ಸಿರುಗುಪ್ಪ: ದೇಶಾದ್ಯಂತ ಹೇರಲಾಗಿದ್ದ ಲಾಕ್‌ಡೌನ್ ಛಾಯಾಗ್ರಹಣವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ನೂರಾರು ಜನರ ಸಂಪಾದನೆ ಕಸಿದುಕೊಂಡಿದೆ. ನಾಮಕರಣ, ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಫೋಟೋ, ವೀಡಿಯೋ ತೆಗೆಯುತ್ತಿದ್ದ ವೀಡಿಯೋ ಗ್ರಾಫರ್ ಮತ್ತು ಛಾಯಗ್ರಾಹಕರಿಗೆ ಈಗ ಕೆಲಸವಿಲ್ಲ. ಸ್ಟುಡಿಯೋ ಇಟ್ಟುಕೊಂಡಿದ್ದವರಿಗೂ ಒಂದೂವರೆ ತಿಂಗಳಿಂದ ಏನೂ ಸಂಪಾದನೆ ಇಲ್ಲ.
ನಗರ ಸೇರಿದಂತೆ ಗ್ರಾಮೀಣ ಪ್ರದೇಶದ 128ಕ್ಕೂ ಹೆಚ್ಚು ಮಂದಿ ಛಾಯಗ್ರಾಹಣವನ್ನು ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬೇಸಿಗೆ ರಜಾ ಕಾಲವಾಗಿರುವುದರಿಂದ ಈ ಸಮಯದಲ್ಲಿ ವಿವಿಧ ರೀತಿಯ ನೂರಾರು ಸಮಾರಂಭಗಳು ನಡೆಯುತ್ತವೆ. ಗೃಹಪ್ರವೇಶ, ನಿಶ್ಚಿತಾರ್ಥ, ಮದುವೆ ಸೇರಿದಂತೆ ಇನ್ನಿತರೆ ಶುಭ ಸಮಾರಂಭಗಳಿಗಾಗಿ ಹಲವರು ಛಾಯಾಗ್ರಾಹಕರಿಗೆ ಮುಂಗಡ ನೀಡಿ ದಿನಾಂಕ ಕಾಯ್ದಿರಿಸಿದ್ದರು. ಆದರೆ ಸಮಾರಂಭಗಳು ಮನೆಗೆ ಮಿತಿಗೊಂಡಿವೆ. ಛಾಯಾಗ್ರಾಹಕರ ಬದುಕು ಈಗ ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ. ಮುಂಗಡ ಕೊಟ್ಟವರು ಹಣ ವಾಪಸ್ ಕೇಳುತ್ತಿದ್ದಾರೆ. ಕೆಲವರ ಸಮಾರಂಭಗಳು ಮುಗಿದಿವೆ.
ಹಲವರು ಕಾರ್ಯಗಳನ್ನು ಮುಂದೂಡಿ ಶಾಸ್ತ್ರೋತ್ರವಾಗಿ ನಡೆಸಲಾಗದೆ ರದ್ದುಗೊಳಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕುಟುಂಬಗಳನ್ನು ಯಾರು ಸಲಹುತ್ತಾರೆಂದು ಛಾಯಾಗ್ರಾಹಕರು ಅಳಲು ತೋಡಿಕೊಂಡಿದ್ದಾರೆ. ನಾವು ವೀಡಿಯೋ ಚಿತ್ರೀಕರಣ ಮತ್ತು ಚಿತ್ರಗಳನ್ನು ಸೆರೆ ಹಿಡಿದು ಜೀವನ ಸಾಗಿಸುತ್ತಿರುವವರು, ಲಾಕ್ ಡೌನ್ ನಂತರ ಜೀವನ ನಡೆಸುವುದು ತುಂಬಾ ಕಷ್ಟಕರವಾಗಿದೆ. ತಾಲೂಕಿನಾದ್ಯಂತ 150ಕ್ಕೂ ಹೆಚ್ಚು ಛಾಯಾಗ್ರಾಹಕರಿದ್ದು, ಈ ಕೆಲಸ ಬಿಟ್ಟರೆ ಬೇರೆ ಯಾವ ವೃತ್ತಿಯಲ್ಲೂ ತೊಡಗಿಲ್ಲವೆಂದು ಛಾಯಗ್ರಾಹಕ ಜೀತೇಂದ್ರಿಯಸ್ವಾಮಿ ತಿಳಿಸಿದ್ದಾರೆ.
ವರ್ಷದಲ್ಲಿ 2 ತಿಂಗಳು ಬಿಟ್ಟರೆ ಉಳಿದ 10 ತಿಂಗಳು ನಮಗೆ ಕೆಲಸ ಇರುತ್ತಿತ್ತು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚು, ಉತ್ತಮ ಆದಾಯವು ಬರುತ್ತಿತ್ತು. ಆದರೆ ಕೋವಿಡ್ -19ನಿಂದ ಭಾರಿ ತೊಂದರೆಯಾಗಿದೆ. ಮುಂಗಡ ಪಡೆದಿದ್ದ ಹಣವನ್ನು ಕೆಲವರಿಗೆ ಹಿಂದಿರುಗಿಸಿದ್ದೇವೆ. ಹೋಟೆಲ್, ಆಟೋ ಚಾಲಕರಿಗೆ, ದಿನಸಿ ಅಂಗಡಿಯವರಿಗೆ, ಗಾರೆಕೆಲಸ, ತರಕಾರಿ ಮಾರುಕಟ್ಟೆ ಸೇರಿದಂತೆ ಅನೇಕ ಕಡೆ ಕೆಲಸ ಮಾಡುವವರಿಗೆ ಮೇ 4ರಿಂದ ಕೆಲಸ ಮಾಡಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ಮದುವೆ ಸಮಾರಂಭ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಇನ್ನೂ ಒಪ್ಪಿಗೆ ನೀಡಿಲ್ಲ ಎಂದರು.
ವೀಡಿಯೋ, ಫೋಟೋ ತೆಗೆದು ಜೀವನ ನಡೆಸುತ್ತಿರುವವರು ಒಂದೂವರೆ ತಿಂಗಳಿಂದ ಒಂದೂ ರೂ. ಸಂಪಾದನೆ ಆಗಿಲ್ಲ. ಸರ್ಕಾರ ಈ ಕುರಿತು ಗಮನ ಹರಿಸಬೇಕು.
ಮಲ್ಲಿಕಾರ್ಜುನ,
ಫೋಟೋ-ವೀಡಿಯೋ ಗ್ರಾಫರ್ ಸಂಘದ ಅಧ್ಯಕ್ಷ
ಆರ್.ಬಸವರೆಡ್ಡಿ ಕರೂರು