Advertisement

ಪ್ರಯಾಣಿಕರಿಗಿಲ್ಲ ತಂಗುದಾಣ!

12:15 PM Feb 29, 2020 | Naveen |

ಸಿರುಗುಪ್ಪ: ನಗರದಲ್ಲಿ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ನಗರದಲ್ಲಿ ಬಸ್‌ ತಂಗುದಾಣವಿಲ್ಲದೆ ಬಸ್‌ಗಳಿಗೆ ಕಾಯುವ ಪ್ರಯಾಣಿಕರು ಬಿಸಿಲಿಗೆ ಬಸವಳಿಯುತ್ತಿದ್ದಾರೆ.

Advertisement

ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಸಿರುಗುಪ್ಪ ನಗರದಲ್ಲಿ ಹೈಟೆಕ್‌ ಬಸ್‌ನಿಲ್ದಾಣ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಇದರಿಂದಾಗಿ ತಾತ್ಕಾಲಿಕ ಬಸ್‌ ನಿಲ್ದಾಣವನ್ನು ನಿರ್ಮಿಸದ ಕಾರಣ ನೆರಳಿನ ವ್ಯವಸ್ಥೆ ಇಲ್ಲದಿರುವುದು ಒಂದು ಕಡೆಯಾದರೆ ನಗರದ ಪ್ರಮುಖ ರಸ್ತೆಯಲ್ಲಿಯೇ ಬಸ್‌ ನಿಲ್ಲಿಸುವುದರಿಂದ ಪ್ರಯಾಣಿಕರು ರಸ್ತೆಯಲ್ಲಿಯೇ ನಿಂತು ಕಾಯಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಮಹಿಳೆಯರು, ಮಕ್ಕಳು, ಶಾಲಾ ವಿದ್ಯಾರ್ಥಿಗಳು, ವೃದ್ಧರು ದಿನನಿತ್ಯ ಸಮಸ್ಯೆ ಅನುಭವಿಸುತ್ತಿದ್ದಾರೆ. ತಂಗುದಾಣ ಇಲ್ಲದಿರುವುದರಿಂದ ಪ್ರಯಾಣಿಕರು ಬಿಸಿಲಲ್ಲಿ ಬಸ್‌ಗಳಿಗೆ ಕಾಯಬೇಕಾದ ಸ್ಥಿತಿ ಇದೆ. ಮರಗಳ ನೆರಳಿನಲ್ಲಿ ಆಸರೆ ಪಡೆಯುತ್ತಿದ್ದಾರೆ. ಇನ್ನು ಕೆಲವರು ಕಟ್ಟಡಗಳ ನೆರಳು, ಛತ್ರಿಗಳ ಮೊರೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಗೆ 2 ಗಂಟೆಗಳಿಗೊಮ್ಮೆ ಬಸ್‌ಗಳಿರುತ್ತವೆ.

ಒಂದು ಬಸ್‌ ತಪ್ಪಿದರೆ ಮತ್ತೂಂದು ಬಸ್‌ ಗಾಗಿ 2 ಗಂಟೆ ಕಾಯಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಪ್ರಯಾಣಿಕರು ಬಿಸಿಲಿನಲ್ಲೇ ಕಾಲ ಕಳೆಯಬೇಕಾಗಿದೆ. 2.50 ಕೋಟಿ ರೂ. ವೆಚ್ಚದಲ್ಲಿ ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್‌ನಿಲ್ದಾಣದ ಕಾಮಗಾರಿಗೆ ಅಂದಿನ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಮಾ. 13, 2018ರಂದು ಭೂಮಿಪೂಜೆ ನೆರವೇರಿಸಿ 2 ವರ್ಷ ಮುಗಿಯುತ್ತ ಬಂದಿದ್ದರೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ಬಸ್‌ನಿಲ್ದಾಣದಲ್ಲಿ ನಿಲ್ಲಬೇಕಾದ ಎಲ್ಲ ಬಸ್‌ಗಳು ಮುಖ್ಯರಸ್ತೆಯಲ್ಲಿಯೇ ನಿಂತು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತವೆ.

ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ಕುಡಿಯುವ ನೀರಿನ ಯಾವುದೇ ವ್ಯವಸ್ಥೆ ಇಲ್ಲದೆ ಇರುವುದರಿಂದ ಪ್ರಯಾಣಿಕರು ರಸ್ತೆಯಲ್ಲಿಯೇ ನಿಲ್ಲಬೇಕಾಗಿದೆ. ಕುಡಿಯುವ ನೀರಿಗಾಗಿ ಬಸ್‌ ನಿಲ್ದಾಣದ ಸುತ್ತಮುತ್ತಲಿನ ಹೋಟೆಲ್‌ಗ‌ಳೇ ಆಸರೆಯಾಗಿವೆ.

ಅಲ್ಲದೆ ಹಳ್ಳಿಗಳಿಗೆ ಹೋಗುವ ಬಸ್‌ ಗಳು ಯಾವುವು, ನಗರದ ಕಡೆಗೆ ಹೋಗುವ ಬಸ್‌ಗಳು ಯಾವುವು ಎಂದು ತಿಳಿಯದೇ ಅನೇಕರು ದಿನನಿತ್ಯವೂ ಪರದಾಡುವುದು ಸಾಮಾನ್ಯವಾಗಿದೆ. ಹೈದ್ರಾಬಾದ್‌ ಕರ್ನಾಟಕದ ಜಿಲ್ಲೆಗಳಿಂದ ಬೆಂಗಳೂರಿಗೆ ತೆರಳುವ ಎಲ್ಲ ಬಸ್‌ಗಳು ಸಿರುಗುಪ್ಪ ಮಾರ್ಗವಾಗಿಯೇ ಸಂಚರಿಸುವುದರಿಂದ ಪ್ರತಿನಿತ್ಯವೂ ಬಸ್‌ ನಿಲ್ದಾಣದ ಮುಂದಿನ ರಸ್ತೆಯಲ್ಲಿಯೇ ಜನಜಂಗುಳಿ ಇರುತ್ತಿದ್ದು, ಅನಾಹುತಗಳಾಗುವ ಸಾಧ್ಯತೆಗಳನ್ನೂಅಲ್ಲಗಳೆಯುವಂತಿಲ್ಲ.

Advertisement

ಬಸ್‌ನಿಲ್ದಾಣದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಸಾರ್ವಜನಿಕರು ಪ್ರತಿನಿತ್ಯವೂ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಇನ್ನಾದರೂ ಸಂಬಂಧಿ ಸಿದ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಸ್‌ನಿಲ್ದಾಣದ ಕಾಮಗಾರಿ ಶೀಘ್ರವಾಗಿ ಮುಗಿಸಲು ಕ್ರಮ ಕೈಗೊಳ್ಳಬೇಕು.
ಎಲ್‌.ಎಂ. ಶಿವಕುಮಾರ್‌,
ಪ್ರಯಾಣಿಕ

ಬಸ್‌ ನಿಲ್ದಾಣದ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ಪ್ರಯಾಣಿಕರು ಪ್ರತಿನಿತ್ಯವೂ ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಶೀಘ್ರವಾಗಿ ಬಸ್‌ನಿಲ್ದಾಣದ ಕಾಮ ಗಾರಿಯನ್ನು ಮುಗಿಸಿಕೊಡಲು ಕ್ರಮ ಕೈಗೊಳ್ಳಬೇಕೆಂದು ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ಕೆ.ಎಂ. ತಿರುಮಲೇಶ,
ಸಿರುಗುಪ್ಪ ಸಾರಿಗೆ ಘಟಕದ ವ್ಯವಸ್ಥಾಪಕ

„ಆರ್‌. ಬಸವರೆಡ್ಡಿ ಕರೂರು

Advertisement

Udayavani is now on Telegram. Click here to join our channel and stay updated with the latest news.

Next