ಸಿರುಗುಪ್ಪ: ಈ ಬಾರಿ ಮುಂಗಾರು ಪೂರ್ವ ಮಳೆ ಸುರಿಯದಿರುವುದು ತಾಲೂಕಿನ ಜನರ ನಿರೀಕ್ಷೆ ಹುಸಿಗೊಳಿಸಿ ಹತಾಶೆಗೆ ತಳ್ಳಿದೆ. ಬಿರು ಬೇಸಿಗೆಯ ಬಿಸಿಲಿನ ಝಳಕ್ಕೆ ಜನರು ತತ್ತರಿಸಿದಾರೆ. ಕಳೆದ ವರ್ಷ ಏಪ್ರಿಲ್ ಮತ್ತು ಮೇ ತಿಂಗಳ ಮಧ್ಯಭಾಗದಲ್ಲಿ 2 ಬಾರಿ ಸಾಮಾನ್ಯ ಮಳೆಯಾಗಿತ್ತು. ಇದರಿಂದಾಗಿ ಬಿಸಿಲಿನ ಝಳ ಕೊಂಚ ಕಡಿಮೆಯಾಗಿ ಜನರಲ್ಲಿ ನೆಮ್ಮದಿ ಮೂಡಿಸಿತ್ತು. ಆದರೆ ಈ ಬಾರಿ ಮೇ 3ನೇವಾರಕ್ಕೆ ಕಾಲಿಟ್ಟರು ತಾಲೂಕು ವ್ಯಾಪ್ತಿಯಲ್ಲಿ ಒಂದು ಸಾಮಾನ್ಯ ಮಳೆ ಆಗಿಲ್ಲ.
ತಾಲೂಕಿನ ಜೀವನದಿಗಳಾದ ತುಂಗಭದ್ರಾ, ವೇದಾವತಿ ಹಗರಿನದಿ ಬರಿದಾಗಿದೆ. ಇದರಿಂದಾಗಿ ಈ ಭಾಗದ ತೋಟಗಾರಿಕೆ ಬೆಳೆಗಳನ್ನು ಬೆಳೆದ ಕಷಿಕರು ತಮ್ಮ ಬದುಕಿನ ಬೆಳೆಗಳನ್ನು ಬಿಸಿಲಿನ ತೀಕ್ಷ್ಣತೆಯಿಂದ ಸಾಯುವುದನ್ನು ನೋಡಲಾಗದೆ ಮರಗುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಕೃಷಿಕರಲ್ಲಿ ಕೊಳವೆ ಬಾವಿಗಳಿದ್ದರೂ ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಮೊತ್ತೂಂದು ಕಡೆ ವಿದ್ಯುತ್ ಸಮಸ್ಯೆಯು ಕೃಷಿಕರಿಗೆ ಇರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬಿಡುತ್ತಿಲ್ಲ. ಹಳ್ಳಿಯ ಭಾಗಗಳಲ್ಲಿ ನೀರು ಕಣ್ಮರೆಯಾಗಿವೆ. ಬಳಕೆಗೆ ಕೊಳವೆ ಬಾವಿಗಳನ್ನೇ ಜನರು ನಂಬಿದ್ದಾರೆ.
ತಾಲೂಕಿನ 27 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ 84 ಹಳ್ಳಿಗಳಲ್ಲಿ ಕೇವಲ 8 ಹಳ್ಳಿ ಹೊರತು ಪಡಿಸಿ 76 ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ 26 ಕೆರೆ ತುಂಬಿಸಲಾಗಿದ್ದು, ತುಂಗಭದ್ರಾ ನದಿಪಾತ್ರದಲ್ಲಿ ಬರುವ ಹಚ್ಚೊಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನಿರ್ಮಾಣವಾದ ಹಚ್ಚೊಳ್ಳಿ ಕೆರೆಯು ಅರ್ಧ ತುಂಬಿದೆ. ನದಿಯಲ್ಲಿ ನೀರಿಲ್ಲದ ಕಾರಣ ಈ ಕೆರೆ ಭರ್ತಿ ಮಾಡಲು ಸಾಧ್ಯವಾಗಿಲ್ಲ.
ತಾಲೂಕಿನಲ್ಲಿ ಅಂಜೂರ, ಬಾಳೆ, ವೀಳ್ಯೆದೆಲೆ, ಸಪೋಟಾ, ದಾಳಿಂಬೆ, ಪಪ್ಪಾಯ ಮುಂತಾದ ಬೆಳೆಗಳನ್ನು ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ಈ ಬೆಳೆಗಳಿಗೆ ನೀರು ಸಿಗದೆ ಬೆಳೆಗಳು ಒಣಗುವ ಹಂತ ತಲುಪಿವೆ. ಬೋರ್‌ವೆಲ್ ಹೊಂದಿರುವ ರೈತರ ಬೋರ್‌ವೆಲ್ಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ಇರುವ ನೀರಿನಲ್ಲಿಯೇ ತಾವು ಬೆಳೆದ ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಕೆರೆಗಳಲ್ಲಿ ನೀರು ತುಂಬಿಸಿರುವುದರಿಂದ ಜೂನ್ 2ನೇ ವಾರದವರೆಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಸಮಸ್ಯಾತ್ಮಕ ಹಳ್ಳಿಗಳು ತಾಲೂಕಿನಲ್ಲಿ ಇಲ್ಲ.
•
ಪಕ್ಕೀರಸ್ವಾಮಿ,
ಎಇಇ, ಗ್ರಾಮೀಣ ಕುಡಿಯುವ ನೀರು-ನೈರ್ಮಲ್ಯ ಇಲಾಖೆ.
ಸದ್ಯ ನಗರಕ್ಕೆ ನೀರು ಪೂರೈಕೆ ಮಾಡಲು ಯಾವುದೇ ಸಮಸ್ಯೆ ಇಲ್ಲ, ಹರಿಗೋಲ್ ಘಾಟ್ ಭರ್ತಿಯಾಗಿರುವುದರಿಂದ ಇಲ್ಲಿ ಸಂಗ್ರಹವಾಗಿರುವ ನೀರನ್ನು ಜೂನ್ ಅಂತ್ಯದವರೆಗೆ ಪೂರೈಕೆ ಮಾಡಬಹುದಾಗಿದೆ.
•
ಸೈಯದ್ ಮಹಮ್ಮದ್ ಪಾಷಾ,
ಪ್ರಭಾರಿ ಪೌರಾಯುಕ್ತ, ನಗರಸಭೆ.