ಶಿರಸಿ: ಅಯೋಧ್ಯೆಯಲ್ಲಿ ಶ್ರೀರಾಮಚಂದ್ರ ದೇವರ ಪ್ರತಿಷ್ಠಾಪನೆ ಸಂಭ್ರಮದ ಹಿನ್ನಲೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿಶೇಷ ಪೂಜೆ, ಅನ್ನದಾನ ಸೇವೆಗಳು ನಡೆದವು.
ನಗರದ ನಿತ್ಯಾನಂದ ಮಠದಲ್ಲಿ ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ದಂಪತಿ ನೇತೃತ್ವದಲ್ಲಿ ಶ್ರೀರಾಮ ಸೇವಾ ಸಮಿತಿ ಉತ್ಸವವಾಗಿ ಆಚರಿಸಿದ್ದು, ಮುಂಜಾನೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಶ್ರೀರಾಮ ತಾರಕ ಹವನ ಕೂಡ ನಡೆಸಲಾಯಿತು.
ಹೆಬ್ಬಾರ್ ದಂಪತಿಗಳು ಹತ್ತು ಸಾವಿರಕ್ಕೂ ಅಧಿಕ ರಾಮ ಭಕ್ತರಿಗೆ ಊಟೋಪಚಾರ ವ್ಯವಸ್ಥೆ ಹಿನ್ನಲೆ ಪ್ರಸಾದಕ್ಕೂ ಪೂಜೆ ಸಲ್ಲಿಸಿದರು.
ತಾಲೂಕಿನ ಕೊಳಗಿಬೀಸ್ ನಲ್ಲಿ ರಾಮತಾರಕ ಜಪ ಹವನ ಪೂರ್ಣವಾಗಿದ್ದು, ಸ್ವರ್ಣವಲ್ಲೀಯಲ್ಲಿ ಅಹೋರಾತ್ರಿ ಶ್ರೀರಾಮ ಭಕ್ತಿ ಜಾಗರಣಕ್ಕೆ ಸ್ವರ್ಣವಲ್ಲಿ ಶ್ರೀಗಳು ಚಾಲನೆ ನೀಡಿದ್ದಾರೆ. ನಗರ-ಗ್ರಾಮೀಣ ಎನ್ನದೇ ಭಗವಾಧ್ವಜ ಹಾರಾಟ ಆಗುತ್ತಿದೆ. ಶ್ರೀರಾಮನ ಭಾವಚಿತ್ರಕ್ಕೆ ನಮಿಸಿ ಪೂಜಿಸುತ್ತಿರುವುದು ಕಂಡು ಬಂತು.
ಶಾಸಕ ಭೀಮಣ್ಣ ನಾಯ್ಕ ನಗರದ ದೇವಾಲಯಗಳಿಗೆ ತೆರಳಿ ಪೂಜಿಸಿ, ಸಿಹಿ ಹಂಚಿದರು. ಹೋರಾಟಗಾರ ಅನಂತಮೂರ್ತಿ ಹೆಗಡೆ ಬೃಹತ್ ಊದಿನ ಕಡ್ಡಿ ಬೆಳಗಿದರು.