ಸಿರುಗುಪ್ಪ: ಅಧಿಕಾರಿಗಳು ನರೇಗಾ ಯೋಜನೆ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ರೈತರಿಗೆ ಅವಶ್ಯವಿರುವ ಬದು ನಿರ್ಮಾಣ, ಕೃಷಿಹೊಂಡ, ತೋಟಗಾರಿಕೆ ಮುಂತಾದ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ಪ್ರರೇಪಿಸಬೇಕೆಂದು ಶಾಸಕ ಎಂ.ಎಸ್. ಸೋಮಲಿಂಗಪ್ಪ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕೃಷಿ ಹೊಂಡ ಹೊಂದಿದ ರೈತರು ತೋಟಗಾರಿಕೆ ಬೆಳೆಗಳಾದ ಅಂಜೂರ, ಪಪ್ಪಾಯಿ, ದಾಳಿಂಬೆ ಮುಂತಾದ ಬೆಳೆಗಳನ್ನು ಅಧಿಕವಾಗಿ ಬೆಳೆಯಲು ತೋಟಗಾರಿಕೆ ಅಧಿಕಾರಿಗಳು ಮಾರ್ಗದರ್ಶನ ನೀಡಬೇಕೆಂದು ತೋಟಗಾರಿಕೆ ಅಧಿಕಾರಿ ವಿಶ್ವನಾಥರಿಗೆ ತಿಳಿಸಿದರು.
2019-20 ನೇ ಸಾಲಿನಲ್ಲಿ 120 ಹೆಕ್ಟೇರ್ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವಿವಿಧ ತರದ ಹಣ್ಣುಗಳನ್ನು ಬೆಳೆಯಲು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದು, 2020-21ನೇ ಸಾಲಿನಲ್ಲಿ ಅಂದಾಜು 150 ಹೆಕ್ಟೇರ್ ಪ್ರದೇಶದಲ್ಲಿ ಹಣ್ಣಿನ ಬೆಳೆಯನ್ನು ಬೆಳೆಯಲು ರೈತರನ್ನು ಪ್ರರೇಪಿಸಲಾಗಿದೆ. ಅಂಜೂರ, ಪಪ್ಪಾಯ, ದಾಳಿಂಬೆ ಮುಂತಾದ ಹಣ್ಣಿನ ಬೆಳೆಗಳಿಗೆ ಶೇ. 90ರಷ್ಟು ಪ್ರೋತ್ಸಾಹ ದನವನ್ನು ನೀಡಲಾಗುತ್ತಿದೆ. ನಮ್ಮ ತೋಟಗಾರಿಕೆ ಇಲಾಖೆಯಿಂದಲೂ, ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೃಷಿಹೊಂಡ, ಗಿಡನೆಡುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕೋವಿಡ್-19ಗೆ ಸಂಬಂಧಿಸಿದಂತೆ ವಿವಿಧ ಭಾಗಗಳಿಂದ ತಾಲೂಕಿಗೆ ಬಂದಿದ್ದ 1120 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ 777ಜನರ ಆರೋಗ್ಯ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದ್ದರಿಂದ ಅವರ ಮನೆಗಳಿಗೆ ಕಳುಹಿಸಲಾಗಿದೆ. ಇನ್ನುಳಿದ 343 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನಮ್ಮ ಕಂದಾಯ, ಆರೋಗ್ಯ, ಆಶಾ, ಅಂಗನವಾಡಿ ಕಾರ್ಯಕರ್ತರು ಹೊರಗಿನಿಂದ ಬಂದವರ ಮಾಹಿತಿಯನ್ನು ಕಲೆಹಾಕುವ ಕಾರ್ಯಮಾಡುತ್ತಿದ್ದಾರೆ ಎಂದು ಟಿ.ಎಚ್.ಒ. ಸುರೇಶಗೌಡ ತಿಳಿಸಿದರು.
ತಾಪಂ ಸದಸ್ಯ ಪಿಡ್ಡಯ್ಯ, ತಾಪಂ ಅಧ್ಯಕ್ಷೆ ದೇವಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕ್ರಪ್ಪ, ತಾಪಂ ಇ.ಒ. ಶಿವಪ್ಪ ಸುಬೇದಾರ್, ಜಿಪಂ ಸದಸ್ಯ ಕೋಟೇಶ್ವರರೆಡ್ಡಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ತಾಪಂ ಸದಸ್ಯರು, ಗ್ರಾಪಂ ಪಿಡಿಒಗಳು ಇದ್ದರು.