ಸಿರುಗುಪ್ಪ: ತಾಲೂಕಿನ ತೆಕ್ಕಲಕೋಟೆಯ ಜೆಸ್ಕಾಂ ಕಚೇರಿ ವ್ಯಾಪ್ತಿಗೆ ಬರುವ 33/11 ಕೆ.ವಿ. ವಿದ್ಯುತ್ ವಿತರಣ ಘಟಕದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಮತ್ತು ಜೆಸ್ಕಾಂ ಸಿಬ್ಬಂದಿ ತರಾಟೆಗೆ ತೆಗೆದುಕೊಂಡು ಹೊಡೆಯಲು ಹೋದ ಘಟನೆ ಸೋಮವಾರ ನಡೆಯಿತು.
ತೆಕ್ಕಲಕೋಟೆ ಜೆಸ್ಕಾಂ ಕಚೇರಿಯ ಜೆ.ಇ. ಯಲ್ಲಪ್ಪ ಎನ್ನುವವರು, ಉಡೇಗೋಳ ಗ್ರಾಮದಲ್ಲಿ ವಿದ್ಯುತ್ ಕಂಬಗಳ ದುರಸ್ಥಿ ಕಾರ್ಯಮಾಡಲಾಗುತ್ತಿದೆ, ಆದ್ದರಿಂದ ನಮ್ಮ ಕಚೇರಿ ವ್ಯಾಪ್ತಿಗೆ ಬರುವ ಉಡೇಗೋಳ ಎಫ್-2 ಪೀಡರ್‌ಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕೆಂದು 33/11 ಕೆ.ವಿ. ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ನಾಗರಾಜ ಎನ್ನುವವರಿಗೆ ತಿಳಿಸಿದ್ದರು.
ಆದರೆ ವಿದ್ಯುತ್ ಕಂಬದಲ್ಲಿ ಇನ್ನೂ ಕೆಲಸ ನಡೆಯುತ್ತಿರುವ ಸಂದರ್ಭದಲ್ಲಿಯೇ 33/11 ಕೆ.ವಿ. ಕೇಂದ್ರದ ಸಿಬ್ಬಂದಿ ಎಫ್-2 ಉಡೇಗೋಳ ಫೀಡರ್‌ಗೆ ವಿದ್ಯುತ್ ಸಂಪರ್ಕವನ್ನು ಚಾರ್ಜ್ ಮಾಡಿದ್ದರು. ಆದರೆ ಕಂಬದ ಮೇಲೆ ನಿಂತು ಕಾರ್ಯನಿರ್ವಹಿಸುತ್ತಿದ್ದ ಲೈನ್‌ಮ್ಯಾನ್ ತಕ್ಷಣವೇ ಕಂಬದಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ ಜೆ.ಇ. ಯಲ್ಲಪ್ಪ ಅವರು 33/11 ಕೆ.ವಿ. ಕೇಂದ್ರದ ಸಿಬ್ಬಂದಿಗೆ ಉಡೇಗೋಳ ಎಫ್-2 ಫೀಡರ್‌ಗೆ ವಿದ್ಯುತ್ ಚಾರ್ಜ್ ಮಾಡುವಂತೆ ತಿಳಿಸಿರಲಿಲ್ಲ ಎನ್ನಲಾಗಿದ್ದು, ಆದರೂ ಸಿಬ್ಬಂದಿ ನಿರ್ಲಕ್ಷ್ಯದ ಪರಿಣಾಮ ಎಫ್-2 ಫೀಡರ್‌ಗೆ ವಿದ್ಯುತ್ ಚಾರ್ಜ್ ಮಾಡಲಾಗಿದ್ದು, ಕಂಬದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ ತಕ್ಷಣವೇ ಎಚ್ಚೆತ್ತುಕೊಂಡಿದ್ದರಿಂದ ಯಾವುದೇ ಅನಾಹುತ ನಡೆದಿಲ್ಲ.
ಇದರಿಂದ ಸಿಟ್ಟಿಗೆದ್ದ ಸಿಬ್ಬಂದಿ ಮತ್ತು ಸಾರ್ವಜನಿಕರು 33/11 ಕೆ.ವಿ. ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿ ನಾಗರಾಜನಿಗೆ ಏಟು ಕೊಡಲು ಮುಂದಾಗಿದ್ದರು. ಆದರೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಆಗಬಹುದಾದ ಗಲಾಟೆಯನ್ನು ತಪ್ಪಿಸಿದ್ದಾರೆ.
33/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ನಾಗರಾಜ ಎನ್ನುವ ಸಿಬ್ಬಂದಿ ನಿರ್ಲಕ್ಷéದಿಂದ ಜೆ.ಇ. ಹೇಳದಿದ್ದರೂ ಉಡೇಗೋಳ ಎಫ್-2 ಪೀಡರ್ ಲೈನ್ ಚಾರ್ಜ್ ಮಾಡಿದ್ದು, ಕೂದಲೆಳೆ ಅಂತರದಲ್ಲಿ ಆಗಬಹುದಾದ ಜೀವಹಾನಿ ತಪ್ಪಿದೆ. ಆದ್ದರಿಂದ ಈ ಸಿಬ್ಬಂದಿಯ ಮೇಲೆ ಕ್ರಮ ತೆಗೆದುಕೊಳ್ಳುವಂತೆ ನಮ್ಮ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರ ಗಮನಕ್ಕೆ ತರಲಾಗಿದೆ.
– ನವೀನ್ ಕುಮಾರ್, ಎಇಇ ಜೆಸ್ಕಾಂ
ನಾವು ಚಾರ್ಜ್ ಮಾಡಿ ಎಂದು ಹೇಳುವ ಮೊದಲೇ ಚಾರ್ಜ್ ಮಾಡಿದ್ದರಿಂದ ಉಡೇಗೋಳ ಗ್ರಾಮದಲ್ಲಿ ಕಂಬಗಳ ಮೇಲೆ ರಿಪೇರಿ ಮಾಡುತ್ತಿದ್ದ ಸಿಬ್ಬಂದಿ ಎಚ್ಚೆತ್ತುಕೊಂಡು ಅಪಾಯದಿಂದ ಪಾರಾಗಿದ್ದಾರೆ.
-ಯಲ್ಲಪ್ಪ, ಜೆ.ಇ. ತೆಕ್ಕಲಕೋಟೆ