ಸಿರುಗುಪ್ಪ: ತಾಲೂಕಿನಲ್ಲಿ ಭತ್ತ ಬೆಳೆದ ರೈತರಿಗೆ ಸರ್ಕಾರ ಮಾಡಿರುವ ನೂರಾರು ನಿಯಮಗಳಿಗೆ ಬೇಸತ್ತು ಭತ್ತ ಖರೀದಿ ಕೇಂದ್ರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ನಗರದ ಎಪಿಎಂಸಿ ಆವರಣದಲ್ಲಿ ಕಳೆದ 10ದಿನಗಳಿಂದ ಆರಂಭವಾದ ಭತ್ತ ಖರೀದಿ ಕೇಂದ್ರಕ್ಕೆ ಬಂದು ಒಬ್ಬ ರೈತ ಕೂಡ ಭತ್ತ ಮಾರಾಟ ಮಾಡಿಲ್ಲ. ಕನಿಷ್ಠ ಒಂದು ಕ್ವಿಂಟಾಲ್ ಕೂಡ ಖರೀದಿಯಾಗಿಲ್ಲ.
ಕೇಂದ್ರದಲ್ಲಿ ಭತ್ತ ಖರೀದಿಗೆ ನಿಗ ಪಡಿಸಿದ ಗುಣಮಟ್ಟ ಮತ್ತು ಮೀಸಲಾದ ಶರತ್ತುಗಳಿಗೆ ಬೆಳೆಗಾರರು ಬೆಚ್ಚಿ ಬೀಳುವಂತಾಗಿದೆ. ಬೆಳೆಗಾರರು ತಮ್ಮ ಇತ್ತೀಚಿನ 2 ಭಾವಚಿತ್ರ, ಬ್ಯಾಂಕ್ ಖಾತೆ, ಗುರುತಿನ ಚೀಟಿ. ಪಹಣಿ, ಕಂದಾಯ ಇಲಾಖೆ ಅಧಿಕಾರಿಗಳಿಂದ ಬೆಳೆ ಬೆಳೆದ ಕುರಿತು ದೃಢೀಕರಣ ಪತ್ರ ತರುವುದು ಕಡ್ಡಾಯವಾಗಿದೆ. ಅಲ್ಲದೆ ಶೂಟ್ ದತ್ತಾಂಶದಲ್ಲಿ ನೋಂದಾಯಿಸಬೇಕಾಗಿದೆ. ಬೆಳೆ ಮಾರಾಟಕ್ಕೆ ಈ ಎಲ್ಲಾ ದಾಖಲೆಗಳ ಸಂಗ್ರಹಣೆಯಲ್ಲೇ ಕಾಲಹರಣವಾಗುವ ಹಿನ್ನೆಲೆಯಲ್ಲಿ ಖರೀದಿ ಕೇಂದ್ರ ಕುರಿತು ರೈತರ ಆಸಕ್ತಿ ಕಡಿಮೆಯಾಗಿದೆ.
ಎಪಿಎಂಸಿಯಲ್ಲಿರುವ ಖರೀದಿ ಕೇಂದ್ರದಲ್ಲಿ ಈವರೆಗೆ 25 ರೈತರು ನೋಂದಣಿ ಮಾಡಿಸಿದ್ದರು. ಇದರಲ್ಲಿ ಇಬ್ಬರು ಮಾರಾಟಕ್ಕೂ ಮುನ್ನ ಭತ್ತದ ಸ್ಯಾಂಪಲ್‌ಗಳನ್ನು ತಂದಿದ್ದರು. ಆದರೆ ಸರ್ಕಾರ ನಿಗದಿಪಡಿಸಿದ ಗುಣಮಟ್ಟ ಈ ಭತ್ತದಲ್ಲಿ ಇಲ್ಲವೆಂದು ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಕೇಂದ್ರದಲ್ಲಿ ಕೇವಲ ಖರೀದಿಗೆ ವಿಧಿಸಿರುವ ಗುಣಮಟ್ಟದ ನಿಯಮ ಬೆಳೆಗಾರರ ಕಣ್ಣಲ್ಲಿ ನೀರು ತರಿಸುವಂತಿದೆ.
ಗುಣಮಟ್ಟದ ಎ-ಗ್ರೇಡ್ ಭತ್ತಕ್ಕೆ 1835ರೂ., ಸಾಮಾನ್ಯ ಗ್ರೇಡ್ ಭತ್ತಕ್ಕೆ 1815 ರೂ. ದರ ನಿಗ ಪಡಿಸಲಾಗಿದೆ. ಆದರೂ ಕೇಂದ್ರದಲ್ಲಿ ಖರೀದಿಗಿರುವ ಷರತ್ತುಗಳಿಗೆ ಅನುಗುಣವಾಗಿ ಭತ್ತ ತಂದು ಮಾರಾಟ ಮಾಡಲು ರೈತರು ಹಿಂದೇಟು ಹಾಕುತ್ತಿದ್ದು, ಹೊರಗೆ 1600 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆದಿದ್ದರೂ ರೈತರಿಗೆ ಯಾವುದೇ ರೀತಿಯಲ್ಲಿ ಅನುಕೂಲವಾಗಿಲ್ಲ.
ಕೇಂದ್ರಕ್ಕೆ ನೇಮಕಗೊಂಡಿರುವ ಇಬ್ಬರು ಅಧಿಕಾರಿಗಳು ತಮ್ಮ ಸಮಯವನ್ನು ಸುಮ್ಮನೆ ಕಳೆಯುವಂತಾಗಿದೆ. ರೈತರು ಬಾರದೆ ಖಾಲಿ ಕುಳಿತುಕೊಳ್ಳುವಂತಾಗಿದೆ. ತಾಲೂಕಿನಲ್ಲಿ 18 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗಿದೆ. ಈಗಾಗಲೇ ಬಹುತೇಕರು ಬೆಲೆ ಕುಸಿತದಿಂದ ನಷ್ಟಕ್ಕೀಡಾಗಿದ್ದಾರೆ. ಇದರಿಂದಾಗಿ ಖರೀದಿ ಕೇಂದ್ರ ಆರಂಭವಾದರು ಯಾವುದೇ ರೀತಿಯಲ್ಲಿ ಪ್ರಯೋಜನವಾಗಿಲ್ಲ .
ಖರೀದಿ ಕೇಂದ್ರದಲ್ಲಿ ಬೆಲೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವಿದ್ದರೂ ಏನೇನೋ ಕಂಡಿಷನ್ ಹಾಕಿ ರೈತರು ಭತ್ತ ಮಾರಲು ಬರಲಾರದಂಗ ಮಾಡ್ಯಾರ. ಸರ್ಕಾರಕ್ಕೆ ನಿಜವಾಗ್ಲು ಕಾಳಜಿ ಇಲ್ಲ.
ಅಯ್ಯಪ್ಪರೆಡ್ಡಿ,
ಬೂದುಗುಪ್ಪ ಗ್ರಾಮದ ಭತ್ತ ಬೆಳೆಗಾರ.
ಈವರೆಗೆ ಖರೀದಿ ಕೇಂದ್ರದಲ್ಲಿ ಭತ್ತವನ್ನು ರೈತರು ಮಾರಾಟ ಮಾಡಿಲ್ಲ. ಆದರೆ 25ಜನ ನೊಂದಾಯಿಸಿದ್ದು, ಇದರಲ್ಲಿ ಇಬ್ಬರು ಭತ್ತದ ಸ್ಯಾಂಪಲ್‌ಗಳನ್ನು ತಂದಿದ್ದರು. ಆದರೆ ಅವು ಸರ್ಕಾರದ ಶರತ್ತಿನಂತೆ ಯೋಗ್ಯವಿಲ್ಲವೆಂದ ಖರೀದಿಸಲು ಸಾಧ್ಯವಾಗಿಲ್ಲ.
ಗೋವಿಂದರೆಡ್ಡಿ,
ಖರೀದಿ ಕೇಂದ್ರದ ಅಧಿಕಾರಿ.
ಆರ್.ಬಸವರೆಡ್ಡಿ, ಕರೂರು