ಆರ್.ಬಸವರೆಡ್ಡಿ ಕರೂರು
ಸಿರುಗುಪ್ಪ: ರೈತರು ತಾಲೂಕಿನಾದ್ಯಂತ ಸುಮಾರು 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಸೋನಾಮಸೂರಿ, ಆರ್. ಎನ್.ಆರ್. 64, ನೆಲ್ಲೂರು ಸೋನಾ ತಳಿಯ ಭತ್ತದ ಬೆಳೆಯು ಈಗ ಕಟಾವಿಗೆ ಬಂದಿದ್ದು ಕಟಾವು ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದ್ದರೂ ಯಂತ್ರಗಳ ಕೊರತೆಯಿಂದ ಭತ್ತ ಕೊಯ್ಲು ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿದೆ.
ಅಲ್ಲದೇ ಬೇಡಿಕೆ ಹೆಚ್ಚಿರುವುದರಿಂದ ದರದಲ್ಲಿಯೂ ಹೆಚ್ಚಾಗಿದೆ. ತಾಲೂಕಿನಲ್ಲಿ ಈಗಾಗಲೇ ಶೇ. 45ರಷ್ಟು ಕೊಯ್ಲು ಕಾರ್ಯ ಮುಗಿದಿದ್ದು, ಉಳಿದ ಶೇ. 55ರಷ್ಟು ಭತ್ತ ಕೊಯ್ಲಿನ ಕಾರ್ಯಕ್ಕೆ ಸಾಕಾಗುವಷ್ಟು ಯಂತ್ರಗಳು ತಾಲೂಕಿಗೆ ಸೀಮಾಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಕಡೆಯಿಂದ ಬಂದಿಲ್ಲದಿರುವುದರಿಂದ ಮತ್ತು ವಾತಾವರಣದಲ್ಲಿ ಉಂಟಾದ ವೈಪರೀತ್ಯದಿಂದ ಬೆಳೆದು ನಿಂತ ಭತ್ತದ ಬೆಳೆಯು ನೆಲಕ್ಕೊರಗಿ ಬಿದ್ದಿರುವುದರಿಂದ ಕೊಯ್ಲಿನ ಯಂತ್ರಗಳಿಗೆ ಈ ಬಾರಿ ಬೇಡಿಕೆ ಹೆಚ್ಚಾಗಿದೆ.
ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಒಂದು ಎಕರೆ ಭತ್ತ ಕೊಯ್ಲು ಮಾಡಲು 45 ನಿಮಿಷದಿಂದ 1 ಗಂಟೆಯವರೆಗೆ ಸಮಯ ತೆಗೆದುಕೊಳ್ಳುತ್ತಿದ್ದ ಯಂತ್ರಗಳು ಈ ಬಾರಿ ಒಂದು ಎಕರೆ ನೆಲಕ್ಕೆ ಬಿದ್ದ ಭತ್ತವನ್ನು ಕೊಯ್ಲು ಮಾಡಲು 2 ರಿಂದ 3 ಗಂಟೆಯವರೆಗೆ ಸಮಯ ತೆಗೆದುಕೊಳ್ಳುತ್ತಿದೆ. ಒಂದು ಎಕರೆ ಭತ್ತ ಕೊಯ್ಲು ಮಾಡಲು ರೂ. 2800ರಿಂದ 3000ದ ವರೆಗೆ ಬೆಲೆ ನಿಗಧಿ ಪಡಿಸಿರುವುದು ರೈತರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ. ಈ ಭಾಗದಲ್ಲಿ ಬಹುತೇಕ ಭತ್ತದ ಬೆಳೆಯು ನೆಲಕ್ಕೆ ಬಿದ್ದಿದ್ದು, ಕೊಯ್ಲು ಕಾರ್ಯ ನಿಧಾನಗತಿಯಲ್ಲಿ ಸಾಗಲು ಒಂದು ಕಾರಣವಾದರೆ, ಕಳೆದ ವರ್ಷದ ಮುಂಗಾರಿನಲ್ಲಿ ರೂ.1800 ರಿಂದ 2500ಗಳವರೆಗೆ ಇದ್ದ ಯಂತ್ರಗಳ ಕಟಾವು ದರವು ಈ ವರ್ಷ 2800ರಿಂದ 3000ಗಳಿಗೆ ಹೆಚ್ಚಾಗಿದೆ. ಆದರೆ ಕೊಯ್ಲು ಮಾಡಿದ ಭತ್ತವನ್ನು ಕೊಳ್ಳಲು ವ್ಯಾಪಾರಿಗಳು ಬಾರದೇ ಇರುವುದರಿಂದ ಭತ್ತಬೆಳೆದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತ ಕಟಾವು ಮಾಡಲು ಹೊರರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಸುಮಾರು 500ಕ್ಕೂ ಹೆಚ್ಚು ಯಂತ್ರಗಳು ಬರುತ್ತಿದ್ದವು. ಆದರೆ ಈ ಬಾರಿ ಕೃಷ್ಣ, ಕಾವೇರಿ, ತುಂಗಭದ್ರಾ, ಆಲಮಟ್ಟಿ ಅಚ್ಚುಕಟ್ಟು ಪ್ರದೇಶದಲ್ಲಿ ಏಕಕಾಲಕ್ಕೆ ಭತ್ತ ಕಟಾವಿಗೆ ಬಂದಿರುವುದರಿಂದ ಈ ಬಾರಿ ಕೇವಲ 200 ಯಂತ್ರಗಳು ಕೊಯ್ಲಿಗೆ ಬಂದಿರುವುದರಿಂದ ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ.