ಸಿರುಗುಪ್ಪ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಆರೋಗ್ಯದಾಯಕ ಮತ್ತು ಉತ್ತಮ ಪರಿಸರ ನಿರ್ಮಿಸುವ ಉದ್ದೇಶದಿಂದ ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಕೈಗೆತ್ತಿಕೊಂಡಿರುವ ಇಕೋ ಪಾರ್ಕ್ ನಿರ್ಮಾಣ ಕಾಮಗಾರಿಗೆ ತಾಂತ್ರಿಕೆ ತೊಂದರೆ ಮತ್ತು ಅನುದಾನದ ಕೊರತೆ ಸೇರಿದ ಇತರೆ ಸಮಸ್ಯೆಗಳು ಕಾಡುತ್ತಿವೆ.
ನರೇಗಾ ಯೋಜನೆಯಡಿ 2019-20ನೇ ಸಾಲಿನಲ್ಲಿ ತಾಲೂಕಿನ ಮೂರು ಗ್ರಾಪಂಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಸರ್ಕಾರಿ ಸ್ಥಳದಲ್ಲಿ ನರೇಗಾದಡಿ ಇಕೋ ಪಾರ್ಕ್ ನಿರ್ಮಿಸುವುದು ಯೋಜನೆಯ ಉದ್ದೇಶವಾಗಿದೆ. ಇದಕ್ಕಾಗಿ ಗ್ರಾ.ಪಂ, ತೋಟಗಾರಿಕೆ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ, ಕೃಷಿ ಇಲಾಖೆ ಸಹಯೋಗದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಸುಸಜ್ಜಿತ ಪಾರ್ಕ್ ನಿರ್ಮಾಣಕ್ಕೆ ಯೋಜಿಸಲಾಗಿದೆ.
ಮತ್ತೊಂದೆಡೆ ನರೇಗಾ ಕೂಲಿ ಕಾರ್ಮಿಕರಿಗೆ ಯೋಜನೆಯಲ್ಲಿ ಉದ್ಯೋಗ ನೀಡಲು ಉದ್ದೇಶಿಸಲಾಗಿದೆ. 2020 ಮಾರ್ಚ್‌ನಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ ಈ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಅನುದಾನದ ಕೊರತೆ ಕಾಡುತ್ತಿದೆ. ಸಾಮಗ್ರಿ ಸೇರಿ ವಿವಿಧ ಕಾರ್ಯಗಳಿಗೆ ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆಯಲ್ಲಿ ವಿಳಂಬವಾಗಿರುವುದು ಕಾಮಗಾರಿ ನಿಧಾನಗತಿಯಲ್ಲಿ ನಡೆಯಲು ಕಾರಣವಾಗಿದೆ.
ತಾಲೂಕಿನ ಕೆಂನಗುಡ್ಡ, ಬಿ.ಎಂ.ಸೂಗೂರು, ಕುಡುದರಹಾಳು ಗ್ರಾಮಗಳಲ್ಲಿ ಇಕೋ ಪಾರ್ಕ್ ನಿರ್ಮಿಸಲು ಯೋಜನೆ ನಿರ್ಮಿಸಿ ಕೋಟಿ ರೂ. ಅನುದಾನದಲ್ಲಿ ಪಾರ್ಕ್ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಆದರೆ ತಾಲೂಕಿನ ಬಿ.ಎಂ. ಸೂಗೂರು ಗ್ರಾಪಂನಲ್ಲಿ ಇಕೋ ಪಾರ್ಕ್ ನಿರ್ಮಾಣಕ್ಕೆ ಗುರುತಿಸಿದ ಸ್ಥಳವು ತಮ್ಮದೆಂದು ಖಾಸಗಿ ವ್ಯಕ್ತಿಗಳು ತಕರಾರು ಮಾಡಿರುವುದರಿಂದ ಈ ಗ್ರಾಮದಲ್ಲಿ ಇಕೋ ಪಾರ್ಕ್ ನಿರ್ಮಾಣ ಕಾರ್ಯ ಸದ್ಯ ಕೈಬಿಡಲಾಗಿದೆ.
ಕೆಂಚನಗುಡ್ಡ ಗ್ರಾಪಂ ವ್ಯಾಪ್ತಿಯಲ್ಲಿ 5 ಎಕರೆ ಪ್ರದೇಶದಲ್ಲಿ ಇಕೋ ಪಾರ್ಕ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಕಾಂಪೌಂಡ್ ವಾಲ್ ಮತ್ತು ಎಲ್‌ಶೇಪ್ ಗೋಡೆ ನಿರ್ಮಾಣ ಕಾರ್ಯ ಮಾತ್ರ ನಡೆದಿದ್ದು, ಇನ್ನುಳಿದ ಕಾರ್ಯ ಬಾಕಿ ಇರುತ್ತದೆ. ಕುಡುದರಹಾಳು ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಶ್ರೀಧರಗಡ್ಡೆ ಗ್ರಾಮದಲ್ಲಿ ಇಕೋ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಬದಲಾಯಿಸಿ ಶಾಲೆಯ ಹತ್ತಿರ ಇಕೋ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಸ್ಥಳ ಬದಲಾವಣೆ ಬಗ್ಗೆ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲಾಗಿದೆ. ತಾಲೂಕಿನ ಗ್ರಾ.ಪಂ ವ್ಯಾಪ್ತಿಯ ಗ್ರಾಮವೊಂದನ್ನು ಆಯ್ಕೆ ಮಾಡಿಕೊಂಡು ಸರ್ಕಾರಿ ಸ್ಥಳದಲ್ಲಿ ಇಕೋ ಪಾರ್ಕ್ ನಿರ್ಮಿಸಲಾಗುತ್ತದೆ. ಇಲ್ಲಿ ಆಯಾ ಗ್ರಾ.ಪಂ ವತಿಯಿಂದ ಸುತ್ತಲು ಬಯೋ μನಿಶಿಂಗ್, ವಾಕಿಂಗ್ ಟ್ರಾÂಕ್, ಕಂದಕ ಬದು ನಿರ್ಮಾಣ, ಸಂಪರ್ಕ ರಸ್ತೆ, ಕಮಾನುಗೇಟು, ಶೌಚಾಲಯ, ಸ್ವಸಹಾಯ ಗುಂಪುಗಳಿಗೆ ವರ್ಕ್‌ಶೆಡ್, ಭೂ ಅಭಿವೃದ್ಧಿ, ನೀರಿನ ವ್ಯವಸ್ಥೆಗೆ ಪೈಪ್‌ಲೈನ್, ಗುಂಡಿ ನಿರ್ಮಿಸುವುದು ಯೋಜನೆಯ ವಿವಿಧ ಕಾಮಗಾರಿಗಳಾಗಿವೆ.
ತೋಟಗಾರಿಕೆ ಇಲಾಖೆಯಿಂದ ಮೆಕ್ಸಿಕಪ್ ಹುಲ್ಲಿನ ಲ್ಯಾಂಡ್, ಹೂವಿನ ಮಡಿಗಳ ನಿರ್ಮಾಣ, ಮುಖ್ಯರಸ್ತೆಯ ಎರಡೂ ಬದಿ ಅಲಂಕಾರಿಕ ಸಸಿ ನೆಡುವುದು ಸೇರಿ ಇತರೆ ಕಾಮಗಾರಿ ಮಾಡಲು ಸೂಚಿಸಲಾಗಿದೆ. ಕೃಷಿ ಇಲಾಖೆಯಿಂದ ಎರೆಹುಳು ಘಟಕ ಸ್ಥಾಪನೆ, ಕೃಷಿ ಹೊಂಡ, ಕಲ್ಯಾಣಿ, ಗೋಕಟ್ಟೆ ನಿರ್ಮಾಣ, ಸಾಮಾಜಿಕ ಅರಣ್ಯ ಇಲಾಖೆಯಿಂದ ಮಾನ್‌ಸೂನ್ ನೆಡುತೋಪು ನಿರ್ಮಾಣ, ಔಷಧಿಯ ಗುಣಗಳ ಸಸಿಗಳನ್ನು ಬೆಳೆಸಬೇಕು ಎಂದು ಯೋಜನೆಯಲ್ಲಿ ಸೇರಿಸಲಾಗಿದೆ.
ತಾಲೂಕಿನಲ್ಲಿ ಮೂರು ಕಡೆ ಇಕೋ ಪಾರ್ಕ್ ನಿರ್ಮಾಣ ಮಾಡಲು ಸ್ಥಳ ಗುರುತಿಸಲಾಗಿತ್ತು. ಆದರೆ ಬಿ.ಎಂ. ಸೂಗೂರು ಗ್ರಾಮದಲ್ಲಿ ಭೂಮಿಯ ತಾಂತ್ರಿಕ ಸಮಸ್ಯೆ ಇರುವುದರಿಂದ ಸದ್ಯ ಆ ಗ್ರಾಮದಲ್ಲಿ ಇಕೋ ಪಾರ್ಕ್ ನಿರ್ಮಾಣ ಕಾರ್ಯ ಕೈಬಿಡಲಾಗಿದ್ದು, ಕೆಂಚನಗುಡ್ಡ ಗ್ರಾಮದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಶ್ರೀಧರಗಡ್ಡೆ ಗ್ರಾಮದಲ್ಲಿ ಪಾರ್ಕ್ ನಿರ್ಮಾಣಕ್ಕೆ ಬೇಕಾದ ಸ್ಥಳದ ಬದಲಾವಣೆಗಾಗಿ ಜಿಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕೆ.ವಿ.ನಿರ್ಮಲ,
ತಾಲೂಕು ನಿರ್ದೇಶಕಿ, ನರೇಗಾ
ಆರ್.ಬಸವರೆಡ್ಡಿ ಕರೂರು