Advertisement

ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನಾ ಸಭೆಗೆ ಬನ್ನಿ

03:36 PM Jun 30, 2019 | Team Udayavani |

ಸಿರುಗುಪ್ಪ: ಸಂವಿಧಾನವು ದೇಶದ ಎಲ್ಲ ನಾಗರಿಕರಿಗೂ ಸಮಾನ ಹಕ್ಕುಗಳನ್ನು ನೀಡಿದ್ದು, ಅವುಗಳನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಹಕ್ಕಾಗಿದ್ದು, ಈ ಸಭೆಗೆ ತಮ್ಮ ಸಮಸ್ಯೆಗಳನ್ನು ತಿಳಿಸಲು ಸರ್ಕಾರ ಅನುಕೂಲ ಮಾಡಿಕೊಟ್ಟಿದ್ದು, ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಶಾಸಕ ಎಂ.ಎಸ್‌.ಸೋಮಲಿಂಗಪ್ಪ ತಿಳಿಸಿದರು.

Advertisement

ನಗರದ ಕೃಷಿ ಇಲಾಖೆ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ನಡೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ, ತಮ್ಮ ಸಮಸ್ಯೆಗಳಿಗೆ ತಾಲೂಕು ಆಡಳಿತದ ಮೊರೆ ಹೋಗುವ ಜನರು ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದೇ ಇದ್ದಾಗ ಅಲೆದು ಅಲೆದು ಸುಸ್ತಾಗಿ ತಮ್ಮ ಸಮಸ್ಯೆಗಳು ಬಗೆಹರಿಯುವ ಭರವಸೆಯನ್ನೇ ಕಳೆದುಕೊಳ್ಳುತ್ತಿದ್ದಾರೆ.

ತಾಲೂಕು ಮಟ್ಟದ ಅಧಿಕಾರಿಗಳ ಬಳಿ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಹೇಳಿಕೊಂಡು ಅಲ್ಲಿಯೇ ಪರಿಹಾರ ಕಂಡುಕೊಳ್ಳುವ ಸದುದ್ದೇಶದಿಂದ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದರೆ ಪ್ರಚಾರದ ಕೊರತೆಯಿಂದಾಗಿ ವಿವಿಧ ಇಲಾಖೆಗಳಿಗೆ ಕೇವಲ 23 ಅರ್ಜಿಗಳು ಬಂದಿದ್ದು, ಇನ್ನು ಮುಂದೆ ಈ ಕಾರ್ಯಕ್ರಮದ ಬಗ್ಗೆ ಪ್ರತಿಯೊಂದು ಇಲಾಖೆಯು ಹೆಚ್ಚಿನ ಪ್ರಚಾರ ನೀಡಬೇಕು. ಇದಕ್ಕಾಗಿ ಪ್ರತಿ ಇಲಾಖೆಯಲ್ಲಿ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಇರುವ 10ಸಾವಿರ ಕರಪತ್ರಗಳನ್ನು ಪ್ರತಿ ಹಳ್ಳಿಗಳಿಗೆ ಹಂಚುವ ವ್ಯವಸ್ಥೆ ಮಾಡಬೇಕು. ಇದರಿಂದ ಸಾರ್ವಜನಿಕರಿಗೆ ಇಲಾಖೆಗಳಲ್ಲಿರುವ ಸೌಲಭ್ಯಗಳ ಮಾಹಿತಿಯ ಜತೆಗೆ ಯೋಜನೆಯ ಪ್ರಯೋಜನ ಪಡೆಯಲು ಅನುಕೂಲವಾಗಲಿದೆ ಎಂದರು.

ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಕರ್ತವ್ಯದ ಒತ್ತಡದ ನಡುವೆಯೂ ಜನರ ಸಮಸ್ಯೆಗಳಿಗಾಗಿ ದಿನದ ಕಚೇರಿಯ ಅವಧಿಯಲ್ಲಿ ಒಂದು ಗಂಟೆ ಮೀಸಲಿಟ್ಟು ಅವರ ಸಮಸ್ಯೆ ಆಲಿಸಿ, ಸ್ಪಂದಿಸಬೇಕು. ಮುಂದಿನ ಜನಸ್ಪಂದನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳನ್ನು ಆಹ್ವಾನಿಸಿ ತಾಲೂಕಿನ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು.

11ನೇ ವಾರ್ಡ್‌ನ ರಾಜೀವ್‌ಗಾಂಧಿ ನಗರದಲ್ಲಿ ನಿರ್ಮಿಸಿರುವ ಅಂಗವಿಕಲರ ಹಾಗೂ ಬುದ್ಧಿಮಾಂದ್ಯರ ಸಮುದಾಯ ಭವನವನ್ನು ಅಂಗವಿಕಲರ ಬಳಕೆಗೆ ಮುಕ್ತಗೊಳಿಸುವಂತೆ ವಿಕಲಚೇತನ ದೇವರಾಜ್‌ ಕೋರಿದರು.

Advertisement

ಭೈರಾಪುರ ಗ್ರಾಮದ ರಂಗಮ್ಮ ಹಾಗೂ ಹನುಮೇಶ ವಸತಿ ಕಲ್ಪಿಸುವಂತೆ ಮನವಿ ಸಲ್ಲಿಸಿದರು. ಆಟೋ ಚಾಲಕರು ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಶಾಲಾ ಮಕ್ಕಳನ್ನು ಆಟೋಗಳಲ್ಲಿ ಕರೆದೊಯ್ಯಲು ಅವಕಾಶ ನೀಡುವಂತೆ ಮನವಿ ಮಾಡಿದರು.

ತಾಲೂಕಿನ ಮುದೇನೂರು ಗ್ರಾಮದ ನೆರೆಹಾವಳಿಗೆ ಮನೆ ಕಳೆದುಕೊಂಡವರಿಗೆ ಮನೆಗಳನ್ನು ನೀಡಬೇಕು. ಹಕ್ಕುಪತ್ರ ವಿತರಿಸುವಂತೆ ಗ್ರಾಮದ ಎಸ್‌.ವೀರೇಶ ಮತ್ತು ಇತರರು ಮನವಿ ಸಲ್ಲಿಸಿದರು.

ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಮನವಿ ಸಲ್ಲಿಸಿದ ಸಾರ್ವಜನಿಕರಿಗೆ ಶಾಸಕರು ಭರವಸೆ ನೀಡಿದರು.

ತಹಶೀಲ್ದಾರ್‌ ದಯಾನಂದ್‌ ಪಾಟೀಲ್ ಮಾತನಾಡಿ, ಜನಸ್ಪಂದನಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಗೆ-8, ತಾಪಂ-6, ನಗರಸಭೆಗೆ-3, ಹಿಂದುಳಿದ ವರ್ಗಕ್ಕೆ-1, ಶಿಕ್ಷಣ ಇಲಾಖೆ-1, ಪೊಲೀಸ್‌ ಇಲಾಖೆಗೆ-1, ಜೆಸ್ಕಾಂ ಇಲಾಖೆಗೆ-3 ಒಟ್ಟು 23 ಅರ್ಜಿಗಳು ಸಲ್ಲಿಕೆಯಾದವು.

ತಾಪಂ ಇಒ ಶಿವಪ್ಪ ಸುಬೇದಾರ್‌, ನಗರಸಭೆ ಪೌರಾಯುಕ್ತ ಪ್ರೇಮ್‌ಚಾಲ್ಸ್ರ್, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಜನರಿಂದ ಅಹವಾಲು ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next