Advertisement

ಇಂದಿರಾ ಕ್ಯಾಂಟೀನ್‌ನಲ್ಲಿ ಅಶುದ್ಧ ನೀರೇ ಗತಿ!

02:54 PM May 02, 2019 | Team Udayavani |

ಸಿರುಗುಪ್ಪ: ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿನಿತ್ಯ ಉಪಾಹಾರ ಮತ್ತು ಊಟ ಮಾಡುವ ಗ್ರಾಹಕರಿಗೆ ಕಳೆದ ಒಂದು ತಿಂಗಳಿನಿಂದ ಅಶುದ್ಧ ನೀರು ಪೂರೈಸುತ್ತಿದ್ದು, ಇಲ್ಲಿ ಊಟ, ಉಪಾಹಾರ ಮಾಡುವ ಸಾರ್ವಜನಿಕರು ಶುದ್ಧ ಕುಡಿಯುವ ನೀರು ಸಿಗದೆ ಪರದಾಡುವಂತಾಗಿದೆ.

Advertisement

ಇಲ್ಲಿ ಊಟ, ಉಪಾಹಾರ ಮಾಡುವ ಜನರಿಗೆ ಪ್ರತಿನಿತ್ಯವೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂಬ ಉದ್ದೇಶದಿಂದ ಕ್ಯಾಂಟೀನ್‌ನಲ್ಲಿಯೇ ಶುದ್ಧ ಕುಡಿಯುವ ನೀರಿನ ಫಿಲ್ಟರ್‌ ಅಳವಡಿಸಿದೆ. ಆದರೆ ಅದು ದುರಸ್ತಿಗೆ ಬಂದು ತಿಂಗಳಾಗಿದ್ದರೂ ದುರಸ್ತಿಗೊಳಸದಿರುವುದರಿಂದ ಜನರಿಗೆ ಕ್ಯಾಂಟೀನ್‌ನಲ್ಲಿ ಜನ ಶುದ್ಧ ಕುಡಿಯುವ ನೀರು ಪೂರೈಸದೆ ಅಶುದ್ಧ ನೀರನ್ನೇ ಜನರಿಗೆ ಕೊಡುತ್ತಿದ್ದಾರೆ. ಪ್ರತಿನಿತ್ಯ ಕ್ಯಾಂಟೀನ್‌ಗೆ 1800 ಜನ ಬರುತ್ತಿದ್ದಾರೆ. ಇಷ್ಟು ಜನಕ್ಕೆ ಕುಡಿಯವ ನೀರು ಶುದ್ದವಾಗಿಲ್ಲದಿರುವುದು ಅನೇಕ ರೋಗಗಳು ಬರಲು ಕಾರಣವಾಗಲಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಜನರಿಗೆ ಶುದ್ಧ ಆಹಾರದೊಂದಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ಇಂದಿರಾ ಕ್ಯಾಂಟೀನ್‌ ನಡೆಸುವ ಗುತ್ತಿಗೆದಾರರಿಗೆ ಕಟ್ಟಿನಿಟ್ಟಿನ ಆದೇಶ ನೀಡಿದೆ. ಆದರೆ ಸರ್ಕಾರದ ಆದೇಶವನ್ನು ಗಾಳಿಗೆ ತೂರಿರುವ ಇಲ್ಲಿನ ಇಂದಿರಾ ಕ್ಯಾಂಟೀನ್‌ ಗುತ್ತಿಗೆದಾರರು ತಮಗೆ ಯಾರು ಹೇಳುವವರಿಲ್ಲ, ಕೇಳುವವರಿಲ್ಲ ಎನ್ನುವಂತೆ ಜನಕ್ಕೆ ಅಶುದ್ಧ ನೀರನ್ನೆ ಪೂರೈಸುತ್ತಿದ್ದಾರೆ. ಕ್ಯಾಂಟೀನ್‌ ಉಸ್ತುವಾರಿ ನೋಡಿಕೊಳ್ಳಬೇಕಾದ ನಗರಸಭೆ ಪೌರಾಯುಕ್ತರು ಕೂಡ ಇಂದಿರಾ ಕ್ಯಾಂಟೀನ್‌ ಕಡೆಗೆ ಬಂದು ಜನರಿಗೆ ಶುದ್ಧ ಆಹಾರ, ನೀರು ಕೊಡುತ್ತಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ಮಾಡದಿರುವುದರಿಂದ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿ ಆಡಿದ್ದೇ ಆಟ, ಮಾಡಿದ್ದ ಕೆಲಸ ಎನ್ನುವಂತಾಗಿದ್ದು, ಜನ ಅಶುದ್ಧ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ಒಂದು ತಿಂಗಳಿನಿಂದ ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿದ್ದು, ಅಶುದ್ಧ ನೀರನ್ನೇ ಇಲ್ಲಿನ ಸಿಬ್ಬಂದಿ ಪೂರೈಸುತ್ತಿದ್ದು, ಈ ನೀರು ಕುಡಿಯಲು ಯೋಗ್ಯವಿಲ್ಲ. ಆದರೂ ಅನಿವಾರ್ಯವಾಗಿ ಕುಡಿಯುವ ಸ್ಥಿತಿಯಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ಯಾಂಟೀನ್‌ಗೆ ಬರುವ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು.
ಎಲ್.ಎಂ.ಶಿವಕುಮಾರ್‌, ನಿವಾಸಿ, ತೆಕ್ಕಲಕೋಟೆ.

ಇಂದಿರಾ ಕ್ಯಾಂಟೀನ್‌ನಲ್ಲಿ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರೊದಗಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.
•ಮಹ್ಮದ್‌ ಸೈಫುದ್ದೀನ್‌,
ಪೌರಾಯುಕ್ತರು, ನಗರಸಭೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next