ಸಿರುಗುಪ್ಪ: ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಾರಿಗೊಂಡಿರುವ ಮಾದರಿ ನೀತಿ ಸಂಹಿತೆ ಪರಿಣಾಮ ತಾಲೂಕು ಕಚೇರಿ ಸೇರಿದಂತೆ ತಾಲೂಕಿನ ಗ್ರಾಪಂಗಳಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ಕಳೆದ 2ತಿಂಗಳಿನಿಂದ ಸ್ಥಗಿತಗೊಂಡಿರುವುದರಿಂದ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್ ಮಾಡಿಸಲು ಪೋಷಕರು ಪರದಾಡುವ ದೃಶ್ಯಗಳು ಸಾಮಾನ್ಯವಾಗಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಂದು ಯೋಜನೆಗೂ ಈಗ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವುದರಿಂದ ಆಧಾರ್‌ಗೆ ಹೆಚ್ಚಿನ ಮಹತ್ವ ಬಂದಿದೆ. ಆದರೆ ಕಾಲಮಿತಿಯೊಳಗೆ ಆಧಾರ್ ಕಾರ್ಡ್ ಸಿಗದೆ ಸರ್ಕಾರದ ಸೌಲಭ್ಯಗಳು ಜನ ಸಾಮಾನ್ಯರಿಗೆ ದೂರವಾಗಿ ಸರ್ಕಾರಿ ಯೋಜನೆಗಳ ಲಾಭ ಜನರ ಪಾಲಿಗೆ ಸಿಗದಂತಾಗುತ್ತಿದೆ.
ತಾಲೂಕಿನಾದ್ಯಂತ ಶಾಲಾ ಕಾಲೇಜುಗಳು 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ದಾಖಲಾತಿ ಪ್ರಕ್ರಿಯೆಗಳು ಎಲ್ಲ ಕಡೆ ಪ್ರಾರಂಭವಾಗಿವೆ. ಆದರೆ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮಾಡಿಸಲು ಹಾಗೂ ಶಾಲಾ ಕಾಲೇಜುಗಳಲ್ಲಿ ದಾಖಲಾತಿಗಾಗಿ ಆಧಾರ್ ಸಂಖ್ಯೆ ಕೊಡುವುದು ಕಡ್ಡಾಯಗೊಳಿಸಿರುವುದರಿಂದ ಸದ್ಯ ಆಧಾರ್ ಕಾರ್ಡ್‌ಗೆ ಪರದಾಡುವ ದೃಶ್ಯಗಳು ಕಂಡು ಬರುತ್ತಿವೆ.
ಲೋಕಸಭಾ ಚುನಾಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಗ್ರಾಪಂ ಕಚೇರಿಗಳಲ್ಲಿ ಮಾಡಲಾಗುತ್ತಿದ್ದ ಆಧಾರ್ ನೋಂದಣಿ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದು ಜನ ಸಾಮಾನ್ಯರು ಆಧಾರ್‌ನೋಂದಣಿಗೆ ಪರದಾಡಬೇಕಾಗಿದೆ. ತಾಲೂಕಿನ ಕೆಲವು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಆಧಾರ್ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದ್ದರೂ ಸಾಕಷ್ಟು ವಿಳಂಬವಾಗುತ್ತಿದೆ. ದಿನಕ್ಕೆ ಕೇವಲ 20ರಿಂದ 25ಜನರಿಗೆ ಆಧಾರ್ ನೋಂದಣಿಗೆ ಬ್ಯಾಂಕ್‌ಗಳು ಟೋಕನ್ ವಿತರಿಸುತ್ತಿವೆ. ನಗರದ ಮುಖ್ಯ ಅಂಚೆ ಕಛೇರಿಯಲ್ಲಿ ಆಧಾರ್ ನೋಂದಣಿ ಮಾಡಲಾಗುತ್ತಿದ್ದು, ರಾತ್ರಿ 2ಗಂಟೆಗೆ ಬಂದು ಸಾಲುಗಟ್ಟಿ ನಿಂತರು ಟೋಕನ್ ಸಿಗದ ಪರಿಸ್ಥಿತಿ ನಿಮಾಣವಾಗಿದೆ.
ಬಹಳಷ್ಟು ಜನ ಆಧಾರ್ ಕಾರ್ಡ್‌ನ್ನು ಹೊಸದಾಗಿ ಪಡೆಯುವುದಕ್ಕಿಂತ ತಿದ್ದುಪಡಿಗೆ ಹೆಚ್ಚು ಅರ್ಜಿಗಳು ಹಾಕುತ್ತಿರುವುದರಿಂದ ನೋಂದಣಿ ಕೇಂದ್ರಗಳು ಜನರಿಂದ ತುಂಬಿ ತುಳುಕುತ್ತಿವೆ. ಕಾಲಮಿತಿಯೊಳಗೆ ಅರ್ಜಿ ಹಾಕಲು ಸಾಧ್ಯವಾಗದೆ ಆಧಾರ್ ನೋಂದಣಿ ಕೇಂದ್ರಗಳಿಗೆ ನಿತ್ಯವೂ ಪರದಾಡುವಂತಾಗಿದೆ. ತಾಲೂಕಿನ 27 ಗ್ರಾಪಂಗಳಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ಅವಕಾಶ ನೀಡಲಾಗಿದೆ. ಆದರೆ ತಾಂತ್ರಿಕ ಸಮಸ್ಯೆಗಳಿಂದ ಗ್ರಾಪಂಗಳಲ್ಲಿ ಆಧಾರ್ ಕಾರ್ಡ್ ನೋಂದಣಿ ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ.
ತಾಲೂಕಿನಲ್ಲಿ ಆಧಾರ್ ನೋಂದಣಿಗೆ ಶಾಶ್ವತ ಕೇಂದ್ರ ತೆರೆಯದೇ ಇರುವುದರಿಂದ ಜನ ಆಧಾರ್ ನೋಂದಣಿಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸರ್ಕಾರ ಶಾಶ್ವತ ಆಧಾರ್ ನೋಂದಣಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು. ಗ್ರಾಪಂ ಕಚೇರಿಗಳಲ್ಲಿ ಆಧಾರ್ ನೋಂದಣಿ ಕಾರ್ಯ ಮಾಡುವಂತೆ ಕ್ರಮ ಕೈಗೊಳ್ಳಬೇಕು.
•ಎಸ್.ರಫಿ, ಸ್ಥಳೀಯ ನಿವಾಸಿ.
ಗ್ರಾಪಂ ಕಚೇರಿಗಳಲ್ಲಿ ಆಧಾರ್ ನೋಂದಣಿ ಮಾಡಲು ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಮೇ 27ರ ನಂತರ ಗ್ರಾಪಂ ಕಚೇರಿಗಳಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ನಡೆಯುವಂತೆ ಕ್ರಮ ಕೈಗೊಳ್ಳಲಾಗುವುದು.
• ಶಿವಪ್ಪ ಸುಬೇದಾರ್, ತಾಪಂ, ಇ.ಒ.
ತಾಲೂಕಿನಲ್ಲಿ ಆಧಾರ್ ಕಾರ್ಡ್‌ಗಾಗಿ ಜನರು ಪರದಾಡುತ್ತಿರುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಗ್ರಾಪಂ ಕಚೇರಿಗಳಲ್ಲಿ ಆಧಾರ್ ನೋಂದಣಿ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.
•ದಯಾನಂದ್ ಪಾಟೀಲ್, ತಹಶೀಲ್ದಾರ್.