ಸಿರುಗುಪ್ಪ: ತಾಲೂಕಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ರಾಶಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಆದರೆ ಮೋಡಕವಿದ ವಾತಾವರಣ ಆಗಾಗ ಬೀಳುವ ಮಳೆ ರೈತರನ್ನು ಚಿಂತೆಗೀಡು ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಮತ್ತು ಸಕಾಲಕ್ಕೆ ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ಹರಿಸಿದ್ದರಿಂದ ನಿಗದಿತ ಸಮಯಕ್ಕೆ ಭತ್ತ ನಾಟಿ ಮಾಡಲಾಗಿತ್ತು. ಈ ಬಾರಿ ಭತ್ತದ ಇಳುವರಿ ಚೆನ್ನಾಗಿ ಬರುತ್ತಿದೆ. ಎಕರೆಗೆ 45-50 ಚೀಲದ ವರೆಗೆ ಇಳುವರಿ ಬರುತ್ತಿದೆ. ಆದರೆ ಕಳೆದ ಕೆಲವು ದಿನಗಳಿಂದ ಪದೇ ಪದೇ ಮೋಡ ಕವಿದ ವಾತಾವರಣ ತುಂತುರು ಮಳೆ ಬೀಳುತ್ತಿರುವುದರಿಂದ ಬೆಳೆದು ನಿಂತ ಭತ್ತ ನೆಲಕ್ಕೆ ಉರುಳಿ ಬೀಳುತ್ತಿದೆ. ನೆಲಕ್ಕೆ ಬಿದ್ದ ಭತ್ತವನ್ನು ಎತ್ತಿಕಟ್ಟಲು ಒಂದು ಎಕರೆಗೆ 10 ರಿಂದ 15 ಆಳುಗಳು ಬೇಕಾಗುತ್ತಾರೆ. ಇದರಿಂದಾಗಿ ಕಟಾವಿನ ಖರ್ಚು ಹೆಚ್ಚಾಗುತ್ತಿದೆ.
ಅಲ್ಲದೆ ಬೆಲೆ ಕುಸಿಯುವ ಭೀತಿ ರೈತರನ್ನು ಕಾಡುತ್ತಿದೆ. ಕಳೆದ ಒಂದು ವಾರದಿಂದ ಮಂಜು ಕವಿದ ವಾತಾವರಣವಿದ್ದು, ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಭತ್ತ ಕಟಾವು ಯಂತ್ರಗಳ ದಲ್ಲಾಳಿಗಳು ದಿನದಿಂದ ದಿನಕ್ಕೆ ದರ ಹೆಚ್ಚಿಸುತ್ತಿದ್ದಾರೆ.
ತಾಲೂಕಿನಲ್ಲಿ ಸುಮಾರು 31ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇ.20ರಷ್ಟು ಸೋನಾಮಸೂರಿ, ಶೇ.80ರಷ್ಟು ಆರ್‌ಎನ್‌ಆರ್, ಗಂಗಾ ಕಾವೇರಿ, ಕಾವೇರಿ ಸೋನಾ ತಳಿಯ ಭತ್ತವನ್ನು ಬೆಳೆಯಲಾಗಿದೆ. ಬೆಲೆ ಕುಸಿತದಿಂದ ಕಂಗೆಡುತ್ತಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರ ತೆರೆಯಬೇಕೆಂದು ರೈತರು ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಕೃಷ್ಣಾ, ತುಂಗಭದ್ರಾ, ಕಾವೇರಿ ಮತ್ತಿತರ ಭಾಗಗಳಲ್ಲಿಯೂ ಭತ್ತ ಏಕಕಾಲಕ್ಕೆ ಕಟಾವಿಗೆ ಬಂದಿದೆ. ಹೀಗಾಗಿ ಖರೀದಿದಾರರಿಗೆ ಸ್ಥಳೀಯವಾಗಿ ಭತ್ತ ಸಿಗುತ್ತಿದೆ. ಇದರಿಂದಾಗಿ ಬೇರೆ ಬೇರೆ ಕಡೆಗಳಿಂದ ಭತ್ತ ಖರೀದಿಗೆ ಬರುತ್ತಿದ್ದ ವ್ಯಾಪಾರಿಗಳು ಬರದ ಕಾರಣ ಭತ್ತದ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆ ಬೆಳೆಯಲಾಗಿದೆ. ಬೆಲೆ ಕುಸಿತದಿಂದ ಕಂಗೆಡುತ್ತಿರುವ ರೈತರ ನೆರವಿಗೆ ಸರ್ಕಾರ ಬರಬೇಕು. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಈಗಾಗಲೇ ಮನವಿ ಸಲ್ಲಿಸಿದ್ದರೂ ಇನ್ನೂ ಕಾರ್ಯಗತವಾಗಿಲ್ಲ.
ವಾ.ಹುಲುಗಯ್ಯ ತಾಲೂಕು ಅಧ್ಯಕ್ಷರು,
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ
(ನಂಜುಂಡಸ್ವಾಮಿ ಬಣ)
ತಾಲೂಕಿನಲ್ಲಿ ಭತ್ತ ಖರೀದಿ ಕೇಂದ್ರ ತೆರೆಯುವಂತೆ ಜಿಲ್ಲಾಡಳಿತದಿಂದ ಯಾವುದೇ ಆದೇಶ ಬಂದಿಲ್ಲ. ಆದ್ದರಿಂದ ಖರೀದಿ ಕೇಂದ್ರವನ್ನು ತೆರೆದಿಲ್ಲ.
ಎಸ್.ಬಿ.ಕೂಡಲಗಿ,
ತಹಶೀಲ್ದಾರ್