ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆ ಸಮೀಪದ ಬಂಗಾರರಾಜು ಕ್ಯಾಂಪ್‌ನ ಸುತ್ತಮುತ್ತಲಿನ ಜಮೀನುಗಳಲ್ಲಿ ರೈತರು ಬೆಳೆದಿರುವ ಕಡಲೆ ಬೆಳೆ ಕ್ಷೇತ್ರಕ್ಕೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜೈವಿಕ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳ ತಂಡ ಭೇಟಿನೀಡಿ ಕಡಲೆ ಬೆಳೆಯಲ್ಲಿ ಕಂಡುಬಂದಿರುವ ಗೊಣ್ಣೆ ಹುಳುವಿನ ನಿಯಂತ್ರಣದ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿ.ವಿ. ಜೈವಿಕ ವಿಭಾಗದ ಸಂಶೋಧನಾ ಕೇಂದ್ರದಲ್ಲಿ ಗೊಣ್ಣೆ ಹುಳುವಿನ ನಿಯಂತ್ರಣಕ್ಕೆ ಕಂಡು ಹಿಡಿದಿರುವ ಮೆಟರೈಝಿಯಂ ಅನಿಸೋಪ್ಲಿಯೆ ಜೈವಿಕ ಶಿಲೀಂಧ್ರ ಕೀಟನಾಶಕವನ್ನು ಕಡಲೆ ಬೆಳೆಗೆ ಸಿಂಪಡಿಸುವ ಮೂಲಕ ಗೊಣ್ಣೆ ಹುಳುವಿನ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಜೈವಿಕ ವಿಭಾಗದಲ್ಲಿ ಪರಿಸರಕ್ಕೆ ಹಾನಿ ಉಂಟು ಮಾಡದ ಹಾಗೂ ರೈತರೇ ಸ್ವಂತ ತಯಾರಿಸಿಕೊಳ್ಳುವ ಅತ್ಯಂತ ಕಡಿಮೆ ಬೆಲೆಯಲ್ಲಿ ಕೀಟಗಳನ್ನು ನಿಯಂತ್ರಿಸುವ ಜೈವಿಕ ಶಿಲೀಂಧ್ರ ಕೀಟನಾಶಕಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಪ್ರಾಯೋಗಿಕವಾಗಿ ನೀಡುತ್ತಿದೆ. ಸಂಶೋಧನಾ ವಿದ್ಯಾರ್ಥಿನಿ ಸೌಮ್ಯ ಮಾತನಾಡಿ, ಗೊಣ್ಣೆ ಹುಳುವಿನ ಮೇಲೆ ಮೆಟರೈಝಿಯಂ ಅನಿಸೋಪ್ಲಿಯೆ ಜೈವಿಕ ಶಿಲೀಂಧ್ರ ಕೀಟನಾಶಕವು ಅತ್ಯಂತ ಪರಿಣಾಮಕಾರಿಯಾಗಿ ಕೆಲಸಮಾಡುತ್ತಿದೆ. ಈ ಜೀವಾಣುಗಳ ಸಂಪರ್ಕಕ್ಕೆ ಬರುವ ಗೊಣ್ಣೆ ಹುಳುಗಳು ರೋಗಗಳಿಗೆ ತುತ್ತಾಗಿ ಸಾಯುತ್ತವೆ. ಈ ಜೀವಾಣುಗಳು ವಾತಾವರಣದಲ್ಲಿ ಬಿಡುಗಡೆಗೊಂಡು ನೈಸರ್ಗಿಕವಾಗಿ ಪುನರ್ ಉತ್ಪತ್ತಿ ಯಾಗುವುದರಿಂದ ಪದೇ ಪದೇ ಸಿಂಪರಣೆಯ ಅಗತ್ಯವಿಲ್ಲ.
ಗೊಣ್ಣೆ ಹುಳುಗಳು ಮಣ್ಣಿನಲ್ಲಿ ಅಡಗಿದ್ದು, ರಾತ್ರಿವೇಳೆ ಹೊರಬಂದು ಬೆಳೆಯ ಬೇರುಗಳನ್ನು ತಿಂದು ನಾಶಮಾಡುವುದರಿಂದ ಬೆಳೆಗೆ ಭೂಮಿಯಿಂದ ಬೇರುಗಳ ಮೂಲಕ ಪೋಷಕಾಂಶ ನೀರು ದೊರೆಯದೇ ಸಸ್ಯವೆಲ್ಲವು ಒಣಗಿ ಸುಟ್ಟಂತಾಗುತ್ತವೆ. ಒಂದು ಜಮೀನಿನಿಂದ ಇನ್ನೊಂದು ಜಮೀನಿಗೆ ಸಾಗುವುದರಿಂದ ಈ ಕೀಟವು ಹೆಚ್ಚಿನ ಪ್ರದೇಶದಲ್ಲಿ ಹಾನಿಯನ್ನುಂಟುಮಾಡುತ್ತವೆ. ರೈತರು ಗೊಣ್ಣೆಹುಳುವಿನ ನಿಯಂತ್ರಣಕ್ಕೆ 200ಲೀಟರ್ ನೀರಿಗೆ 2ಕೆಜಿ ಮೆಟರೈಝಿಯಂ ಅನಿಸೋಪ್ಲಿಯೆ ಜೈವಿಕ ಶಿಲೀಂಧ್ರ ಕೀಟನಾಶಕ, 2 ಕೆಜಿ ಕಡ್ಲೆಬೇಳೆ ಹಿಟ್ಟು, 2ಕೆಜಿ ಬೆಲ್ಲ ಬೆರಸಿ 8ದಿನಗಳ ಕಾಲ ಕೊಳೆಯಲು ಬಿಟ್ಟು ನಂತರ ಒಂದು ಲೀಟರ್‌ಗೆ
ಸಿದ್ಧಗೊಂಡ ದ್ರಾವಣವನ್ನು 2ಎಂಎಲ್‌ನಂತೆ ಬೆರೆಸಿ ಒಂದು ಎಕರೆಗೆ 400ಲೀಟರ್ ದ್ರಾವಣವನ್ನು ಗಿಡದ ಬೇರು ತೊಯ್ಯುವಂತೆ ಪಂಪಿನ ನಾಜಲನ್ನು ಪರಿವರ್ತಿಸಿಕೊಂಡು ಸಿಂಪರಣೆ ಮಾಡಬೇಕು.
ಗೊಣ್ಣೆಹುಳು ಮೇ, ಜೂನ್ ತಿಂಗಳಲ್ಲಿ ಮಳೆ ಬಂದಾಗ ತಂಪಾದ ವಾತಾವರಣದಲ್ಲಿ ಭೂಮಿಯಲ್ಲಿ 500ಕ್ಕೂ ಹೆಚ್ಚು ಮೊಟ್ಟೆಯಿಟ್ಟು, ಜುಲೈ ತಿಂಗಳಿಂದ ನವೆಂಬರ್‌ವರೆಗೆ ಮೊಟ್ಟೆಗಳಿಂದ ಹೊರಬರುವ ಮರಿಹುಳುಗಳು ಸಸ್ಯಗಳ ಬೇರುಗಳನ್ನು ತಿಂದು ಹಾನಿ ಉಂಟುಮಾಡುತ್ತವೆ. ಅಕ್ಟೋಬರ್‌ನಿಂದ, ಮೇವರೆಗೆ ಮಣ್ಣಿನಲ್ಲಿ ಕೋಶಾವಾಸ್ಥೆಯಲ್ಲಿ ನಿದ್ರಾಸ್ಥಿತಿಯಲ್ಲಿ ತೆರಳಿ ನಂತರ ದುಂಬಿಗಳಾಗಿ ಪರಿವರ್ತನೆಯಾಗಿ ಗಂಡು ಮತ್ತು ಹೆಣ್ಣು ದುಂಬಿಗಳು ಸಮ್ಮಿಲನಗೊಂಡು ಮೊಟ್ಟೆ ಇಡುತ್ತವೆ. ಆದ್ದರಿಂದ ರೈತರು ಮುಂಜಾಗ್ರತೆ ಕ್ರಮವಾಗಿ ಈ ಜೈವಿಕ ಶಿಲೀಂಧ್ರ ಕೀಟನಾಶಕ ಬಳಸಬೇಕೆಂದು ತಿಳಿಸಿದರು. ಕೃಷಿ ವಿಜ್ಞಾನಿ ಎಂ.ಎ. ಬಸವಣ್ಣೆಪ್ಪ, ಸಂಶೋಧನಾ ವಿದ್ಯಾರ್ಥಿಗಳು ಮತ್ತು ರೈತರು ಇದ್ದರು.