ಶಿರಸಿ: ಶಿರಸಿ ಸಿದ್ದಾಪುರ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವೆಂಕಟೇಶ ಹೆಗಡೆ ಹೊಸಬಾಳೆ ನಾಮಪತ್ರ ವಾಪಸ್ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸಮಕ್ಷಮ ಸಮಾಲೋಚಿಸಿ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರೊಂದಿಗೆ ಫೋನಿನಲ್ಲಿ ಮಾತಾಡಿದ ಬಳಿಕ ಈ ತೀರ್ಮಾನಕ್ಕೆ ಬಂದಿದ್ದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೂ, ನನ್ನ ಮಾರ್ಗದರ್ಶಕರೂ ಆದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಅವರ ಸೂಚನೆಯ ಮೇರೆಗೆ, ಪಕ್ಷದ ಆದೇಶ ಪಾಲಿಸಲು, ಕಾಂಗ್ರೆಸ್ಸಿನ ಶಿಸ್ತಿನ ಕಾರ್ಯಕರ್ತನಾಗಿ ಶಿರಸಿ-ಸಿದ್ದಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಸಲ್ಲಿಸಿದ್ದ ನನ್ನ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಶಿರಸಿ-ಸಿದ್ದಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಭೀಮಣ್ಣ ನಾಯಕ ಅವರಿಗೆ ನನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತಿದ್ದೇನೆ ಎಂದೂ ಘೋಷಿಸಿ, ಪಕ್ಷದ ಅಭ್ಯರ್ಥಿ ಗೆಲುವಿಗೆ ಅವಿಶ್ರಾಂತವಾಗಿ ಶ್ರಮಿಸುವುದಾಗಿ ಪ್ರಕಟಿಸಿದರು.
ಇಷ್ಟು ದಿನ ನನ್ನ ಬೆಂಬಲಕ್ಕೆ ನಿಂತ ನನ್ನೆಲ್ಲ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು, ಆಪ್ತ ಮಿತ್ರರು, ಸಮಾಜದ ಎಲ್ಲ ವರ್ಗದ ನಾಯಕರು, ಕಾರ್ಯಕರ್ತರು, ಶಿರಸಿ – ಸಿದ್ದಾಪುರ ಕ್ಷೇತ್ರದ ಯಾವತ್ತೂ ಗಣ್ಯಮಾನ್ಯ ನಾಗರಿಕರಿಗೆ ನಮನಗಳನ್ನು ಅರ್ಪಿಸುವದಾಗಿಯೂ ತಿಳಿಸಿದ್ದಾರೆ.
ಭೀಮಣ್ಣ ನಾಯಕ ಅವರನ್ನು ಗೆಲ್ಲಿಸುವ ಮೂಲಕ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುವ ಅಗತ್ಯವಿದೆ ಎಂದೂ ಮನವಿ ಮಾಡಿದ್ದಾರೆ.
ಹಿರಿಯರ ಮಾತಿಗೆ ಗೌರವ ನೀಡಿ, ನಾಮಪತ್ರ ವಾಪಸ್ ಪಡೆದು ಅಭ್ಯರ್ಥಿ ಭೀಮಣ್ಣಗೆ ಬೆಂಬಲಿಸಲಿದ್ದೇನೆ.
– ವೆಂಕಟೇಶ ಹೆಗಡೆ ಹೊಸಬಾಳೆ, ಕಾಂಗ್ರೆಸ್ಸಿಗ