Advertisement

ಭತ್ತ ನಾಟಿಗೆ ಎದುರಾಯ್ತು ಆಳುಗಳ ಸಮಸ್ಯೆ

01:19 PM Jan 08, 2020 | |

ಸಿರುಗುಪ್ಪ: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಕಟಾವು ಮುಗಿದಿದ್ದು, ಹಿಂಗಾರು ಹಂಗಾಮಿನ ಭತ್ತ ನಾಟಿ ಕಾರ್ಯಕ್ಕೆ ಈಗ ಆಳುಗಳ ಕೊರತೆ ಎದುರಾಗಿದೆ.

Advertisement

ಹಿಂಗಾರು ಹಂಗಾಮಿನಲ್ಲಿ ಎಲ್‌ಎಲ್‌ಸಿ ಕಾಲುವೆ, ತುಂಗಭದ್ರಾ ಮತ್ತು ವೇದಾವತಿ ಹಗರಿ ನದಿ, ದೊಡ್ಡಹಳ್ಳ, ಗರ್ಜಿಹಳ್ಳ, ಕೆಂಚಿಹಳ್ಳ ಹಾಗೂ ಬೋರ್‌ ವೆಲ್‌ ನೀರು ಆಶ್ರಯಿಸಿರುವ ತಾಲೂಕಿನ ಸುಮಾರು 28 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿಕಾರ್ಯ ಆಗಬೇಕಿದೆ. ಆದರೆ ತಾಲೂಕಿನ 27 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 84 ಹಳ್ಳಿಗಳಲ್ಲಿ ಶೇ. 50ರಷ್ಟು ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಮಹಾನಗರಗಳಿಗೆ ವಲಸೆ ಹೋಗಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಭತ್ತ ನಾಟಿ ಕಾರ್ಯ
ಮಾಡುತ್ತಿದ್ದ ಶೇ. 25ರಷ್ಟು ಮಹಿಳಾ ಕಾರ್ಮಿಕರ ಕೊರತೆ ಎದುರಾಗಿದ್ದು, ಭತ್ತ ನಾಟಿಕಾರ್ಯ ನಿಧಾನ ಗತಿಯಲ್ಲಿ ನಡೆಯುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಸಸಿ ಕಿತ್ತು ಹೊಲಕ್ಕೆ ಹರವಿ ಒಂದು ಎಕರೆ ನಾಟಿಮಾಡಲು ರೂ. 2,500 ರೂ. ಕೂಲಿ ನೀಡಿದ್ದರು. ಆದರೆ ಈಗ ಹಿಂಗಾರು ಹಂಗಾಮಿನಲ್ಲಿ ಒಂದು ಎಕರೆ ಭತ್ತ ನಾಟಿ ಮತ್ತು ಸಸಿ ಕೀಳಲು ರೂ. 3 ಸಾವಿರ ರೂ. ನೀಡಿದರೂ ಆಳುಗಳು ಸಿಗುತ್ತಿಲ್ಲ.

ಭತ್ತದ ಸಸಿ ಹಾಕಿ ಸುಮಾರು 40 ದಿನ ಕಳೆದಿದ್ದು ಮತ್ತಷ್ಟು ದಿನ ತಡವಾಗಿ ನಾಟಿ ಮಾಡಿದರೆ ಉತ್ತಮ ಇಳುವರಿ ಬರುವುದಿಲ್ಲ ಎಂಬ ಕಾರಣಕ್ಕೆ ರೈತರು ಪಕ್ಕದ ಸೀಮಾಂಧ್ರ ಪ್ರದೇಶದಿಂದ ಆಟೋಗಳ ಮೂಲಕ ಮಹಿಳೆಯರನ್ನು ಕರೆತಂದು ನಾಟಿ ಮಾಡಿಸಲು ಮುಂದಾಗಿದ್ದಾರೆ. ಆದರೆ ಸೀಮಾಂಧ್ರ ಪ್ರದೇಶದಿಂದ ಬರುವ ಮಹಿಳೆಯರು ಸಸಿಯನ್ನು ಕಿತ್ತು ಮಡಿಗಳಲ್ಲಿಯೇ ಬಿಡುತ್ತಾರೆ. ಹೀಗಾಗಿ ಮತ್ತೆ 2 ಗಂಡಾಳುಗಳ ಮೂಲಕ ಈ ಸಸಿಯನ್ನು ಹರವಬೇಕು. ಆಗ ಮಾತ್ರ ನಾಟಿಮಾಡಲು ಬರುವುದಾಗಿ ಹೇಳುತ್ತಿದ್ದು, ರೈತರಿಗೆ ದುಪ್ಪಟ್ಟು ಖರ್ಚಾಗುತ್ತಿದೆ.

ಒಂದು ಎಕರೆ ನಾಟಿಮಾಡಲು ರೂ. 3 ಸಾವಿರ ಕೂಲಿ, ಮತ್ತು ಅವರ ಗ್ರಾಮದಿಂದ ಬಂದುಹೋಗಲು ಆಟೋ ಬಾಡಿಗೆ ಕೊಡಬೇಕಾಗಿರುವುದರಿಂದ ರೈತರು ಒಂದು ಎಕರೆ ಭತ್ತ ನಾಟಿಮಾಡಲು ಸುಮಾರು ರೂ. 4 ಸಾವಿರ ರೂ. ಖರ್ಚು ಮಾಡಬೇಕಿದೆ.

Advertisement

ಭೂಮಿಯನ್ನು ಟ್ರ್ಯಾಕ್ಟರ್‌ನಿಂದ ಹದಗೊಳಸಲು ರೂ. 3,300, ಟ್ರ್ಯಾಕ್ಟರ್‌ ಬಾಡಿಗೆ, ಸಸಿ ಹರವಲು ರೂ. 600 ಒಟ್ಟು ರೂ. 7,900 ವೆಚ್ಚಮಾಡಬೇಕಿದೆ. ಈ ಹಿಂದೆ ಭತ್ತ ನಾಟಿ, ಭೂಮಿ ಹದಮಾಡುವುದು, ಆಳುಗಳ ಖರ್ಚು ಸೇರಿದಂತೆ ಕೇವಲ ರೂ. 4ಸಾವಿರದಿಂದ ರೂ. 5ಸಾವಿರ ಖರ್ಚಾಗುತ್ತಿತ್ತು. ಆದರೆ ಈ ವರ್ಷ ಒಂದು ಎಕರೆ ಭತ್ತ ನಾಟಿಗೆ ರೂ. 3ಸಾವಿರ ಹೆಚ್ಚುವರಿ ಹಣವನ್ನು ರೈತರು ಖರ್ಚು ಮಾಡಬೇಕಾಗಿದೆ. ಆದರೂ ಭತ್ತ ನಾಟಿ ಕಾರ್ಯಕ್ಕೆ ಕಾರ್ಮಿಕರ ಕೊರತೆ ರೈತರನ್ನು ಚಿಂತೆಗೀಡುಮಾಡಿದೆ.

ತಾಲೂಕಿನಾದ್ಯಂತ ಹಿಂಗಾರು ಹಂಗಾಮಿನಲ್ಲಿ 28 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತನಾಟಿ ಕಾರ್ಯ ನಡೆಯಬೇಕಿತ್ತು. ಆದರೆ ಸದ್ಯ 2 ಸಾವಿರ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಮುಗಿದಿದೆ.
ನಜೀರ್‌ ಅಹಮ್ಮದ್‌,
ತಾಲೂಕು ಸಹಾಯಕ ಕೃಷಿ ನಿರ್ದೇಶಕ

ಮಾರ್ಚ್‌ ಅಂತ್ಯಕ್ಕೆ ಕಾಲುವೆಗೆ ನೀರು ಹರಿಸುವುದರಿಂದ ಬೇಗ ನಾಟಿ ಮಾಡಿದರೆ ಅನುಕೂಲವಾಗಲಿದೆ. ಆಳುಗಳ ಕೊರತೆಯಿಂದ ನಾಟಿಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ಮುಂದೆ ನೀರಿನ ತೊಂದರೆ ಉಂಟಾದರೆ ಇಳುವರಿಗೆ ಹೊಡೆತ ಬೀಳಲಿದೆ.
.ಹುಲುಗಯ,
ಬಗ್ಗೂರು ಗ್ರಾಮದ ರೈ

„ಆರ್‌.ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next