ಸಿರುಗುಪ್ಪ: ತಾಲೂಕಿನಲ್ಲಿ ಹರಿಯುತ್ತಿರುವ ವೇದಾವತಿ ಹಗರಿ ನದಿ ನೀರನ್ನು ಅಲ್ಲಲ್ಲಿ ತಡೆ ಹಿಡಿದು 30 ಸಾವಿರಕ್ಕೂ ಅಧಿಕ ಎಕರೆ ಜಮೀನು ಬೇಸಾಯಕ್ಕೆ ಅನುಕೂಲ ಮಾಡಿಕೊಡಲು ಹಗರಿ ನದಿಗೆ ಸಬ್ ಸರ್ಫೇಸ್ ಚೆಕ್ ಡ್ಯಾಂ ನಿರ್ಮಿಸಲು ತಾಲೂಕಿನಲ್ಲಿ ಹರಿಯುವ ವೇದಾವತಿ ಹಗರಿ ನದಿಯಲ್ಲಿ ಕುರುವಳ್ಳಿ, ಬಗ್ಗೂರು, ಬಲಕುಂದಿ, ಉತ್ತನೂರು ಮತ್ತು ಬಳ್ಳಾರಿ ತಾಲೂಕಿನ ಹಡ್ಲಿಗಿ ಹತ್ತಿರ ಅಂತರ್ಜಲ ಆಣೆಕಟ್ಟು ನಿರ್ಮಾಣಕ್ಕೆ ಸ್ಥಳ ಗುರುತಿಸಿದೆ.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ (ಪ್ರೊ. ನಂಜುಂಡಸ್ವಾಮಿ ಬಣ)ಯ ಪದಾಧಿಕಾರಿಗಳು ಮತ್ತು ಜಲತಜ್ಞ ವೆಂಕಟರೆಡ್ಡಿ, ಗಾಂಧಿವಾದಿ ವಿಠಲ ಮತ್ತವರ ತಂಡ ಸ್ಥಳದಲ್ಲಿ ಹಾಜರಾಗಿತ್ತು.
ಬರೀ ಮರಳು ಕಂಡುಬರುವ ತಾಲೂಕಿನ ಪೂರ್ವ ಗಡಿ ಪ್ರದೇಶದಲ್ಲಿ ಭೂಮಿಯ ಮೇಲ್ಮಟ್ಟಕ್ಕಿಂತ 20ಅಡಿ ಆಳದಲ್ಲಿ ಮರಳಿನ ರಾಶಿಯ ಹಗರಿ ನದಿ ಹರಿಯುತ್ತಿದೆ. ಈ ಮರಳಿನ ರಾಶಿಯ ಅಡಿಯಲ್ಲಿ ಗಟ್ಟಿ ಪದರ ಬರುವವರೆಗೆ ಅಂತರ್ಜಲ ಕಿರು ಆಣೆಕಟ್ಟು ಅಥವಾ ಸಬ್ ಸರ್ಫೇಸ್ ಚೆಕ್ ಡ್ಯಾಂ ನಿರ್ಮಿಸಿ ಇಲ್ಲಿ ನೀರನ್ನು ತಡೆದು ಅಲ್ಲಿಂದ ಏತ ನೀರಾವರಿ ಮೂಲಕ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರೈತರ ಸಂಘದ ಪದಾಧಿಕಾರಿಗಳು ಮತ್ತು ನಿವೃತ್ತ ಇಂಜಿನಿಯರ್‌ಗಳ ತಂಡ ಯೋಜನೆ ರೂಪಿಸಿದೆ.
ಒಂದು ಕಿರು ಅಂತರ್ಜಲ ಆಣೆಕಟ್ಟು ನಿರ್ಮಿಸಲು ಅಂದಾಜು 8 ರಿಂದ 10ಕೋಟಿ ರೂ. ವೆಚ್ಚವಾಗಬಹುದು. ಪ್ರತಿ 2 ರಿಂದ 5 ಕಿ.ಮೀ ದೂರಕ್ಕೆ ಒಂದರಂತೆ ಕಿರು ಅಂತರ್ಜಲ ಆಣೆಕಟ್ಟಿನ ನಿರ್ಮಾಣವಾದರೆ ನದಿಯ 2 ಭಾಗದಲ್ಲಿರುವ ರೈತರಿಗೆ ಕೃಷಿಗೆ ಬೇಕಾದ ನೀರು ದೊರೆಯಲು ಸಾಧ್ಯ. ಯೋಜನೆಗೆ 50ಕೋಟಿ ರೂ. ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ. ತಾಲೂಕಿನ ಕರೂರು ಹೋಬಳಿಯ ತಾಳೂರು, ಊಳೂರು, ಉತ್ತನೂರು, ಕರೂರು, ಮಾಟಸೂಗೂರು, ಬೂದುಗುಪ್ಪ, ಮೈಲಾಪುರ, ಬಲಕುಂದಿ, ಕೆ.ಬೆಳಗಲ್, ಮುದೇನೂರು, ಕೆ.ಸೂಗೂರು, ಅರಳಿಗನೂರು, ಬಗ್ಗೂರು, ರಾರಾವಿ ಚಾಣಕನೂರು, ಕುರುವಳ್ಳಿ, ನಾಗಲಾಪುರ, ಕುಡುದರಹಾಳು, ಶ್ರೀಧರಗಡ್ಡೆ ಮುಂತಾದ ಗ್ರಾಮಗಳ ಸುಮಾರು 70ಸಾವಿರಕ್ಕೂ ಹೆಚ್ಚು ಜಮೀನಿಗೆ ಈ ಕಿರು ಆಣೆಕಟ್ಟು ನಿರ್ಮಿಸಿದರೆ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಇದರಿಂದ ಸುಮಾರು 5 ರಿಂದ 6 ಟಿ.ಎಂ.ಸಿ ನೀರು ಸಂಗ್ರಹವಾಗುತ್ತದೆ.
ತುಂಗಭದ್ರಾ ಕಾಲುವೆಯಲ್ಲಿ ನೀರು ಹರಿಯುವುದು ಪ್ರಾರಂಭವಾದ ನಂತರ ಕೃಷಿಗೆ ಹಗರಿ ನದಿಯ ನೀರು ಬಳಕೆ ಕಡಿಮೆಯಾಗಿ ಅಕ್ರಮ ಮರಳು ಗಣಿಗಾರಿಕೆ ಪ್ರಾರಂಭವಾಯಿತು. ಇಲ್ಲಿ ಮತ್ತೆ ಕೃಷಿಗೆ ಹಗರಿ ನದಿ ನೀರನ್ನು ಬಳಸಲು ಆರಂಭವಾದರೆ ಅಕ್ರಮ ಮರಳು ಗಣಿಗಾರಿಕೆ ಸ್ಥಗಿತಗೊಳ್ಳಲಿದೆ ಎನ್ನುವುದು ರೈತರ ಅಭಿಪ್ರಾಯವಾಗಿದೆ.
ತಾಲೂಕಿನ ವೇದಾವತಿ ಹಗರಿ ನದಿ ದಂಡೆಯಲ್ಲಿರುವ ರೈತರ ಒಣ ಬೇಸಾಯಕ್ಕೆ ಶಾಶ್ವತ ಪರಿಹಾರ ದೊರೆಯಬೇಕಾದರೆ ಹಗರಿ ನದಿಯ ನೀರಿನ ಸದ್ಬಳಕೆಗೆ ಯೋಜಿಸಲಾಗುತ್ತಿರುವ ಸಬ್ ಸರ್ಫೇಸ್ ಚೆಕ್ ಡ್ಯಾಂ ನಿರ್ಮಿಸಲು ರಾಜ್ಯ ಸರ್ಕಾರ ಹಣಕಾಸಿನ ನೆರವು ನೀಡಬೇಕು ಎಂದು ರೈತ ಹೋರಾಟಗಾರ ಚಾಗನೂರು ಮಲ್ಲಿಕಾರ್ಜುನರೆಡ್ಡಿ ತಿಳಿಸಿದ್ದಾರೆ.
ತಾಲೂಕಿನ ನಾಲ್ಕು ಕಡೆ ಬಳ್ಳಾರಿ ತಾಲೂಕಿನ ಒಂದು ಕಡೆ ಸಬ್ ಸರ್ಫೇಸ್ ಚೆಕ್ ಡ್ಯಾಂ ನಿರ್ಮಿಸಲು ಸ್ಥಳ ಗುರುತಿಸಲಾಗಿದ್ದು, ಸರ್ಕಾರ ಈ ಯೋಜನೆಗೆ ಬೇಕಾದ ಅಂದಾಜು 50ಕೋಟಿ ರೂ.ಗಳ ಅನುದಾನವನ್ನು ನೀಡಿದರೆ ರೈತರಿಗೆ ನಿರಂತರವಾಗಿ ಬೆಳೆ ತೆಗೆಯಲು ಬೇಕಾದ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದು ರಾಜ್ಯ ರೈತರ ಸಂಘ ಮತ್ತು ಹಸಿರುಸೇನೆ (ಪ್ರೊ.ನಂಜುಂಡಸ್ವಾಮಿ ಬಣ)ಯ ರಾಜ್ಯ ಕಾರ್ಯಾಧ್ಯಕ್ಷ ಆರ್.ಮಾಧವರೆಡ್ಡಿ ತಿಳಿಸಿದ್ದಾರೆ.