧಿಕಾರಿಗಳು ನಗರದಲ್ಲಿರುವ ಎಲ್ಲಾ ಅಂಗಡಿ ಹೋಟೆಲ್ ಗಳಿಗೆ ತೆರಳಿ ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಮೂಡಿಸಿದ್ದು, ಪ್ಲಾಸ್ಟಿಕ್ ಕೈ ಚೀಲ ದೊರೆಯುವುದಿಲ್ಲ, ಪಾರ್ಸಲ್ ನೀಡಲಾಗುವುದಿಲ್ಲ ಇತ್ಯಾದಿ ನಾಮಫಲಕಗಳ ಭಿತ್ತಿಪತ್ರಗಳನ್ನು ಅಳವಡಿಸಿದ್ದರೂ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ.
ದೇಶಾದ್ಯಂತ ಪ್ಲಾಸ್ಟಿಕ್ ನಿಷೇಧವಾಗಿದೆ. ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ಬಳಕೆ, ಒಮ್ಮೆಯಷ್ಟೇ ಬಳಸಬಹುದಾದ ಪ್ಲಾಸ್ಟಿಕ್‌ನ ಮಾರಾಟ ಮತ್ತು ಬಳಕೆ ನಿಷೇಧಿಸಲಾಗಿದೆ. ಆದರೆ ನಗರದ ತರಕಾರಿ ಮಾರುಕಟ್ಟೆ ಮತ್ತು ಹೋಟೆಲ್, ಅಂಗಡಿಗಳಲ್ಲಿ ಪ್ಲಾಸ್ಟಿಕ್ ನಿಷೇಧವೇ ಆಗಿಲ್ಲ. ಪ್ಲಾಸ್ಟಿಕ್ ನಿಷೇಧದ ಕುರಿತು ನಗರಸಭೆ ಅಲ್ಲಲ್ಲಿ ದೊಡ್ಡದಾದ ಭಿತ್ತಿಪತ್ರಗಳನ್ನು ಅಂಟಿಸಿದೆ.
ಸಂತೆಯಲ್ಲಿ ಮತ್ತು ಹೋಟೆಲ್ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ. ಅಷ್ಟಲ್ಲದೆ ಎಲ್ಲ ಅಂಗಡಿಗಳು, ಹೋಟೆಲ್‌ಗಳಿಗೆ ತೆರಳಿ ಈ ಕುರಿತು ಜಾಗೃತಿ ಮೂಡಿಸಿದ್ದು, ಈ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕೈಚೀಲ ದೊರೆಯುವುದಿಲ್ಲ, ಪಾರ್ಸಲ್ ನೀಡಲಾಗುವುದಿಲ್ಲ ಇತ್ಯಾದಿ ನಾಮಫಲಕ ಅಳವಡಿಸಲಾಗಿದೆ.
ಬಹುತೇಕ ಹೋಟೆಲ್, ಅಂಗಡಿಗಳಲ್ಲಿಯೂ ಸಂತೆ ಮಾರುಕಟ್ಟೆಯಲ್ಲಿಯೂ ಭಿತ್ತಿಪತ್ರಗಳನ್ನು ಹಾಕಿದ್ದರೂ ಅವುಗಳ ಪೈಕಿ ಬಹುತೇಕ ಭಿತ್ತಿಪತ್ರಗಳನ್ನು ಹರಿದು ಹಾಕಲಾಗಿದೆ. ಈಗ ಸಂತೆಯಲ್ಲಿ ಬಹುತೇಕ ವ್ಯಾಪಾರಿಗಳು ಪ್ಲಾಸ್ಟಿಕ್ ಚೀಲಗಳನ್ನೇ ನೀಡುತ್ತಿದ್ಧಾರೆ. ಗ್ರಾಹಕರು ಕೈಚೀಲ ಮರೆದು ಬರುತ್ತಿದ್ದಾರೆ. ಇದರಿಂದಾಗಿ ವ್ಯಾಪಾರಿಗಳು ತೆಳ್ಳಗಿನ ಪ್ಲಾಸ್ಟಿಕ್ ಚೀಲದಲ್ಲಿಯೇ ವಸ್ತುಗಳನ್ನು ನೀಡುತ್ತಿದ್ದಾರೆ. ತರಕಾರಿ ದಿನಸಿ ಮೊದಲಾದ ಬಹುತೇಕ ವಸ್ತುಗಳನ್ನು ಪ್ಲಾಸ್ಟಿಕ್ ಕೈ ಚೀಲದಲ್ಲಿ ನೀಡುವುದರ ಜತೆಗೆ ಪ್ಲಾಸ್ಟಿಕ್ ಚೀಲದಲ್ಲಿಯೂ ತುಂಬಿಸಿ ಇಡಲಾಗುತ್ತದೆ. ದಪ್ಪನೆಯ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಅನ್ವಯವಾಗುವುದಿಲ್ಲ. ಆದರೆ ತೆಳ್ಳಗಿನ ಪ್ಲಾಸ್ಟಿಕ್ ಅನ್ನೇ ಬಳಸಲಾಗುತ್ತಿದೆ.
ಹೋಟೆಲ್‌ಗಳಲ್ಲಿ, ರಸ್ತೆ ಬದಿ ಹೋಟೆಲ್ ಗಳಲ್ಲಿ ಇಡ್ಲಿ ಮಾಡಲು ಪಾತ್ರೆಗಳಲ್ಲಿ ತೆಳ್ಳಗಿನ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಅಲ್ಲದೆ ಗ್ರಾಹಕರಿಗೆ ನೀಡುವ ತಿಂಡಿ, ಉಪಾಹಾರ, ಊಟದ ಪ್ಲೇಟ್‌ಗಳಲ್ಲಿ ತೆಳ್ಳಗಿನ ಪ್ಲಾಸ್ಟಿಕ್‌ನ್ನು ಹಾಕಿ ಅದರಲ್ಲಿ ಆಹಾರ ಪದಾರ್ಥಗಳನ್ನು ಇಟ್ಟು ಕೊಡುತ್ತಾರೆ. ಪಾರ್ಸಲ್ ತೆಗೆದುಕೊಂಡು ಹೋಗುವ ಗ್ರಾಹಕರಿಗೂ ತೆಳ್ಳನೆಯ ಪ್ಲಾಸ್ಟಿಕ್‌ನ ಹಾಳೆಯಲ್ಲಿಯೇ ಉಪಾಹಾರ, ಟೀ, ಊಟ ಹಾಗೂ ಬೇಕರಿ ತಿನಿಸುಗಳನ್ನು ನೀಡುತ್ತಿದ್ದಾರೆ. ಒಟ್ಟಾರೆ ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಎನ್ನುವುದು ಕೇವಲ ಕಾಗದದಲ್ಲಿ ಮಾತ್ರ ಆಗಿದೆ. ವಾಸ್ತವವಾಗಿ ಪ್ಲಾಸ್ಟಿಕ್ ಬಳಕೆ ನಿಂತಿಲ್ಲ.
ಅಧಿಕಾರಿಗಳು ಸರ್ಕಾರದ ಸುತ್ತೋಲೆ ಬಂದಾಗ ಮಾತ್ರ ಸಾರ್ವಜನಿಕರಿಗೆ, ಅಂಗಡಿ, ಹೋಟೆಲ್, ತರಕಾರಿ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬಳಸಿದರೆ ದಂಡ ಮತ್ತು ಪ್ರಕರಣದ ದಾಖಲಿಸುವುದಾಗಿ ಕರಪತ್ರ ನೀಡಿ ತಿಳಿವಳಿಕೆ ನೀಡುತ್ತಾರೆ. ನಂತರದ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯಾಗುತ್ತಿರುವ ಬಗ್ಗೆ ಗಮನ ಹರಿಸುವುದಿಲ್ಲ.
ಅಮರಮ್ಮ, ಸ್ಥಳೀಯರು
ಕಳೆದ ಅ.2ರಿಂದ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಉದ್ದೇಶದಿಂದ ಸಾರ್ವಜನಿಕರಿಗೆ, ಅಂಗಡಿ, ಹೋಟೆಲ್, ಬೇಕರಿ ಮತ್ತು ತರಕಾರಿ ವ್ಯಾಪಾರಿಗಳ ಬಳಿ ಖುದ್ದಾಗಿ ಭೇಟಿ ನೀಡಿ ಪ್ಲಾಸ್ಟಿಕ್ ಬಳಸಿದರೆ ದಂಡ ಮತ್ತು ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಸಲಾಗಿತ್ತು. ಇತ್ತೀಚೆಗೆ ಮತ್ತೆ ಪ್ಲಾಸ್ಪಿಕ್ ಬಳಕೆ ಹೆಚ್ಚಾಗುತ್ತಿರುವುದರಿಂದ ವ್ಯಾಪಾರಿ ಮಳಿಗೆಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು.
ಪ್ರೇಮ್ ಚಾರ್ಲ್ಸ್,
ಪೌರಾಯುಕ್ತರು, ನಗರಸಭೆ
ಆರ್.ಬಸವರೆಡ್ಡಿ ಕರೂರು