ಸಿರುಗುಪ್ಪ: ಇಲ್ಲಿನ ನಗರಸಭೆಗೆ ಚುನಾವಣೆ ನಡೆಯುತ್ತಿದ್ದು, 5 ವರ್ಷ ಆಡಳಿತ ನಡೆಸಿದ ಜನಪ್ರತಿನಿಧಿಗಳು ಮತ್ತೊಮ್ಮೆ ಮತದಾರರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಆದರೆ ನಗರದಲ್ಲಿ ಹಲವು ಸಮಸ್ಯೆಗಳು ಇನ್ನೂ ಜೀವಂತವಾಗಿದ್ದು, ಸದಸ್ಯರು ಇವನ್ನೆಲ್ಲ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಜನರ ಮಾತು.
ಸಮಸ್ಯೆಗಳು: ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರು, ಘನತ್ಯಾಜ್ಯ ನಿರ್ವಹಣೆಯಲ್ಲಿ ಲೋಪ, ಒಳಚರಂಡಿ ಮತ್ತು ಸಾರ್ವಜನಿಕ ಶೌಚಾಲಯ ಸಮಸ್ಯೆ, ಬಡವರಿಗೆ ನಿವೇಶನ ಹಂಚಿಕೆ, ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುವವರಿಗೆ ಸಿಗದ ಹಕ್ಕುಪತ್ರ, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು. ನಗರ ಹೊರ ವಲಯದಲ್ಲಿರುವ ಕೆಲವು ವಾರ್ಡ್‌ಗಳಿಗೆ ಸೂಕ್ತ ರಸ್ತೆ ಇಲ್ಲದಿರುವುದು ಹೀಗೆ ಅನೇಕ ಸಮಸ್ಯೆಗಳು ಇನ್ನೂ ಹಾಗೇ ಉಳಿದಿವೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎನ್ನುವ ಭರವಸೆ ನೀಡಿದ್ದ ಜನಪ್ರತಿನಿಧಿಗಳು ನಂತರ ಇವನ್ನೆಲ್ಲ ಮರೆತು ಈಗ ಮತ್ತೂಮ್ಮೆ ಅವಕಾಶ ಕೊಡಿ ಎನ್ನುತ್ತ ಮತದಾರನ ಮನೆ ಬಾಗಿಲಿಗೆ ಬರುತ್ತಿದ್ದಾರೆ.
ನನೆಗುದಿಗೆ ಬಿದ್ದಿರುವ ಯೋಜನೆಗಳು: ಸುಮಾರು 28 ಕೋಟಿ ರೂ. ವೆಚ್ಚದಲ್ಲಿ ನಗರಕ್ಕೆ ಸಮರ್ಪಕ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಮುರೂವರೆ ವರ್ಷದ ಹಿಂದೆ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಕೆರೆ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ನಡೆಯುತ್ತಿರುವುದರಿಂದ ನಗರ ನಿವಾಸಿಗಳು ಪ್ರತಿವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಸಾಮಾನ್ಯವಾಗಿದೆ.
ಮೂಲಸೌಲಭ್ಯಗಳ ಕೊರತೆ: ಕೃಷಿ ಮತ್ತು ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುತ್ತಿರುವ ಯಲ್ಲಾಲಿಂಗಾನಗರ, ರಾಜೀವ್‌ಗಾಂಧಿ ನಗರ, ಕೆಂಚನಗುಡ್ಡ ರಸ್ತೆ, ವಿಜಯನಗರ ಬಡಾವಣೆ, ಕುವೆಂಪು ನಗರ, ಕೊರ್ರಮನ ಹಳ್ಳದ ಪ್ರದೇಶ, ಆಶ್ರಯ ಕಾಲೋನಿ, ಡ್ರೈವರ್ ಕಾಲೋನಿ, ಸೋನಿಯಾಗಾಂಧಿ ನಗರಕ್ಕೆ ಮೂಲ ಸೌಲಭ್ಯಗಳು ಇನ್ನೂ ಮರೀಚಿಕೆಯಾಗಿದೆ.
ಇದ್ಧೂ ಇಲ್ಲದಂತಿರುವ ನೀರಿನ ಘಟಕಗಳು: ನಗರದಲ್ಲಿ ಒಟ್ಟು 16 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 9 ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದವು ನೀರಿನ ಕೊರತೆಯಿಂದ ಸ್ಥಗಿತಗೊಂಡಿವೆ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರನ್ನು ಎರಡು ಬಾರಿ ಶುದ್ಧೀಕರಿಸದೆ ಇರುವುದರಿಂದ ಹೆಚ್ಚಾಗಿ ಸಾರ್ವಜನಿಕರು ಖಾಸಗಿ ನೀರಿನ ಘಟಕಗಳಲ್ಲಿನ ನೀರನ್ನೇ ಕುಡಿಯಲು ಉಪಯೋಗಿಸುತ್ತಿದ್ದು, ಇಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದೂ ಇಲ್ಲದಂತಿವೆ.
ಇಷ್ಟೆಲ್ಲಾ ಸಮಸ್ಯೆಗಳು ನಗರದಲ್ಲಿದ್ದರೂ ನಗರಸಭೆಗೆ ಚುನಾಯಿತರಾಗಿ ಹೋಗಿ ಐದು ವರ್ಷ ಆಡಳಿತ ನಡೆಸಿದ ಜನಪ್ರತಿನಿಧಿಗಳು ಯಾವೊಂದು ಸಮಸ್ಯೆಯನ್ನೂ ಬಗೆಹರಿಸಲು ಪ್ರಯತ್ನಿಸಿಲ್ಲ. ಇದರಿಂದಾಗಿ ಸಮಸ್ಯೆಗಳು ಹಾಗೇ ಉಳಿದಿದ್ದು, ಮತ್ತೂಮ್ಮೆ ಜನಪ್ರತಿನಿ ಗಳು ಮತದಾರರ ಮನೆ ಬಾಗಿಲಿಗೆ ಓಟು ಕೇಳಲು ಬರುತ್ತಿದ್ದಾರೆ.