ಸಿರುಗುಪ್ಪ: ಕೊರೊನಾ ವೈರಸ್ ತಡೆಗೆ ಮೇ 3ರವರೆಗೆ ಲಾಕ್‌ಡೌನ್ ಘೋಷಿಸಲಾಗಿದ್ದು ಈ ಹಿಂದೆಯೇ ಕಟಾವು ಮಾಡಿಟ್ಟ ಹತ್ತಿಬೆಳೆ ಸಾಗಿಸಲಾಗದೆ ಕೊರೊನಾ ಹತ್ತಿಬೆಳೆದ ರೈತರನ್ನು ಸಂಕಷ್ಟಕ್ಕೆ ದೂಡಿದೆ.
ತಾಲೂಕಿನಲ್ಲಿ ಸುಮಾರು 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆ ಬೆಳೆಯಲಾಗಿದ್ದು, ರೈತರು ಹತ್ತಿ ಬೆಲೆ ಕುಸಿತದ ಪರಿಣಾಮ ಮಾರಾಟ ಮಾಡದೆ ಸಂಗ್ರಹಿಸಿಟ್ಟಿದ್ದಾರೆ. ಆದರೆ ಈಗ ಲಾಕ್‌ಡೌನ್ ಆದೇಶವೇ ರೈತರಿಗೆ ತೀವ್ರ ತೊಂದರೆಯನ್ನುಂಟುಮಾಡಿದೆ. ಒಂದು ಎಕರೆಗೆ 30ರಿಂದ 35 ಸಾವಿರ ವೆಚ್ಚಮಾಡಿ ಹತ್ತಿ ಬೆಳೆಯನ್ನು ಬೆಳೆಯಲಾಗಿದ್ದು, ಒಂದೆಡೆ ರೈತರು ಕೊರೊನಾ ಹೊಡೆತಕ್ಕೆ ನಲುಗಿದ್ದರೆ, ಮತ್ತೂಂದು ಕಡೆ ಹತ್ತಿ ಮಾರಾಟಕ್ಕೆ ಅವಕಾಶವಿದ್ದರೂ ವ್ಯಾಪಾರಿಗಳು ಕೊಳ್ಳಲು ಬಾರದಿರುವುದು ರೈತರನ್ನು ತೀವ್ರ ತೊಂದರೆಗೀಡುಮಾಡಿದೆ.
ಜಿಲ್ಲಾಡಳಿತ ಈ ಹಿಂದೆ ಹತ್ತಿ ಖರೀದಿಗೆ ಭಾರತೀಯ ಹತ್ತಿ ನಿಗಮದಿಂದ ಖರೀದಿಗೆ ವ್ಯವಸ್ಥೆ ಮಾಡಿತ್ತು. ನಿಗಮದಿಂದ ನೊಂದಣಿಯಾದ ರೈತರಿಂದ ರೂ.5,500ಗಳಿಗೆ ಹತ್ತಿಯನ್ನು ಖರೀದಿಸಿ ರೈತರಿಗೆ ಹಣ ಪಾವತಿಸಲಾಗಿತ್ತು. ಆದರೆ ಫೆಬ್ರವರಿ ವೇಳೆಗೆ ಹತ್ತಿ ಮಾರಾಟಕ್ಕೆ ರೈತರು ಬಾರದಿರುವುದರಿಂದ ನಿಗಮದ ಅಧಿಕಾರಿಗಳು ಖರೀದಿ ನಿಲ್ಲಿಸಿದ್ದಾರೆ.
ಹತ್ತಿ ಕಟಾವು ಮಾಡಿ ಮನೆಯಲ್ಲಿಟ್ಟುಕೊಂಡಿದ್ದೇವೆ. ಸರ್ಕಾರ ಭಾರತೀಯ ಹತ್ತಿ ನಿಗಮದಿಂದ ಸೂಕ್ತ ಬೆಲೆ ನಿಗದಿಪಡಿಸಿ ಖರೀದಿಸುವ ವ್ಯವಸ್ಥೆ ಮಾಡಬೇಕು.
ನಿಂಗಪ್ಪ, ರೈತ
ಮಾರುಕಟ್ಟೆ ವ್ಯವಸ್ಥೆ ಮಾಡಿಕೊಟ್ಟರೆ ಹತ್ತಿಬೆಳೆದ ರೈತರಿಗೆ ಅನುಕೂಲವಾಗಲಿದೆ. ಸರ್ಕಾರ ಶೀಘ್ರವಾಗಿ ಹತ್ತಿ ಖರೀದಿ ಕೇಂದ್ರ ಪ್ರಾರಂಭಿಸಬೇಕು.
ಆರ್. ಮಾಧವರೆಡ್ಡಿ,
ರಾಜ್ಯ ರೈತ ಸಂಘ ಮತ್ತು
ಹಸಿರು ಸೇನೆ ಕಾರ್ಯಾಧ್ಯಕ್ಷ
ಆರ್. ಬಸವರೆಡ್ಡಿ ಕರೂರು