ಶಿರಸಿ: ಕೃಷಿಯ ಬಗ್ಗೆ ಇರುವ ಕೀಳರಿಮೆ ಮೊದಲು ತೊಲಗಬೇಕಿದೆ ಎಂದು ಜಿಲ್ಲಾ ಪತ್ರಿಕಾ ಮಂಡಳಿ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ಹೇಳಿದರು. ತಾಲೂಕಿನ ಹುಲೇಕಲ್‌ನಲ್ಲಿ ನೂತನವಾಗಿ ಆರಂಭಿಸಲಾದ ಪ್ರಗತಿಪರ ರೈತ ಸಂಘ ಕರ್ನಾಟಕ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶ್ರೀಸಾಮಾನ್ಯ ರೈತಪರ ಅಪಾರ ಕಾಳಜಿ ಆಶೋತ್ತರಗಳನ್ನು ಹೊಂದಿರುವ ಈ ಸಂಸ್ಥೆಯನ್ನು ಬೆಳೆಸಿ ಬಲಪಡಿಸುವ ಮೂಲಕ ರೈತ ಸಮುದಾಯ ಹೆಚ್ಚಿನ ಪ್ರಯೋಜನ ಸವಲತ್ತುಗಳನ್ನು ಪಡೆದುಕೊಳ್ಳುವಂತಾಗಬೇಕು ಎಂದರು.
ರೈತರು ಜಾಗೃತರಾಗಿ ತಮ್ಮ ಕರ್ತವ್ಯಗಳನ್ನು ನಿರ್ವಹಣೆ ಮಾಡುವತ್ತ ಸಂಕಲ್ಪ ಮಾಡಿ ಕಾರ್ಯೋನ್ಮುಖರಾದರೆ ಕೃಷಿಯಲ್ಲಿ ಯಶಸ್ಸು ಸಾಧ್ಯ. ರೈತ ಬೆಳೆದ ಬೆಳೆಗೆ ಯೋಗ್ಯ ಧಾರಣೆ ಇಂಥ ಸಂಘಗಳಿಂದ ದೊರೆಯುವಂತಾಗಬೇಕು ಎಂದರು.ಪ್ರಗತಿಪರ ಕೃಷಿಕ ರಾಮು ಕಿಣಿ, ಬೆಳೆಗಳ ಸಂಸ್ಕರಣೆ ಮೌಲ್ಯವರ್ಧನೆ ಕುರಿತಂತೆ ರೈತ ಸಮುದಾಯ ಸಾಮುದಾಯಿಕವಾಗಿ ಪ್ರಯತ್ನಿಸಿದರೆ ಯಶಸ್ಸು ಸಾಧ್ಯ ಎಂದರು.
ಕಾಳು ಮೆಣಸಿನ ಬೇಸಾಯ ಸಮಗ್ರ ನಿರ್ವಹಣೆ ಕುರಿತಂತೆ ಶಿರಸಿ ತೋಟಗಾರಿಕಾ ಮಹಾವಿದ್ಯಾಲಯದ ಉಪನ್ಯಾಸಕ ಡಾ| ಪ್ರಸಾದ್ ಪಿ.ಎಸ್. ರೈತರಿಗೆ ಪೂರಕವಾದ ಸಮಗ್ರ ಮಾಹಿತಿ ನೀಡಿದರು. ಪ್ರಗತಿ ಪರ ರೈತ ಸಂಘ ಕರ್ನಾಟಕದ ರಾಜ್ಯಾಧ್ಯಕ್ಷ ಲಕ್ಷ್ಮಣ.ಜಿ. ನಾಯ್ಕ ಸಿದ್ದಾಪುರ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ನಿರ್ದೇಶಕ ವೆಂಕಟೇಶ ಭಟ್ ಸಂಸ್ಥೆಯ ಧ್ಯೇಯೋದ್ದೇಶಗಳು ಆಶೋತ್ತರಗಳ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೋಕೃಪಾಮೃತಮ್ ಭೂ ಸಮೃದ್ಧಿ ಸಸ್ಯ ಸಂಜೀವಿನಿ ದ್ರವ್ಯ ತಯಾರಿಕೆ ಕುರಿತಂತೆ ಪ್ರಾತ್ಯಕ್ಷಿಕೆಯೊಂದಿಗೆ ರಾಘವೇಂದ್ರ ಹೆಗಡೆ ಹೊನ್ನೆಗದ್ದೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಭಾಗವಹಿಸಿದ ನೂರಾರು ರೈತರಿಗೆ ಗೋಕೃಪಾಮೃತಮ್ ಅನ್ನು ಉಚಿತವಾಗಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ರಾಮು ಕಿಣಿಯವರು ತಮ್ಮ ಶಿಷ್ಯ ಪ್ರಗತಿ ಪರ ರೈತ ಸಂಘ ಕರ್ನಾಟಕದ ರಾಜ್ಯಾಧ್ಯಕ್ಷ ಲಕ್ಷ್ಮಣ ಜಿ. ನಾಯ್ಕ ಇವರನ್ನು ಶಾಲು ಹೊದೆಸಿ ಸ್ಮರಣಿಕೆಗಳನಿತ್ತು ಸನ್ಮಾನಿಸಿದರು. ಪ್ರಗತಿ ಪರ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಸಂಜಯ ಭಟ್, ಸಂಘಟನೆಯ ನಿರ್ದೇಶಕ ವೆಂಕಟರಮಣ ಭಟ್, ಸಾವಿತ್ರಿ ಆರ್ ಹೆಗಡೆ, ನಾಗರಾಜ್ ಶುಂಠಿ, ಸಂತೋಷ್ ಭಟ್, ಸತೀಶ ಮಡಿವಾಳ, ರಮೇಶ್ ಮುರಾರಿ, ಹುಲೇಕಲ್ ಗ್ರಾ.ಪಂ. ಸದಸ್ಯ ಖಾಸೀಂ ಸಾಬ್ ಉಪಸ್ಥಿತರಿದ್ದರು. ಪದ್ಮನಾಭ ಆರೇಕಟ್ಟ ನಿರ್ವಹಿಸಿದರು.