ಸಿರುಗುಪ್ಪ: ನಗರದ ಬಳ್ಳಾರಿ ರಸ್ತೆಯ ಹೊರವಲಯದಲ್ಲಿರುವ ಸರ್ಕಾರಿ ಅತಿಥಿ ಗೃಹವನ್ನು ಲೋಕೋಪಯೋಗಿ ಅನುದಾನದಲ್ಲಿ ಕಟ್ಟಿ ನಾಲ್ಕು ವರ್ಷ ಕಳೆದರೂ ಈ ಅತಿಥಿ ಗೃಹ ಉದ್ಘಾಟನೆಯಾಗದೇ ಇರುವುದರಿಂದ ಇದು ಈಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.
2019-20ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಅನುದಾನ ರೂ.1 ಕೋಟಿ 50ಲಕ್ಷ ವೆಚ್ಚದಲ್ಲಿ ಸರ್ಕಾರಿ ಅತಿಥಿ ಗೃಹವನ್ನು ಕಟ್ಟಲಾಗಿದ್ದು, ಇಲ್ಲಿಯವರೆಗೆ ಉದ್ಘಾಟನೆಯಾಗದೇ ಇದ್ದರೂ ಸಂಜೆಯಾಗುತ್ತಲೇ ಈ ಅತಿಥಿ ಗೃಹದ ವರಾಂಡದಲ್ಲಿ ಕುಳಿತು ಕುಡುಕರು ಕುಡಿದು, ತಿಂದು ಮಾಂಸದ ಮೂಳೆಗಳು, ಮದ್ಯದ ಬಾಟಲ್‌ಗಳನ್ನು ಬೀಸಾಡಿ ಹೋಗುತ್ತಾರೆ. ರಾತ್ರಿ 10 ಗಂಟೆಯ ನಂತರ ಇದೇ ಸ್ಥಳದಲ್ಲಿ ವ್ಯಭಿಚಾರ ನಡೆಯುತ್ತಿದ್ದು, ಈ ಸ್ಥಳದಲ್ಲಿ ಕಾಂಡೋಮ್ ಗಳು ಸಹ ಬೀಳುತ್ತಿರುವುದು ಸಾಮಾನ್ಯವಾಗಿದೆ.
ನಗರದಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಕೋಣೆಗಳ ಸಂಖ್ಯೆ ಕಡಿಮೆ ಇದ್ದು, ವಿ.ವಿ.ಐ.ಪಿ. ವಿ.ಐ.ಪಿ. ಶಾಸಕರು, ಸಂಸದರು, ಉನ್ನತ ಅಧಿಕಾರಿಗಳು ನಗರಕ್ಕೆ ಬಂದಾಗ ಉಳಿದುಕೊಳ್ಳಲು ಉತ್ತಮವಾದ ಅತಿಥಿಗೃಹ ಇರಬೇಕು ಎನ್ನುವ ಉದ್ದೇಶದಿಂದ ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ನಗರದ ಹೊರವಲಯದಲ್ಲಿರುವ ಸರ್ಕಾರಿ ಜಾಗದಲ್ಲಿ ಅತಿಥಿಗೃಹ ನಿರ್ಮಿಸಲು ಅನುದಾನವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದರು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಟ್ಟಡ ಕಾಮಗಾರಿಯನ್ನು ಒಂದು ವರ್ಷದೊಳಗೆ ಮುಗಿಸಿದರೂ ಇಲ್ಲಿಯವರೆಗೆ ಉದ್ಘಾಟನೆಯ ಭಾಗ್ಯ ದೊರೆಯದೇ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿದೆ.
ಸರ್ಕಾರಿ ಅತಿಥಿ ಗೃಹದಲ್ಲಿ ಕನಿಷ್ಠ ಒಬ್ಬ ಜವಾನ ಕಾರ್ಯ ನಿರ್ವಹಿಸಬೇಕು, ಆದರೆ ಇಲ್ಲಿನ ಅತಿಥಿ ಗೃಹ ಉದ್ಘಾಟನೆಯಾಗಿಲ್ಲ ಎನ್ನುವ ಕಾರಣಕ್ಕೆ ಅಧಿಕಾರಿಗಳು ಯಾವುದೇ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ, ಅಲ್ಲದೆ ಅತಿಥಿ ಗೃಹದ ಸುತ್ತಲು ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡಿಲ್ಲ, ಇದರಿಂದಾಗಿ ಅನೈತಿಕ ಚಟುವಟಿಕೆ ಮಾಡುವವರಿಗೆ ಇದು ಹೇಳಿ ಮಾಡಿಸಿದ ತಾಣವಾಗಿದೆ.
ಉದ್ಘಾಟನೆಯಾಗುವ ಮುನ್ನವೆ ಕಟ್ಟಡದ ಕಿಟಕಿಗಳ ಗಾಜು ಒಡೆದು ಹಾಕಲಾಗಿದೆ, ನೀರು ಪೂರೈಕೆ ಮಾಡುವ ಪೈಪ್‌ಲೈನ್‌ಗಳು ಕಿತ್ತುಹೋಗಿವೆ, ನೀರು ಸಂಗ್ರಹದ ಸಿಂಟೆಕ್ಸ್ ಗಳು ನೆಲದಲ್ಲಿ ಬಿದ್ದಿವೆ, ನೆಲಕ್ಕೆ ಹಾಸಿದ ಟೈಲ್ಸ್ ಗಳು ಒಡೆದುಹೋಗಿವೆ. ಅಲ್ಲದೆ ಕಟ್ಟಡದ ನಡುವೆ ಇರುವ ಖಾಲಿ ಜಾಗದಲ್ಲಿ ಗಿಡಗಂಟೆಗಳು ಬೆಳೆದಿವೆ. ಇದರಿಂದಾಗಿ ಈ ಕಟ್ಟಡವು ಭೂತಬಂಗಲೆಯಂತೆ ಕಂಡುಬರುತ್ತಿದೆ. ಆದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಈ ಅತಿಥಿ ಗೃಹದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಿಲ್ಲ.
ನಗರದ ಹೊರವಲಯದಲ್ಲಿ 1 ಕೋಟಿ 50ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಅತಿಥಿ ಗೃಹ ಹಾಳುಬಿದ್ದಿದೆ, ಅಧಿಕಾರಿಗಳು ಇನ್ನಾದರು ಎಚ್ಚೆತ್ತುಕೊಂಡು ಈ ಅತಿಥಿ ಗೃಹವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡದಿದ್ದರೆ ಸಂಪೂರ್ಣವಾಗಿ ಕಟ್ಟಡ ತನ್ನ ಸೌಂದರ್ಯ ಕಳೆದುಕೊಂಡು ಹಾಳಾಗಲಿದೆ ಎಂದು ನಗರ ನಿವಾಸಿ ಹೆಚ್.ಎಸ್.ಶೇಕಣ್ಣ ತಿಳಿಸಿದ್ದಾರೆ.
ಕೆಲವು ಕಾರಣಗಳಿಂದ ಅತಿಥಿಗೃಹ ಉದ್ಘಾಟನೆಯಾಗಿಲ್ಲ, ಸಣ್ಣಪುಟ್ಟ ರಿಪೇರಿ ಕಾರ್ಯ ಮಾಡಬೇಕಾಗಿದೆ. ಈ ಬಗ್ಗೆ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ, ಪ್ರತಿರಾತ್ರಿ ಅತಿಥಿ ಗೃಹದ ಕಾವಲಿಗಾಗಿ ಒಬ್ಬ ಸಿಬ್ಬಂದಿಯನ್ನು ಬಿಡಲಾಗುವುದೆಂದು ಲೋಕೋಪಯೋಗಿ ಇಲಾಖೆಯ ಎ.ಇ.ಇ. ಚನ್ನಪ್ಪಗೌಡ ತಿಳಿಸಿದ್ದಾರೆ.