Advertisement

ಬಿಸಿಲನಾಡಲ್ಲಿ ಭರ್ಜರಿ ಮಳೆ

12:30 PM Sep 25, 2019 | Naveen |

ಸಿರುಗುಪ್ಪ: ತಾಲೂಕಿನಾದ್ಯಂತ ಸೋಮವಾರ ರಾತ್ರಿ ಹಾಗೂ ಮಂಗಳವಾರ ಬೆಳಗಿನ ಜಾವ ಸುರಿದ ಧಾರಕಾರ ಮಳೆಯಿಂದಾಗಿ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಮಣ್ಣಿನ ಮನೆ ಮೇಲ್ಛಾವಣಿ ಕುಸಿದಿದ್ದು, ಎರಡು ಮನೆಗಳು ಭಾಗಶಃ ಬಿದ್ದಿವೆ. ತೆಕ್ಕಲಕೋಟೆ, ಹಳೇಕೋಟೆ, ದಾಸಾಪುರ ಗ್ರಾಮದಲ್ಲಿ ಒಂದೊಂದು ಮಣ್ಣಿನ ಮನೆ ಸೇರಿ ಒಟ್ಟು ಆರು ಮನೆಗಳು ಬಿದ್ದಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

Advertisement

ಬೈರಾಪುರ ಗ್ರಾಮದ ಹನುಮನ ಗೌಡನಿಗೆ ಸೇರಿದ ಮನೆ ಮೇಲ್ಛಾವಣಿ ಸಂಪೂರ್ಣ ಕುಸಿದಿದೆ. ಇತರೆ ಮನೆಗಳು ಭಾಗಶಃ ಬಿದ್ದಿವೆ. ತೆಕ್ಕಲಕೋಟೆಯ ಚಲವಾದಿ ದೊಡ್ಡಪ್ಪನ ಮಣ್ಣಿನ ಮನೆ ಕುಸಿದ್ದಿದ್ದು, ಹಳೇಕೋಟೆ ಗ್ರಾಮದ ಚಿಗರೆ ತಿಮ್ಮಪ್ಪ ಮನೆ ಒಂದು ಭಾಗದ ಗೋಡೆ ಕುಸಿದಿದೆ. ಸಿರುಗುಪ್ಪದಲ್ಲಿ 53 ಮಿಮೀ., ತೆಕ್ಕಲಕೋಟೆ 50.8 ಮಿಮೀ, ಕರೂರು 60.8 ಮಿಮೀ, ಸಿರಗೇರಿ 40.3 ಮಿಮೀ, ಎಂ. ಸೂಗೂರು 36.2ಮಿಮೀ, ಕೆ.ಬೆಳಗಲ್ಲ್ 42.4ಮಿಮೀ, ರಾವಿಹಾಳ್‌ 10.4 ಮಿಮೀ, ಹಚ್ಚೊಳ್ಳಿ 17.2ಮಿಮೀ ಮಳೆಯಾಗಿದೆ ಎಂದು ಸಾಂಖ್ಯೀಕ ಇಲಾಖೆ ಅಧಿಕಾರಿಗಳು
ತಿಳಿಸಿದ್ದಾರೆ.

ಕೊಚ್ಚಿಹೋದ ಕೆಂಚಿಹಳ್ಳದ ಸೇತುವೆ: ಹಾಗಲೂರು ಗ್ರಾಮದ ಹತ್ತಿರ ಹರಿಯುತ್ತಿರುವ ಕೆಂಚಿಹಳ್ಳದ ಸೇತುವೆ ಒಂದು ಭಾಗ ಮಳೆನೀರಿಗೆ ಮಂಗಳವಾರ ಕೊಚ್ಚಿಹೋಗಿದೆ. ದರೂರು ಕಡೆಯಿಂದ ಹಾಗಲೂರಿಗೆ ಸಂಪರ್ಕ ಕಡಿತಗೊಂಡಿದ್ದೆ. ಹಳ್ಳದ ಅಕ್ಕಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ಮತ್ತು ಏತನೀರಾವರಿಗೆ ಸಂಪರ್ಕ ಕಲ್ಪಿಸುವ ಪಂಪ್‌ಸೆಟ್‌ಗಳು ಜಲಾವೃತಗೊಂಡಿವೆ.

ಗ್ರಾಮ ಲೆಕ್ಕಾಧಿಕಾರಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಭತ್ತದ ಗದ್ದೆ ಜಲಾವೃತ: ಎಚ್‌. ಹೊಸಳ್ಳಿ ಗ್ರಾಮದ ದೊಡ್ಡ ಹಳ್ಳದಲ್ಲಿ ನೀರಿನ ಪ್ರವಾಹ ಹೆಚ್ಚಾಗಿದ್ದು ಹೊಸಳ್ಳಿಯಿಂದ ತಾಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತಗೊಂಡಿದ್ದು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಕರೂರಲ್ಲಿ ಮನೆಗೆ ನುಗ್ಗಿದ ನೀರು: ತಾಲೂಕಿನ ಕರೂರು ಗ್ರಾಮದ 30 ಮನೆಗಳಿಗೆ ಮಳೆ ನೀರು ನುಗ್ಗಿದೆ. ಎಕರೆಗಟ್ಟಲೇ ಭತ್ತದ ಗದ್ದೆ ಜಲಾವೃತವಾಗಿದೆ. ಮನೆಯೊಳಗೆ ಚರಂಡಿ ನೀರು ನುಗ್ಗಿ ಸಂಗ್ರಹಿಸಿಟ್ಟಿದ್ದ ಆಹಾರ ಧಾನ್ಯಗಳು ನೀರುಪಾಲಾಗಿವೆ. ಸ.ಹಿ.ಮಾ. ಪ್ರಾಥಮಿಕ ಶಾಲೆ ಆವರಣಕ್ಕೆ ನೀರು ನುಗ್ಗಿ ಕೆರೆಯಂತಾಗಿದೆ.

Advertisement

ಹಾನಿ ಸ್ಥಳಕ್ಕೆ ಅಪರ ಜಿಲ್ಲಾ ಧಿಕಾರಿ ಭೇಟಿ: ತೆಕ್ಕಲಕೋಟೆಯಲ್ಲಿ ಹಾನಿಗೊಳಗಾದ ಪ್ರದೇಶಕ್ಕೆ ಅಪರ ಜಿಲ್ಲಾ ಧಿಕಾರಿ ಸತೀಶ್‌ ಮತ್ತು ಸಹಾಯಕ ಆಯುಕ್ತ ರಮೇಶ ಕೋನಾರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದ 1ನೇ ವಾರ್ಡ್‌ನ ಚಲವಾದಿ ದೊಡ್ಡಪ್ಪನ ಕುಸಿದ ಮಣ್ಣಿನ ಮನೆಗೆ ಭೇಟಿ ನೀಡಿ ಮಾಲೀಕನಿಂದ ಮಾಹಿತಿ ಪಡೆದು ಪರಿಹಾರದ ಭರವಸೆ ನೀಡಿದರು.

ಮಳೆಯ ನೀರು ನುಗ್ಗಿದ ಮೆಟ್ರಿಕ್‌ ನಂತರದ ಬಿಸಿಎಂ ವಸತಿ ನಿಲಯದ ಆವರಣ ಪರಿಶೀಲಿಸಿ ತಾತ್ಕಾಲಿಕವಾಗಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಾಸ್ತವ್ಯ ಇರಲು ಸೂಚನೆ ನೀಡಿದರು. ನಂತರ ರಾರಾವಿ ಹತ್ತಿರದ ವೇದಾವತಿ ಹಗರಿ ನದಿಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಹಸೀಲ್ದಾರ್‌ ದಯಾನಂದ ಪಾಟೀಲ್‌, ಕಂದಾಯ ಅ ಧಿಕಾರಿ ರಾಜೇಂದ್ರ ದೊರೆ ಇದ್ದರು.

ವೇದಾವತಿ ಹಗರಿ ಸೇತುವೆ ಜಲಾವೃತ: ರಾರಾವಿ ಗ್ರಾಮದ ಹತ್ತಿರವಿರುವ ವೇದಾವತಿ ಹಗರಿ ನದಿ ಸೇತುವೆ ಜಲಾವೃತಗೊಂಡಿದ್ದು ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ವಾಹನ ಸವಾರರು, ಇಬ್ರಾಹಿಂಪುರ, ಬಾಗೇವಾಡಿ, ಕುಡುದರಹಾಳು ಸೇತುವೆ ಮೂಲಕ ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next