ಸಿರುಗುಪ್ಪ: ತುಂಗಭದ್ರಾ ಎಲ್‌ಎಲ್‌ಸಿ ಕಾಲುವೆ, ವೇದಾವತಿ ಹಗರಿ ಮತ್ತು ತುಂಗಭದ್ರಾ ನದಿ, ದೊಡ್ಡಹಳ್ಳ, ಗರ್ಜಿಹಳ್ಳ, ಬೋರ್‌ವೆಲ್ ನೀರನ್ನು ಬಳಸಿಕೊಂಡು, ಬೇಸಿಗೆ ಹಂಗಾಮಿನಲ್ಲಿ ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಭತ್ತ ಕೊಯ್ಲಿಗೆ ಬಂದಿದ್ದು, ಯಂತ್ರಗಳ ಮೂಲಕ ರೈತರು ಭತ್ತ ಕಟಾವು ಮಾಡಲು ಆರಂಭಿಸಿದ್ದಾರೆ.
ಲಾಕ್‌ಡೌನ್ ಇರುವುದರಿಂದ ತಮಿಳನಾಡು, ಸೀಮಾಂಧ್ರ, ತೆಲಂಗಾಣ ಪ್ರದೇಶದಿಂದ ಬರುತ್ತಿದ್ದ ಭತ್ತ ಕೊಯ್ಲಿನ ಯಂತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಆದರೂ ಬಳ್ಳಾರಿ, ಸಿಂಧನೂರು, ಗಂಗಾವತಿ ಮುಂತಾದ ಕಡೆಗಳಿಂದ ಬಂದಿರುವ ಭತ್ತ ಕೊಯ್ಲಿನ ಯಂತ್ರಗಳಿಂದ ರೈತರು ಭತ್ತ ಕಟಾವು ಮಾಡುತ್ತಿದ್ದಾರೆ. ಆದರೆ ಮುಂಗಾರು ಹಂಗಾಮಿನಲ್ಲಿ ಒಂದು ಎಕರೆ ಭತ್ತ ಕೊಯ್ಲು ಮಾಡಲು 2,400 ರಿಂದ 2,500 ರೂ. ವರೆಗೆ ಬೆಲೆ ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ ಒಂದು ಎಕರೆ ಕೊಯ್ಲಿಗೆ 2000 ರೂ. ನಿಗದಿ ಮಾಡಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ತಾಲೂಕಿನಲ್ಲಿ ಹೆಚ್ಚಾಗಿ ಕಾವೇರಿ ತಳಿಯ ಭತ್ತ ಬೆಳೆಯಲಾಗಿದ್ದು, ರೋಗ ರುಜಿನಗಳ ಕಾಟದ ನಡುವೆಯೂ ಒಂದು ಎಕರೆಗೆ 40 ರಿಂದ 50 ಚೀಲ ಇಳುವರಿ ಬರುತ್ತಿರುವುದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಲಾಕ್‌ಡೌನ್ ಎಫೆಕ್ಟ್ ಭತ್ತದ ಕೊಯ್ಲಿನ ಮೇಲೆ ಯಾವುದೇ ಪರಿಣಾಮ ಬೀರಿರುವುದಿಲ್ಲ. ಕಟಾವು ಯಂತ್ರಗಳ ಸಾಗಾಣಿಕೆಗೆ ಸಾಥ್ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿರುವುದರಿಂದ ಕಟಾವು ಯಂತ್ರಗಳು ತಾಲೂಕಿಗೆ ಬರಲು ಸಾಧ್ಯವಾಗುತ್ತಿದೆ.
ಇದರಿಂದಾಗಿ ರೈತರಿಗೆ ಕಟಾವು ಯಂತ್ರಗಳ ಕೊರತೆ ಇಲ್ಲವಾಗಿದೆ. ಭತ್ತ ಕೊಯ್ಲಿಗೆ ಬೇಕಾದ ಯಂತ್ರಗಳನ್ನು ಕೃಷಿ ಇಲಾಖೆ ಯಂತ್ರಧಾರೆ ಕೇಂದ್ರಗಳಿಂದ ಹೆಚ್ಚು ತರಿಸಿ ಬಾಡಿಗೆ ಆಧಾರದಲ್ಲಿ ಕೊಯ್ಲು ಮಾಡಿಸಲು ಅನುಕೂಲ ಮಾಡಿಕೊಡಬೇಕೆಂದು ರೈತ ಮುಖಂಡ ವಾ.ಹುಲುಗಯ್ಯ ಒತ್ತಾಯಿಸಿದ್ದಾರೆ. ತಾಲೂಕಿನಲ್ಲಿ ನಾಲ್ಕು ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಭತ್ತ ಕೊಯ್ಲಿನ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದೆ. ಸದ್ಯ ಭತ್ತ ಕೊಯ್ಲು ಮಾಡಲು ರೈತರಿಗೆ ಕೃಷಿ ಯಂತ್ರಗಳ ಕೊರತೆ ಇಲ್ಲ. ಭತ್ತ ಕೊಯ್ಲು ಕಾರ್ಯ ಭರದಿಂದ ಸಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹಮ್ಮದ್ ತಿಳಿಸಿದ್ದಾರೆ.
ಆರ್.ಬಸವರೆಡ್ಡಿ ಕರೂರು